
ನವದೆಹಲಿ(ಮೇ 02): ನಿನ್ನೆ ಭಾರತದ ಗಡಿಭಾಗದೊಳಗೆ ನುಗ್ಗಿ ಇಬ್ಬರು ಯೋಧರ ತಲೆಕಡಿದಿರುವ ಪಾಕಿಸ್ತಾನ ನಿರೀಕ್ಷೆಯಂತೇ ಉಲ್ಟಾ ಹೇಳಿಕೆ ನೀಡಿ ಘಟನೆಯನ್ನು ನಿರಾಕರಿಸಿದೆ. ತಮ್ಮದು ವಿಶ್ವದಲ್ಲೇ ಸಭ್ಯ ಸೇನೆ, ತಾನು ತಲೆಕಡಿಯುವಂಥ ಹೇಯ ಕೃತ್ಯ ಎಸಗೋದಿಲ್ಲ. ಇದೆಲ್ಲಾ ಭಾರತದ ಚಿತಾವಣೆಯೇ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.
ಭಾರತ ಆರೋಪಿಸಿರುವಂತೆ ಪಾಕಿಸ್ತಾನದಲ್ಲಿ ಬಾರ್ಡರ್ ಆ್ಯಕ್ಷನ್ ಟೀಮ್ ಎಂಬ ತಂಡವೊಂದು ಅಸ್ತಿತ್ವದಲ್ಲೇ ಇಲ್ಲ. ತನ್ನ ಆಂತರಿಕ ರಾಜಕೀಯದಲ್ಲಿ ಉದ್ರೇಕಕಾರಿ ಸ್ಥಿತಿ ನಿರ್ಮಾಣ ಮಾಡುವ ದುರುದ್ದೇಶದಿಂದ ಭಾರತ ಇಂಥ ಆರೋಪ ಮಾಡುತ್ತಿದೆ ಎಂದು ಪಾಕ್ ಸೇನೆ ಹೇಳಿದೆ ನೀಡಿರುವುದು ಪಾಕ್ ಮಾಧ್ಯಮಗಳಲ್ಲಿ ವರದಿಯಾಗಿದೆ.
"ಭಾರತದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಕಾಶ್ಮೀರದ ಸಮಸ್ಯೆಯನ್ನು ಕಡೆಗಣಿಸಲು ಮತ್ತು ಪಾಕ್ ಸೇನೆಯ ಖ್ಯಾತಿಗೆ ಮಸಿ ಬಳಿಯುವುದು ಅದರ ಉದ್ದೇಶ" ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಫ್ ಖವಾಜ ಟ್ವೀಟ್ ಮಾಡಿದ್ದಾರೆ.
ಭಾರತ ವಿಫಲವಾಗುತ್ತಿರುವ ರಾಷ್ಟ್ರ. ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ಪಾಕಿಸ್ತಾನದ ಮೇಲೆ ಸುಳ್ಳು ಪ್ರಚಾರ ಸೃಷ್ಟಿಸುತ್ತಿದೆ ಎಂಬಂತಹ ಮಾತುಗಳು ಪಾಕಿಸ್ತಾನದ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಕ್ತವಾಗುತ್ತಿವೆ.
ಕಾಶ್ಮೀರದ ಉಗ್ರಗಾಮಿಗಳನ್ನು ಪಾಕ್ ಮಾಧ್ಯಮಗಳು ತಮ್ಮ ವರದಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರೆಂದು ಬಣ್ಣಿಸುತ್ತಿರುವುದೂ ವೇದ್ಯವಾಗಿದೆ. ಬ್ಯಾಂಕ್ ಮೇಲೆ ದಾಳಿ ನಡೆಸಿ ಪೊಲೀಸರೂ ಸೇರಿದಂತೆ 7 ಮಂದಿಯನ್ನು ಹತ್ಯೆಗೈದ ಉಗ್ರಗಾಮಿಗಳನ್ನು ಪಾಕ್ ಮಾಧ್ಯಮಗಳು ಫ್ರೀಡಂ ಫೈಟರ್ಸ್ ಎಂದು ಸಂಬೋಧಿಸಿದೆ. ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಾಹಿದಿನ್ ಅನ್ನು ಸ್ವಾತಂತ್ರ್ಯ ಹೋರಾಟಗಾರರ ಗುಂಪು ಎಂದು ಕರೆಯುತ್ತಿದೆ. ಕಾಶ್ಮೀರದಲ್ಲಿ ಭಾರತ ವಿರೋಧಿ ಭಾವನೆ ತೀರಾ ದಟ್ಟವಾಗಿದ್ದು, ಬಹುತೇಕ ಜನರು ಪಾಕ್ ಜೊತೆ ವಿಲೀನಗೊಳ್ಳಲು ಅಥವಾ ಸ್ವಾತಂತ್ರ್ಯ ಪಡೆಯಲು ಬಯಸಿದ್ದಾರೆ ಎಂದೂ ಮಾಧ್ಯಮಗಳು ವರ್ಣಿಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.