
ಬೆಂಗಳೂರು : ದೇಶದ ಹೆಮ್ಮೆಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇಸ್ಫೋಸಿಸ್ ಪ್ರತಿಷ್ಠಾನ ನಗರದ ಕೋನಪ್ಪನ ಅಗ್ರಹಾರದಲ್ಲಿ ಮೆಟ್ರೋ ಹಳಿ ಮತ್ತು ಸ್ಟೇಷನ್ ಕಾಮಗಾರಿಗೆ 200 ಕೋಟಿ ರು. ದೇಣಿಗೆ ನೀಡುವುದಾಗಿ ಘೋಷಿಸಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಸ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರೊಂದಿಗೆ ಶನಿವಾರ ನಗರದ ಮೂಲಸೌಕರ್ಯ ಕುರಿತು ಚರ್ಚೆಸಿದ ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಸಮಾಜಮುಖಿ ಕಾರ್ಯಗಳ ಮೂಲಕ ಇಸ್ಫೋಸಿಸ್ ಫೌಂಡೇಷನ್ ಇನ್ನಿತರ ಖಾಸಗಿ ಕಂಪನಿಗಳಿಗೆ ಮಾದರಿಯಾಗಿದೆ. ರಾಜ್ಯಕ್ಕೆ ನಾರಾಯಣಮೂರ್ತಿ ಕುಟುಂಬದ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೆಟ್ರೋ ನಿಲ್ದಾಣವನ್ನು ಫೌಂಡೇಷನ್ ವತಿಯಿಂದ ನಿರ್ಮಾಣ ಮಾಡಲಾಗುವುದು. ಜು.19ರಂದು ವಿಧಾನಸೌಧದಲ್ಲಿ ಬಿಎಂಆರ್‌ಸಿಎಲ್ ಮತ್ತು ಇಸ್ಫೋಸಿಸ್ ಫೌಂಡೇಷನ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಇತರೆ ಕಾರ್ಪೊರೇಟ್ ಕಂಪನಿಗಳಿಗೆ ಮಾದರಿಯಾಗುವ ರೀತಿಯಲ್ಲಿ ಸುಧಾಮೂರ್ತಿ ಅವರು ನಡೆದುಕೊಂಡಿದ್ದು, ಅವರ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು.
ಇಸ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ಹಣ ಸಂಪಾದನೆ ಪ್ರತಿಯೊಬ್ಬರಿಗೂ ಮುಖ್ಯ. ಆದರೆ, ಗಳಿಸಿರುವ ಹಣದಲ್ಲಿ ಸ್ಪಲ್ಪ ಭಾಗ ಸಾರ್ವಜನಿಕರಿಗೆ ಸದುಪಯೋಗವಾಗಬೇಕು. ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂಬುದು ನಮ್ಮ ಉದ್ದೇಶವಾಗಿದೆ. ಸಮಾಜದ ಅಭಿವೃದ್ಧಿಗಾಗಿ ಫೌಂಡೇಷನ್ ವತಿಯಿಂದ ಹಲವು ಕೊಡುಗೆಗಳನ್ನು ನೀಡುವ ಕೆಲಸಗಳನ್ನು ಮಾಡಲಾಗುತ್ತಿದೆ. ಅದರಲ್ಲಿ ಮೆಟ್ರೋ ಕಾಮಗಾರಿಗಾಗಿ ನೀಡುತ್ತಿರುವುದು ಒಂದು ಭಾಗ ಮಾತ್ರ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಮ್ಮ ಕಡೆಯಿಂದ ಎಷ್ಟುಆಗುತ್ತೋ ಅಷ್ಟುಸಹಕಾರ ಕೊಡುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.