
ಬೆಂಗಳೂರು : ರಾಜ್ಯದ 30 ಜಿಲ್ಲೆಯ ಜಿಲ್ಲಾಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಒಂದು ದಿನ ಮೀಸಲಿಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಜನತಾದರ್ಶನ ನಡೆಸಿ ಮಾತನಾಡಿದ ಅವರು, ನೂರಾರು ಕಿ.ಮೀ. ದೂರದಿಂದ ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಮುಖ್ಯಮಂತ್ರಿಗಳ ಕಚೇರಿಗೆ ಆಗಮಿಸುತ್ತಾರೆ. ಸಾಲ ಮಾಡಿ ಸಾವಿರಾರು ರು. ಖರ್ಚು ಮಾಡಿಕೊಂಡು ಬೆಂಗಳೂರಿಗೆ ಆಗಮಿಸುತ್ತಾರೆ. ಇದನ್ನು ತಪ್ಪಿಸಲು ರಾಜ್ಯದ 30 ಜಿಲ್ಲೆಯ ಜಿಲ್ಲಾಧಿಕಾರಿಗಳು ಜನರ ಸಮಸ್ಯೆಗಳನ್ನು ಆಲಿಸುವಂತೆ ಸೂಚನೆ ನೀಡಲಾಗುವುದು. ಸಮಸ್ಯೆ ಆಲಿಸಿ ಅಲ್ಲಿಯೇ ಬಗೆಹರಿಸಬೇಕು. ಇದಕ್ಕಾಗಿ ಒಂದು ದಿನ ಮೀಸಲಿಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ನಡೆಸುವ ಜನತಾದರ್ಶನದ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದುಕೊಳ್ಳಲಾಗುವುದು. ಒಂದು ವೇಳೆ ಜಿಲ್ಲಾಧಿಕಾರಿಗಳಿಂದ ಬಗೆಹರಿಯದ ಸಮಸ್ಯೆಗಳಿದ್ದಲ್ಲಿ ಮಾತ್ರ ಬೆಂಗಳೂರಿಗೆ ಕಳುಹಿಸಿಕೊಡಬೇಕು. ಇದರ ಜತೆಗೆ ಸರ್ಕಾರ ಹಿರಿಯ ಅಧಿಕಾರಿಗಳಿಗೆ ಒಂದೊಂದು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಅವರು ತಿಂಗಳಲ್ಲಿ ಒಂದು ದಿನ ಕಡ್ಡಾಯವಾಗಿ ಬೆಳಗ್ಗೆಯಿಂದ ರಾತ್ರಿಯವರೆಗೆ ಸ್ಥಳದಲ್ಲಿಯೇ ಇದ್ದು, ಜನರ ಸಮಸ್ಯೆಗಳ ಕುರಿತು ಪಟ್ಟಿಮಾಡಬೇಕು. ಅದನ್ನು ಮುಖ್ಯಕಾರ್ಯದರ್ಶಿ ಮೂಲಕ ತಮಗೆ ತಲುಪಿಸಬೇಕು. ಆಡಳಿತದಲ್ಲಿ ಅಧಿಕಾರಿಗಳು ಜನರಿಗೆ ಲಭಿಸಬೇಕು ಎಂದರು.
250 ಮಂದಿಗೆ ಉದ್ಯೋಗ: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಪ್ರತ್ಯೇಕವಾದ ವಿಭಾಗವನ್ನು ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 250 ಯುವಜನಾಂಗದ ಮಾಹಿತಿ ಪಡೆದುಕೊಂಡಿದ್ದು, ಹಲವು ಖಾಸಗಿ ಕಂಪನಿಯಲ್ಲಿ ಉದ್ಯೋಗ ಕಲ್ಪಿಸಲಾಗಿದೆ. ಈ ಸಂಬಂಧ ಖಾಸಗಿ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಂಬಂಧ ಪ್ರತ್ಯೇಕ ತಂಡವೊಂದು ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.