ಗೌರಿ ಕೇಸ್: ತನಿಖಾಧಿಕಾರಿಗಳ ಮುಂದೆ ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್

By Suvarna Web DeskFirst Published Sep 13, 2017, 7:04 PM IST
Highlights

ರಿವಾಲ್ವರ್ ವಿಚಾರವು ಸದ್ಯಕ್ಕೆ ಎಸ್'ಐಟಿಯ ವಿಚಾರಣೆಯಲ್ಲಿ ಪ್ರಮುಖ ಅಂಶವಾಗಿತ್ತು. ರಿವಾಲ್ವರ್'ಗೆ ಲೈಸೆನ್ಸ್ ಇದೆಯಾ? ಯಾಕೆ ಬೆದರಿಕೆ ಹಾಕಿದ್ದು? ಇತ್ಯಾದಿ ಪ್ರಶ್ನೆಗಳು ಇಂದ್ರಜಿತ್'ಗೆ ಕೇಳಲ್ಪಟ್ಟವೆನ್ನಲಾಗಿದೆ. ತನಗೆ ಗನ್ ಲೈಸೆನ್ಸ್ ಇಲ್ಲವೆಂದು ಹೇಳಿದ ಇಂದ್ರಜಿತ್ ಲಂಕೇಶ್ ಕಣ್ಣಂಚಲ್ಲಿ ನೀರು ಜಿನುಗುತ್ತದೆ.

ಬೆಂಗಳೂರು(ಸೆ. 13): ಪ್ರಗತಿಪರ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಎಸ್'ಐಟಿ ತಂಡ ಇಂದು ಬೆಳಗ್ಗೆಯಿಂದಲೂ ಲಂಕೇಶ್ ಕುಟುಂಬದ ಸದಸ್ಯರ ವಿಚಾರಣೆ ನಡೆಸಿದೆ. ಗೌರಿ ತಾಯಿ ಇಂದಿರಾ ಹಾಗೂ ಸೋದರ-ಸೋದರಿಯರಾದ ಕವಿತಾ ಹಾಗೂ ಇಂದ್ರಜಿತ್ ಲಂಕೇಶ್ ಅವರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಎಸಿಪಿ ರವಿಕುಮಾರ್ ನೇತೃತ್ವದ ಎಸ್'ಐಟಿ ತಂಡದ ಮುಂದೆ ಇಂದ್ರಜಿತ್ ಲಂಕೇಶ್ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.

ಯಾಕೆ ಕಣ್ಣೀರು?
ಪಿ.ಲಂಕೇಶ್ ನಿಧನದ ಹಿನ್ನೆಲೆಯಲ್ಲಿ ಲಂಕೇಶ್ ಪತ್ರಿಕೆಯ ಒಡೆತನದ ವಿವಾದವು ಕುಟುಂಬವನ್ನು ಮುತ್ತಿಕೊಂಡಿತು. 2005ರಲ್ಲಿ ಲಂಕೇಶ್ ಮಕ್ಕಳಾದ ಗೌರಿ ಮತ್ತು ಇಂದ್ರಜಿತ್ ನಡುವೆ ಈ ವಿಚಾರವಾಗಿ ಕಲಹ ಉಂಟಾಯಿತು. ಅವರಿಬ್ಬರು ಪರಸ್ಪರ ದೂರು ದಾಖಲು ಮಾಡಿದರು. ಕಚೇರಿಯಿಂದ ಕಂಪ್ಯೂಟರು, ಸ್ಕ್ಯಾನರು, ಪ್ರಿಂಟರು ಮೊದಲಾದವನ್ನು ಗೌರಿ ಕದ್ದಿದ್ದಾರೆಂದು ಇಂದ್ರಜಿತ್ ದೂರು ನೀಡುತ್ತಾರೆ. ಸೋದರ ಇಂದ್ರಜಿತ್ ರಿವಾಲ್ವರ್'ನಿಂದ ಬೆದರಿಕೆ ಹಾಕಿದನೆಂದು ಗೌರಿ ದೂರು ಕೊಡುತ್ತಾರೆ.

ಈ ರಿವಾಲ್ವರ್ ವಿಚಾರವು ಸದ್ಯಕ್ಕೆ ಎಸ್'ಐಟಿಯ ವಿಚಾರಣೆಯಲ್ಲಿ ಪ್ರಮುಖ ಅಂಶವಾಗಿತ್ತು. ರಿವಾಲ್ವರ್'ಗೆ ಲೈಸೆನ್ಸ್ ಇದೆಯಾ? ಯಾಕೆ ಬೆದರಿಕೆ ಹಾಕಿದ್ದು? ಇತ್ಯಾದಿ ಪ್ರಶ್ನೆಗಳು ಇಂದ್ರಜಿತ್'ಗೆ ಕೇಳಲ್ಪಟ್ಟವೆನ್ನಲಾಗಿದೆ. ತನಗೆ ಗನ್ ಲೈಸೆನ್ಸ್ ಇಲ್ಲವೆಂದು ಹೇಳಿದ ಇಂದ್ರಜಿತ್ ಲಂಕೇಶ್ ಕಣ್ಣಂಚಲ್ಲಿ ನೀರು ಜಿನುಗುತ್ತದೆ.

ಸೆ. 5ರಂದು ಗೌರಿ ಲಂಕೇಶ್ ಅವರು ತಮ್ಮ ನಿವಾಸದೆದುರು ಹತ್ಯೆಯಾಗಿದ್ದರು. ಬಲಪಂಥೀಯ ಚಿಂತನೆಗಳ ವಿರುದ್ಧ ತಮ್ಮ ಲೇಖನಗಳ ಮೂಲಕ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದ ಗೌರಿ ಹತ್ಯೆಯಲ್ಲಿ ಬಲಪಂಥೀಯ ಗುಂಪೊಂದರ ಕೈವಾಡ ಇರಬಹುದೆಂಬ ಶಂಕೆ ಹೆಚ್ಚಾಗಿದೆ. ಜೊತೆಗೆ, ನಕ್ಸಲರನ್ನು ಹೋರಾಟದಿಂದ ಹಿಂದೆ ಸರಿದು ಸಮಾಜದ ಮುಖ್ಯವಾಹಿನಿಗೆ ಕರೆತರಲು ಗೌರಿ ಸಾಕಷ್ಟು ಕೆಲಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆಲ ನಕ್ಸಲ್ ಗುಂಪುಗಳೂ ಗೌರಿ ವಿರುದ್ಧ ಮುನಿಸಿಕೊಂಡಿದ್ದವೆಂಬ ಮಾತಿದೆ. ಇದರ ಜೊತೆಗೆ, ಕೌಟುಂಬಿಕ ವಿವಾದವೂ ಇತ್ತು. ಈ ಎಲ್ಲಾ ಆಯಾಮಗಳಲ್ಲಿ ಎಸ್'ಐಟಿ ತನಿಖೆ ನಡೆಸುತ್ತಿದೆ.

click me!