
ಬೆಂಗಳೂರು(ಆ.19): ಅಡುಗೆ ಮನೆಗಳನ್ನೇ ಸಿದ್ಧಮಾಡಿಕೊಳ್ಳದೆ ತರಾತುರಿಯಲ್ಲಿ ‘ಇಂದಿರಾ ಕ್ಯಾಂಟೀನ್’ ಯೋಜನೆ ಆರಂಭಿಸಿದ್ದರಿಂದ ಸರ್ಕಾರ ಮುಜುಗರ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಇಂದಿರಾ ಕ್ಯಾಂಟೀನ್ಗಳಿಗೆ ಅಗತ್ಯ ಅಡುಗೆ ತಯಾರಿಸಲು ನಗರದ ವಿವಿಧೆಡೆ 23 ಅತ್ಯಾಧುನಿಕ ಅಡುಗೆ ಮನೆಗಳನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದ್ದ ಸರ್ಕಾರ, ಈ ಯೋಜನೆ ಉದ್ಘಾಟನೆ ದಿನದಂದು 6 ಅಡುಗೆ ಮನೆಗಳು ನಿರ್ಮಾಣ ಪೂರ್ಣಗೊಂಡಿವೆ. ಆಹಾರ ತಯಾರಿಕೆಗೆ ಟೆಂಡರ್ ಪಡೆದಿರುವ ಕಂಪನಿಗಳು ಈ ಅಡುಗೆ ಮನೆಗಳಿಂದ ಊಟ, ತಿಂಡಿ ತಯಾರಿಸಿ ಇಂದಿರಾ ಕ್ಯಾಂಟೀನ್'ಗಳಿಗೆ ಸರಬರಾಜು ಮಾಡುತ್ತವೆ ಎಂದು ಹೇಳಿತ್ತು. ಆದರೆ, ಯೋಜನೆ ಆರಂಭಗೊಂಡು ಮೂರು ದಿನವಾದರೂ ಎಲ್ಲಿಯೂ ಅಡುಗೆ ಮನೆ ಸಿದ್ಧವಾಗಿಲ್ಲ.
ಹೀಗಾಗಿ ಉಪ ಗುತ್ತಿಗೆ ನೀಡಿ ನೈರ್ಮಲ್ಯ ಪರಿಸರದಲ್ಲಿ ಅಡುಗೆ ಸಿದ್ಧ ಮಾಡಿ ಇಂದಿರಾ ಕ್ಯಾಂಟಿನ್ಗಳಿಗೆ ಪೂರೈಸುತ್ತಿರುವುದು ಗೋಚರಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆ ಎದುರಾಗಿದೆ. ಈ ಯೋಜನೆ ಆರಂಭಕ್ಕೆ ಅಧಿಕಾರಿಗಳಿಗೆ ಕೇವಲ 60 ದಿನಗಳ ಡೆಡ್ಲೈನ್ ನೀಡಿ ಇಂದಿರಾ ಕ್ಯಾಂಟೀನ್ಗಳನ್ನು ಉದ್ಘಾಟಿಸಲು ಸರ್ಕಾರ ಹೊರಟಿದ್ದೇ ಈ ಎಲ್ಲಾ ಎಡವಟ್ಟಿನ ಮೂಲ ಎನ್ನಲಾಗಿದೆ.
ಯೋಜನೆಯ ಉದ್ಘಾಟನೆ ನಂತರದ ಎರಡನೇ ದಿನವಾದ ಶುಕ್ರವಾರ ಇಂದಿರಾ ಕ್ಯಾಂಟೀನ್ಗಳಿಗೆ ಆಹಾರ ಪೂರೈಸಲು ನಗ ರದ ಅರಮನೆ ಮೈದಾನದ ವೈಟ್ ಪೆಟಲ್ಸ್'ನಲ್ಲಿ ಬೃಹತ್ ಪ್ರಮಾಣದಲ್ಲಿ ಊಟ, ತಿಂಡಿ ತಯಾರಿಸಿ ಸರಬರಾಜು ಮಾಡಲಾಗುತ್ತಿದೆ. ಆದರೆ, ಈ ರೀತಿ ಅಡುಗೆ ತಯಾರಿಸುವುದು ಟೆಂಡರ್ ನಿಯಮಗಳ ಸಂಪೂರ್ಣ ಉಲ್ಲಂಘನೆ ಎಂಬ ಆರೋಪ ಕೇಳಿ ಬಂದಿದೆ.
ಮೊಸರಲ್ಲಿ ಕಲ್ಲು ಹುಡುಕಬೇಡಿ:
ಈ ಬಗ್ಗೆ ‘ಕನ್ನಡಪ್ರಭ'ದೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಎಲ್ಲವೂ ಟೆಂಡರ್ ನಿಯಮಾವಳಿ, ಗುಣಮಟ್ಟದ ಮಾನದಂಡಗಳ ಅನುಸಾರವೇ ನಡೆಯುತ್ತಿದೆ ಎಂದು ಸಮರ್ಥಿಸಿ ಕೊಂಡಿದ್ದಾರೆ. ಇಲ್ಲಿ ಎಲ್ಲಾ ನಿಯಮಾವಳಿ ಅನುಸರಿಸಿಯೇ ಆಹಾರ ತಯಾರು ಮಾಡಿ ಸರಬರಾಜು ಮಾಡಲಾಗುತ್ತಿದೆ. ಕಡಿಮೆ ಹಣದಲ್ಲಿ ಬಡವರಿಗೆ ಗುಣಮಟ್ಟದ ಊಟ ನೀಡುವುದು ಯೋಜನೆಯ ಉದ್ದೇಶ, ಅದನ್ನು ಮಾಡಲಾಗುತ್ತಿದೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಯಾರೂ ಕೂಡ ಮಾಡಬಾರದು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.