
ನವದೆಹಲಿ(ಜ.05): ಒಂದು ಕಡೆ ನೋಟುಗಳ ಅಮಾನ್ಯದಿಂದಾಗಿ ಕಪ್ಪುಹಣವು ಆರ್ಥಿಕತೆಗೆ ವಾಪಸ್ ಬಂದು, ದೀರ್ಘಕಾಲದಲ್ಲಿ ದೇಶಕ್ಕೆ ನೆರವಾಗಲಿದೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದರೆ, ಇನ್ನೊಂದೆಡೆ, ನೋಟು ಅಮಾನ್ಯ ನೀತಿಯೆಂಬುದು ಸಂಪೂರ್ಣ ವಿಫಲವಾಗಿದೆ ಎಂದು ಬ್ಲೂಮ್'ಬರ್ಗ್ ವರದಿ ತಿಳಿಸಿದೆ.
ಸರ್ಕಾರವು ಕಳೆದ ನ.8ರಂದು ಅಮಾನ್ಯವೆಂದು ಘೋಷಿಸಿದ ನೋಟುಗಳ ಪೈಕಿ ಶೇ.97ರಷ್ಟು ಬ್ಯಾಂಕುಗಳಿಗೆ ವಾಪಸ್ ಬಂದಿವೆ. ಅಂದರೆ, ಸರ್ಕಾರದ ನೀತಿಯು ಕಪ್ಪುಹಣವನ್ನು ಪತ್ತೆಹಚ್ಚುವಲ್ಲಿ ಅಥವಾ ನಾಶ ಮಾಡುವಲ್ಲಿ ವಿಫಲವಾಗಿದೆ ಎಂದು ಬ್ಲೂಮ್'ಬರ್ಗ್ ವರದಿ ವಿಶ್ಲೇಷಿಸಿದೆ. ದೇಶದ ಬ್ಯಾಂಕುಗಳಲ್ಲಿ ಡಿ.30ರವರೆಗೆ ₹14.97 ಲಕ್ಷಕೋಟಿ(220 ಶತಕೋಟಿ ಡಾಲರ್) ನಗದು ಸಂಗ್ರಹವಾಗಿದೆ ಎಂದು ಬ್ಯಾಂಕುಗಳ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಸರ್ಕಾರಕ್ಕೆ ಹಿನ್ನಡೆ:
ಶೇ.97ರಷ್ಟು ನೋಟುಗಳು ವಾಪಸ್ ಬಂದಿರುವುದು ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಏಕೆಂದರೆ, ನೋಟು ಅಮಾನ್ಯ ನೀತಿ ಘೋಷಿಸುವ ಮುನ್ನ ಸರ್ಕಾರವು ಸುಮಾರು ₹4 ರಿಂದ ₹5ಲಕ್ಷ ಕೋಟಿ ಮೌಲ್ಯದ ನೋಟುಗಳು ಬ್ಯಾಂಕುಗಳಿಗೆ ವಾಪಸ್ ಬರುವುದೇ ಇಲ್ಲ ಎಂದು ಅಂದಾಜಿಸಿತ್ತು. ಆದರೆ, ಚಲಾವಣೆಯಲ್ಲಿದ್ದ ₹15.4 ಲಕ್ಷಕೋಟಿಯಲ್ಲಿ ಶೇ.97ರಷ್ಟು ನೋಟುಗಳು ವಾಪಸ್ ಬಂದಿದ್ದು, ಕಪ್ಪುಹಣ ಪತ್ತೆಹಚ್ಚುವಲ್ಲಿ ಹಾಗೂ ನಾಶಮಾಡುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ಪ್ರತಿಬಿಂಬಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ.
ಗೊತ್ತಿಲ್ಲ ಎಂದ ಜೇಟ್ಲಿ:
ಬ್ಲೂಮ್'ಬರ್ಗ್ ವರದಿಯಲ್ಲಿರುವ ಅಂದಾಜು ಮೊತ್ತ ನಿಜವೇ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಪ್ರಶ್ನಿಸಿದಾಗ ಅವರು, ‘‘ನನಗೆ ಗೊತ್ತಿಲ್ಲ’’ ಎಂದಷ್ಟೇ ಉತ್ತರಿಸಿದ್ದಾರೆ ಎಂದು ಎನ್'ಡಿಟಿವಿ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.