
ಜಮ್ಮು/ಇಸ್ಲಾಮಾಬಾದ್(ಮೇ.01): ಮತ್ತೊಮ್ಮೆ ಕ್ರೂರತನ ಮೆರೆದಿರುವ ಪಾಕಿಸ್ತಾನ, ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಇಬ್ಬರು ಭಾರತೀಯ ಯೋಧರನ್ನು ಕೊಂದು, ಶಿರಚ್ಛೇದ ಮಾಡುವ ಮೂಲಕ ಅಟ್ಟಹಾಸ ಮೆರೆದಿದೆ.
ಪಾಕಿಸ್ತಾನಿ ಯೋಧರು ಹಾಗೂ ಭಯೋತ್ಪಾದಕರನ್ನು ಒಳಗೊಂಡ ‘ಬಾರ್ಡರ್ ಆ್ಯಕ್ಷನ್ ಟೀಮ್’ (ಬ್ಯಾಟ್), ಭಾರತೀಯ ನೆಲದೊಳಕ್ಕೆ 250 ಮೀಟರ್‌ನಷ್ಟು ನುಗ್ಗಿ ಈ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಭಾರತ ಕೂಡ ಸೇಡಿನ ದಾಳಿ ಆರಂಭಿಸಿದ್ದು, ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ ಎರಡು ಬಂಕರ್‌ಗಳನ್ನು ಭಾರತ ನಾಶ ಪಡಿಸಿದೆ. 7 ಪಾಕಿಸ್ತಾನ ಯೋಧರನ್ನು ಭಾರತದ ಸೇನೆ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ. ಭಾರತ ಸರ್ಕಾರವು ಭಾರತೀಯ ಸೇನೆಗೆ ಪಾಕ್ ಮೇಲೆ ದಾಳಿ ಮಾಡಲು ‘ಫ್ರೀ ಹ್ಯಾಂಡ್’ (ಮುಕ್ತ ಅಕಾರ) ನೀಡಿದೆ ಎಂದು ವರದಿಗಳು ಹೇಳಿವೆ.
ಪಾಕ್ ಕೃತ್ಯ ಕ್ರೂರತನದ ಪರವಾವಧಿ. ನಾವು ಇದಕ್ಕೆ ಸೂಕ್ತ ರೀತಿಯ ಪ್ರತೀಕಾರ ಕೈಗೊಳ್ಳುತ್ತೇವೆ’ ಎಂದು ಭಾರತದ ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಆದರೆ ಪಾಕಿಸ್ತಾನ ಮಾತ್ರ ಎಂದಿನಂತೆ ತಾನು ಈ ಕೃತ್ಯ ಎಸಗೇ ಇಲ್ಲ. ಕದನವಿರಾಮ ಉಲ್ಲಂಘನೆಯನ್ನೂ ಮಾಡಿಲ್ಲ. ಯುದ್ಧ ನಿಯಮಗಳಿಗೆ ತಾನು ಬದ್ಧ ಎಂದು ಹೇಳಿಕೊಂಡಿದೆ.
ಭಾರತೀಯ ನೌಕಾಪಡೆಯ ಮಾಜಿ ಅಕಾರಿ ಕುಲಭೂಷಣ ಜಾಧವ್‌ರನ್ನು ಗೂಢಚಾರ ಎಂದು ಸುಳ್ಳಾಗಿ ಬಿಂಬಿಸಿ ಗಲ್ಲು ಶಿಕ್ಷೆ ವಿಸಿದ ಬಳಿಕ ಮತ್ತಷ್ಟು ಹದಗೆಟ್ಟಿದ್ದ ಭಾರತ- ಪಾಕಿಸ್ತಾನ ಸಂಬಂಧ ಈ ದಾಳಿಯಿಂದ ಇನ್ನಷ್ಟು ಪಾತಾಳಕ್ಕೆ ಜಾರುವ ಲಕ್ಷಣಗಳಿವೆ. ಭಾರತದಲ್ಲಿ ಘಟನೆ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ‘ಇನ್ನು ಮಾತು ಸಾಕು. ಪಾಕ್ ವಿರುದ್ಧ ಕ್ರಮ ಜರುಗಿಸಿ’ ಎಂದು ಕೂಗು ಎದ್ದಿದೆ.
ಆಗಿದ್ದೇನು?
ಅತ್ಯಂತ ಯೋಜಿತ ರೀತಿಯಲ್ಲಿ ಸೋಮವಾರ ದಾಳಿಯನ್ನು ನಡೆಸಲಾಗಿದೆ. ಸೋಮವಾರ ಬೆಳಗ್ಗೆ 8.25ರ ವೇಳೆಗೆ ಪೂಂಛ್ ಜಿಲ್ಲೆಯ ಕೃಷ್ಣಾ ಘಾಟಿಯಲ್ಲಿರುವ ಎಲ್‌ಒಸಿಯ ಶಿಬಿರಗಳ ಮೇಲೆ ಪಾಕಿಸ್ತಾನ ಸೇನೆ ಅಪ್ರಚೋದಿತವಾಗಿ ರಾಕೆಟ್ ಹಾಗೂ ಮಾರ್ಟರ್ ದಾಳಿಗಳನ್ನು ನಡೆಸಿದೆ. ಭಾರತೀಯ ಯೋಧರ ಗಮನವನ್ನು ಅತ್ತ ಸೆಳೆದು, ಮತ್ತೊಂದೆಡೆ ‘ಬ್ಯಾಟ್’ ಸದಸ್ಯರನ್ನು ಭಾರತೀಯ ನೆಲದೊಳಕ್ಕೆ ಕಳುಹಿಸಿದೆ. 250 ಮೀಟರ್‌ನಷ್ಟು ಒಳಬಂದ ‘ಬ್ಯಾಟ್’ ಸದಸ್ಯರು, ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಮೂವರು ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ದಾರೆ. ಇಬ್ಬರು ಯೋಧರನ್ನು ಕೊಂದು, ಅವರ ದೇಹವನ್ನು ವಿರೂಪಗೊಳಿಸಲಾಗಿದೆ ಎಂದು ಸೇನೆ ತಿಳಿಸಿದೆ. ಆದರೆ ‘ಯೋಧರ ಶಿರಚ್ಛೇದ ಮಾಡಲಾಗಿದೆ’ ಎಂದು ಹಿರಿಯ ಅಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗಡಿ ಬೇಲಿಯಿಂದ ಆಚೆಗೆ ಇರುವ ಬಿಎಸ್‌ಎ್ ನೆಲೆ ಮೇಲೂ ಪಾಕಿಸ್ತಾನ ರಾಕೆಟ್ ದಾಳಿ ನಡೆಸಿದೆ. ಬಳಿಕ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡಿನ ಮಳೆಗರೆದಿದೆ. ಇದು ಕದನ ವಿರಾಮದ ಉಲ್ಲಂಘನೆ ಎಂದು ಭಾರತ ತಿಳಿಸಿದೆ.
ಪಾಕಿಸ್ತಾನದ ಈ ಹೇಯ ಕೃತ್ಯದಿಂದಾಗಿ 22 ಸಿಖ್ ಇನ್ಫೆಂಟ್ರಿಯ ‘ನಾಯಿಬ್’ ಸುಬೇದಾರ್ ಪರಮ್‌ಜೀತ್ ಸಿಂಗ್, ಬಿಎಸ್‌ಎಸ್'ನ 200ನೇ ಬೆಟಾಲಿಯನ್‌ನ ಮುಖ್ಯ ಪೇದೆ ಪ್ರೇಮ್ ಸಾಗರ್ ಅವರು ಹುತಾತ್ಮರಾಗಿದ್ದಾರೆ. ಬಿಎಸ್‌ಎಫ್ ಪೇದೆ ರಾಜೀಂದರ್ ಸಿಂಗ್ ಅವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸರ್ಜಿಕಲ್ ದಾಳಿ ನಡೆಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ಶಿಬಿರಗಳನ್ನು ನಾಶಗೊಳಿಸಿದ ತರುವಾಯವೂ ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿರುವುದಕ್ಕೆ ಭಾರತೀಯ ಸೇನೆ ಆಕ್ರೋಶಗೊಂಡಿದೆ. ಈ ನೀಚ ಕೃತ್ಯಕ್ಕೆ ಸೂಕ್ತ ತಿರುಗೇಟು ನೀಡಲಾಗುವುದು ಎಂದು ಹೇಳಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಅವರು ಗಡಿ ನಿಯಂತ್ರಣ ರೇಖೆಯ ಸನಿಹದ ಸ್ಥಳಕ್ಕೆ ಭೇಟಿ ನೀಡಿ, ಕಾಶ್ಮೀರಿಗಳಿಗೆ ಬೆಂಬಲ ನೀಡುವ ಭರವಸೆ ನೀಡಿದ ಮರುದಿನವೇ ಈ ದಾಳಿ ನಡೆದಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಈ ನಡುವೆ ಸೇನಾ ಮುಖ್ಯಸ್ಥ ಜ ಬಿಪಿನ್ ರಾವತ್ ಶ್ರೀನಗರಕ್ಕೆ ಆಗಮಿಸಿದ್ದು, ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಆಗ್ರಹ:
‘ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಕನಸು ಬಿಡಿ. ಉಗ್ರವಾದ ಮಕ್ತ ಭಾರತ ನಿರ್ಮಿಸಲು ಗಮನ ಕೊಡಿ’ ಎಂದು ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್ ಮೋದಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಹಿಂದಿನ ಪಾಕ್ ‘ಅಂಗಚ್ಛೇದ’ ಕುಕೃತ್ಯಗಳು
1999, ಮೇ-ಜುಲೈ: 1999ರಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭ ಕ್ಯಾಪ್ಟನ್ ಸೌರಭ್ ಕಾಲಿಯಾ ಪಾಕ್ ವಶಕ್ಕೆ; ಬಳಿಕ ಅವರ ಅಂಗಚ್ಛೇದಿತ ಮೃತದೇಹ ಭಾರತಕ್ಕೆ ಹಸ್ತಾಂತರ
2000 ಫೆಬ್ರವರಿ: ಪಾಕಿಸ್ತಾನಿ ಉಗ್ರ ಮತ್ತು ಅಲ್‌ಖೈದಾ ಸದಸ್ಯ ಇಲ್ಯಾಸ್ ಕಾಶ್ಮೀರಿ ನೇತೃತ್ವದಲ್ಲಿ ನೌಶೇರಾದ ಭಾರತೀಯ ಸೇನಾ ನೆಲೆಯ ಮೇಲೆ ದಾಳಿ, ಏಳು ಸೈನಿಕರ ಹತ್ಯೆ, ಭಾವುಸಾಹೇಬ್ ಮಾರುತಿ ತಲೇಕರ್ ಎಂಬ ಯೋಧನ ತಲೆ ಕಡಿದು ಪಾಕಿಸ್ತಾನಕ್ಕೆ ರವಾನೆ
2008, ಜೂನ್: ಗೋರ್ಖಾ ರೈಲ್ಸ್‌ನ ಯೋಧರೊಬ್ಬರು ದಾರಿ ತಪ್ಪಿದಾಗ ಕೇಲ್ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಗಡಿ ಕ್ರಿಯಾ ತಂಡದ ವಶಕ್ಕೆ; ಕೆಲವು ದಿನಗಳ ನಂತರ ಅವರ ಮೃತದೇಹ ಶಿರಚ್ಛೇದಿತ ರೀತಿಯಲ್ಲಿ ಪತ್ತೆ
2013, ಜನವರಿ: ಜಮ್ಮು-ಕಾಶ್ಮೀರದ ಮೇಂಧರ್ ಸೆಕ್ಟರ್‌ನಲ್ಲಿ ಭಾರತೀಯ ಗಡಿ ದಾಟಿ ಬಂದಿದ್ದ ಪಾಕ್ ಪಡೆ ಓರ್ವ ಭಾರತೀಯ ಯೋಧನ ತಲೆ ಕಡಿದು, ಮತ್ತೋರ್ವನ ಹತ್ಯೆ
2016, ಅಕ್ಟೋಬರ್ 28: ಕುಪ್ವಾರಾದ ಮಚಿಲ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೈನ್ಯದೊಂದಿಗೆ ಗುಂಡಿನ ಚಕಮಕಿ. ಈ ಸಂದರ್ಭ ಉಗ್ರನೊಬ್ಬ ಭಾರತೀಯ ಯೋಧನ ಅಂಗಚ್ಛೇದ
2016. ನ. 22: ಶಂಕಿತ ಪಾಕ್ ಉಗ್ರರಿಂದ ಗಡಿ ನಿಯಂತ್ರಣ ರೇಖೆಯ ಬಳಿ ದಾಳಿ. ಮೂರು ಸೈನಿಕರ ಹತ್ಯೆ. ಅವರಲ್ಲಿ ಓರ್ವನ ಅಂಗಚ್ಛೇದ
ಆಗಿದ್ದೇನು?
- ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಕೃಷ್ಣಾಘಾಟಿ ವಲಯದಲ್ಲಿ 22ನೇ ಸಿಖ್ ರೆಜಿಮೆಂಟ್ ಯೋಧರು ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರಿಂದ ಜಂಟಿಯಾಗಿ ಎರಡು ಪೋಸ್ಟ್‌ಗಳ ನಡುವೆ ಗಸ್ತು
- ಗಸ್ತು ತಿರುಗುತ್ತಿದ್ದ 9 ಸೇನಾ ಸಿಬ್ಬಂದಿ ಮೇಲೆ ಪಾಕ್‌ನಿಂದ ತೀಕ್ಷ್ಣವಾದ ಗುಂಡಿನ ದಾಳಿ
- ಭಾರತದ 250 ಮೀಟರ್‌ನಷ್ಟು ಗಡಿಯಲ್ಲಿ ನುಸುಳಿದ ಪಾಕಿಸ್ತಾನ ಸೇನೆಯ ‘ಬ್ಯಾಟ್’ ಪಡೆ ಹಾಗೂ ಉಗ್ರರು. ಸಿಖ್ ರೆಜಿಮೆಂಟ್ ಮೇಲೆ ದಾಳಿ
- ಭಾರತದ ಇಬ್ಬರು ಯೋಧರನ್ನು ಶಿರಚ್ಛೇದ ಮಾಡಿದ ಪಾಕಿಸ್ತಾನ ಸೇನಾ ಪಡೆ
- ಈ ಕುರಿತು ಪರಿಶೀಲನೆಗೆ ತೆರಳಿದ ಜಂಟಿ ತಂಡದ ಮೇಲೆ ಪುನಃ ಪಾಕಿಸ್ತಾನ ಸೇನಾ ಪಡೆಗಳ ಗುಂಡಿನ ದಾಳಿ
---
ಅಂಗಚ್ಛೇದ ತಪ್ಪು
ಯುದ್ಧ ನಿಯಮಗಳ ಪ್ರಕಾರ, ಸಮರದ ಸಂದರ್ಭದಲ್ಲಿ ನೇರವಾಗಿ ಯುದ್ಧ ಮಾಡಬೇಕೇ ವಿನಾಃ, ವೈರಿ ಯೋಧರ ಸೆರೆಹಿಡಿದು ಹಿಂಸೆ ಕೊಡುವಂತಿಲ್ಲ. ಹೀಗಾಗಿ ಅಂಗಚ್ಛೇದ ಮಾಡುವುದು ಯುದ್ಧಾಪರಾಧ ಎನ್ನಿಸಿಕೊಳ್ಳುತ್ತದೆ.
---
2 ಸೈನಿಕರು: ಗಡಿಯಲ್ಲಿ ಪಾಕಿಸ್ತಾನದ ಹೇಯಕೃತ್ಯಕ್ಕೆ ಒಳಗಾದವರು
250 ಮೀ.: ಭಾರತದ ಗಡಿಯೊಳಕ್ಕೆ ನುಗ್ಗಿ ಪಾಕ್ ಯೋಧರ ಕಿತಾಪತಿ
7ನೇ ಕೃತ್ಯ: 1999ರಿಂದೀಚೆಗೆ ಪಾಕ್‌ನಿಂದ ಇದು 7ನೇ ಅಂಗಚ್ಛೇದ ಕೃತ್ಯ
--
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.