
ಜೋಹಾನ್ಸ್'ಬರ್ಗ್(ಅ. 01): ತನ್ನ ಸ್ವಂತ ತಾಯಿಯನ್ನು ಕೊಂದ ಆರೋಪದ ಮೇಲೆ ಭಾರತೀಯ ಮೂಲದ ಕಿಕ್'ಬಾಕ್ಸರ್'ವೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 30 ವರ್ಷದ ರಮೀಜ್ ಪಟೇಲ್'ನನ್ನು ನಿನ್ನೆ ಬಂಧಿಸಿರುವ ಪೊಲೀಸರು ಸೋಮವಾರ ಕೋರ್ಟ್'ಗೆ ಹಾಜರುಪಡಿಸಲಿದ್ದಾರೆ. ಪೋಲೋಕ್ವಾನೆ ನಗರದಲ್ಲಿರುವ ಭಾರತೀಯರ ಕಾಲೋನಿಯಲ್ಲಿನ ನಿವಾಸದಲ್ಲಿ ರಮೀಜ್ ಪಟೇಲ್ ತನ್ನ ತಾಯಿ ಮಾಹೆಜೀನ್ ಬಾನು ಪಟೇಲ್ ಅವರನ್ನು ಗುಂಡಿಟ್ಟು ಹತ್ಯೆಗೈದ ಆರೋಪವಿದೆ. ಮಹೆಜೀನ್ ಎರಡು ವಾರಗಳ ಹಿಂದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರಮೀಜ್ ಪಟೇಲ್ ಎರಡು ವರ್ಷಗಳ ಹಿಂದೆ ತನ್ನ ಪತ್ನಿ ಫಾತಿಮಾಳನ್ನು ಕೊಲೆಗೈದ ಆರೋಪ ಎದುರಿಸುತ್ತಿದ್ದಾನೆ. ಆಗಿನಿಂದ ಈತನ ಮೂವರು ಮಕ್ಕಳನ್ನು ನೋಡಿಕೊಳ್ಳುತ್ತಿರುವುದು ಈತನ ತಾಯಿಯೇ. ಈತ ತನ್ನ ತಾಯಿಯನ್ನು ಕೊಲ್ಲಲು ಕಾರಣವೇನೆಂಬುದು ಗೊತ್ತಾಗಿಲ್ಲ. ಮಹೆಜೀನ್'ಳ ತಲೆಗೆ ಬಲವಾದ ಏಟು ಬಿದ್ದಿದೆ. ತಲೆ ಹಾಗೂ ದೇಹದ ವಿವಿಧ ಕಡೆ ಗುಂಡಿನೇಟು ತಗುಲಿದೆ.
ರಮೀಜ್ ಪಟೇಲ್ ಯಾರೋ ಆಗುಂತಕರು ತನ್ನ ಮನೆಗೆ ನುಗ್ಗಿ ತಾಯಿಯನ್ನು ಹತ್ಯೆಗೈದಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದ. ಆದರೆ, ಸಾಂದರ್ಭಿಕ ಸ್ಥಿತಿಗಳು ಪೊಲೀಸರಿಗೆ ಅನುಮಾನ ಮೂಡಿಸಿದ್ದವು. ತನಿಖೆಯಿಂದ ಸಾಕಷ್ಟು ಟ್ವಿಸ್ಟ್'ಗಳು ಸಿಕ್ಕವು.
ಬಹಳ ಭದ್ರತೆಯಿದ್ದ ಮನೆಯೊಳಗೆ ಆರೋಪಿ ಬಹಳ ಸುಲಭವಾಗಿ ಪ್ರವೇಶ ಮಾಡಿರುತ್ತಾನೆ. ರಮೀಜ್'ರ ತಾಯಿಗೆ ಆರೋಪಿ ತೀರಾ ಪರಿಚಿತನಾಗಿರುವ ಸಾಧ್ಯತೆಯೇ ಹೆಚ್ಚು. ಹತ್ಯೆಯಾದ ಬಳಿಕ ಮನೆಯಿಂದ ಬೇರಾವುದೇ ವಸ್ತುಗಳ ಕಳ್ಳತನವಾಗಿರುವುದಿಲ್ಲ. ಮನೆಯಲ್ಲಿದ್ದ ಮನೆಗೆಲಸದವರಿಗೆ ಯಾವುದೇ ಅಪಾಯವಾಗಿರುವುದಿಲ್ಲ. ಇವೆಲ್ಲವನ್ನೂ ಗಮನಿಸಿದಾಗ ರಮೀಜ್ ಪಟೇಲ್'ನೇ ತನ್ನ ತಾಯಿಯನ್ನು ಕೊಂದಿರುವ ಸಾಧ್ಯತೆ ಹೆಚ್ಚಿದೆ ಎಂಬುದು ಪೊಲೀಸರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಿನ್ನೆ ಬಂಧಿಸಿದ್ದಾರೆ. ಮನೆಗೆಲಸದವರ ಸಾಕ್ಷ್ಯವು ಈ ಪ್ರಕರಣದಲ್ಲಿ ಮುಖ್ಯವಾಗಿದೆ.
ರಮೀಜ್ ಪಟೇಲ್ ಒಬ್ಬ ವೃತ್ತಿಪರ ಕಿಕ್'ಬಾಕ್ಸರ್ ಆಗಿದ್ದಾನೆ. ಈತ ತನ್ನ ತಾಯಿ, ಪತ್ನಿಯಲ್ಲದೇ ಬೇರೆ ಎರಡು ಕೊಲೆ ಪ್ರಕರಣಗಳನ್ನೂ ಎದುರಿಸಿದ್ದಾನೆ. ಒಂದು ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆಯಿಂದ ಖುಲಾಸೆಗೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.