ಉಗ್ರರಿಗೆ ನುಸುಳಲು ಜಾಗವಿರಲ್ಲವಾ..!? ಇನ್ನೆರಡು ವರ್ಷದಲ್ಲಿ ಸಂಪೂರ್ಣ ಸೀಲ್ ಆಗಲಿದೆ ಭಾರತ-ಪಾಕ್ ಗಡಿ

By Web DeskFirst Published Oct 7, 2016, 12:07 PM IST
Highlights

ಜೈಸಲ್ಮೇರ್(ಅ. 07): ಪಾಕಿಸ್ತಾನದೊಂದಿಗಿನ ಗಡಿ ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಲು ಭಾರತ ಯೋಜಿಸಿದೆ. ಹೊಚ್ಚಹೊಸ ತಂತ್ರಜ್ಞಾನಗಳ ಸಹಾಯದಿಂದ 2019ರೊಳಗೆ ಇಡೀ ಗಡಿ ಪ್ರದೇಶವನ್ನು ಸೀಲ್ ಮಾಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.

ಪಾಕಿಸ್ತಾನದ ಗಡಿ ಭಾಗದ ವ್ಯಾಪ್ತಿಗೆ ಬರುವ ಭಾರತದ ನಾಲ್ಕು ರಾಜ್ಯಗಳಲ್ಲಿನ ಭದ್ರತಾ ಪರಿಸ್ಥಿತಿಯನ್ನು ಸಚಿವ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳೊಂದಿಗೆ ಗೃಹ ಸಚಿವರು ಅಧ್ಯಯನ ಮಾಡಿದ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಗಡಿ ಭದ್ರತಾ ಮೇಲುಸ್ತುವಾರಿ ನಡೆಸಲು ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳು ಮತ್ತು ಕೇಂದ್ರ ಸರಕಾರದ ನಡುವೆ ಒಂದು ರೀತಿಯಲ್ಲಿ ಸಮನ್ವಯತೆಯ ವ್ಯವಸ್ಥೆಯೊಂದನ್ನು ತಯಾರಿಸಲಾಗುವುದು. 2018ರಷ್ಟರಲ್ಲಿ ಭಾರತ-ಪಾಕ್’ನ ಇಡೀ ಗಡಿಭಾಗವನ್ನು ಸೀಲ್ ಮಾಡಲಾಗುವುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದೇ ವೇಳೆ, ಗಡಿ ಭದ್ರತಾ ಜಾಲ (ಬಾರ್ಡರ್ ಸೆಕ್ಯೂರಿಟಿ ಗ್ರಿಡ್) ವ್ಯವಸ್ಥೆಯನ್ನು ಸ್ಥಾಪಿಸಲು ಕೇಂದ್ರ ಸರಕಾರ ಯೋಜಿಸಿದೆ. ಇದು ಭಾರತದ ಮಟ್ಟಿಗೆ ಹೊಚ್ಚಹೊಸ ವಿಚಾರವಾಗಿದ್ದು ಪಾಕ್ ಜೊತೆ ಗಡಿ ಹಂಚಿಕೊಳ್ಳುವ ಎಲ್ಲಾ ರಾಜ್ಯಗಳು ಹಾಗೂ ಸಂಬಂಧಿತ ಸಂಸ್ಥೆಗಳಿಂದ ಅಭಿಪ್ರಾಯಗಳನ್ನು ಹಾಗೂ ಸಲಹೆಗಳನ್ನು ಗೃಹ ಸಚಿವರು ಆಹ್ವಾನಿಸಿದ್ದಾರೆ. ಅಲ್ಲದೇ, ಗುಜರಾತ್’ನ ರಿವರೈನ್ ಹಾಗೂ ಸರ್ ಕ್ರೀಕ್ ಪ್ರದೇಶದಲ್ಲಿ ಪ್ರಸಕ್ತ ಯಶಸ್ವಿಯಾಗಿರುವ ಅತ್ಯಾಧುನಿಕ ಗಡಿ ಭದ್ರತಾ ವ್ಯವಸ್ಥೆಯನ್ನು ಗಡಿಭಾಗದುದ್ದಕ್ಕೂ ಅಳವಡಿಸುವ ಯೋಜನೆಯೂ ಇದೆ ಎಂದು ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

click me!