ಸೌಥ್ ಏಷ್ಯಾ ಸೆಟಿಲೈಟ್; ನೆರೆಹೊರೆಯವರ ನೆರವಿಗೆ ಭಾರತ ಮುಂದು

Published : Apr 30, 2017, 03:15 PM ISTUpdated : Apr 11, 2018, 12:42 PM IST
ಸೌಥ್ ಏಷ್ಯಾ ಸೆಟಿಲೈಟ್; ನೆರೆಹೊರೆಯವರ ನೆರವಿಗೆ ಭಾರತ ಮುಂದು

ಸಾರಾಂಶ

2,230 ಕಿಲೋ ತೂಕದ ಈ ಉಪಗ್ರಹವನ್ನು ಮೂರು ವರ್ಷದಲ್ಲಿ 235 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿದೆ. ವಿಪತ್ತು ನಿರ್ವಹಣೆ ಹಾಗೂ ಸಂವಹವನ ಅಭಿವೃದ್ಧಿಯ ವಿವಿಧ ಸೇವೆಗಳನ್ನು ಈ ಸೆಟಿಲೈಟ್ ಒದಗಿಸುವ ನಿರೀಕ್ಷೆ ಇದೆ. ವಿಸ್ಯಾಟ್, ಡಿಟಿಹೆಚ್, ಟಿಲಿ-ಎಜುಕೇಶನ್, ಟೆಲಿಮೆಡಿಸಿನ್'ಗಳ ಸೇವೆಯೂ ಒಳಗೊಂಡಿದೆ. ಇದರಲ್ಲಿ ಒಟ್ಟು 12 Ku-band ಟ್ರಾನ್ಸ್'ಪಾಂಡರ್'ಗಳಿವೆ.

ನವದೆಹಲಿ(ಏ. 30): ಉಪಗ್ರಹ ಉಡಾವಣೆ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಭಾರತ ಈಗ ತನ್ನ ಜ್ಞಾನದ ನೆರವನ್ನು ನೆರೆಹೊರೆಯವರಿಗೂ ನೀಡಲು ಮುಂದಾಗಿದೆ. ಮೇ 5ರಂದು ಸೌಥ್ ಏಷ್ಯಾ ಉಪಗ್ರಹದ ಉಡಾವಣೆಯಾಗಲಿದೆ. ಆಂಧ್ರದ ಶ್ರೀಹರಿಕೋಟಾದಿಂದ ಸೌಥ್ ಏಷ್ಯಾ ಉಪಗ್ರಹವನ್ನು ಜಿಎಸ್'ಎಲ್'ವಿ ರಾಕೆಟ್ ಆಕಾಶಕ್ಕೆ ಹೊತ್ತೊಯ್ಯಲಿದೆ. ವಿಶ್ವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶವೊಂದು ತನ್ನ ನೆರೆಹೊರೆಯವರ ಸೇವೆಗೆಂದು ಉಪಗ್ರಹದ ಉಡಾವಣೆ ಮಾಡುತ್ತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ (ಎಲ್ಲರ ಜೊತೆ ಎಲ್ಲರ ವಿಕಾಸ) ಎಂಬ ಮೋದಿ ಮಂತ್ರದ ಫಲಶ್ರುತಿ ಇದಾಗಿದೆ.

ಪಾಕಿಸ್ತಾನಕ್ಕೆ ಬೇಡವಂತೆ:
ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಈ ಯೋಜನೆಯ ಮೂಲ ಉದ್ದೇಶವಿದ್ದದ್ದು ಎಲ್ಲಾ ಸಾರ್ಕ್ ರಾಷ್ಟ್ರಗಳಿಗೂ ಸೆಟಿಲೈಟ್ ಸೇವೆ ಕೊಡಬೇಕೆಂದು. ಉಪಗ್ರಹಕ್ಕೆ "ಸಾರ್ಕ್ ಸೆಟಿಲೈಟ್" ಎಂದು ಹೆಸರಿಡುವ ಪ್ರಸ್ತಾವವಿತ್ತು. ಆದರೆ, ಪಾಕಿಸ್ತಾನ ತನಗೆ ಈ ಸೇವೆ ಬೇಡ ಎಂದು ಖಡಾಖಂಡಿತವಾಗಿ ನಿರಾಕರಿಸಿದೆ. ಚೀನಾದ ನೆರವಿನಿಂದ ಈಗಾಗಲೇ ಕಮ್ಯುನಿಕೇಶನ್ ಸೆಟಿಲೈಟ್'ಗಳ ಸೇವೆ ಪಡೆಯುತ್ತಿರುವ ಪಾಕಿಸ್ತಾನಕ್ಕೆ ಸೌಥ್ ಏಷ್ಯಾ ಉಪಗ್ರಹದ ಅಗತ್ಯವೂ ಇಲ್ಲ. ತಾನು ಇಸ್ಲಾಂ ಧರ್ಮ ಪ್ರಚಾರದ ಪ್ರತ್ಯೇಕ ಸೆಟಿಲೈಟ್ ಪಡೆದುಕೊಳ್ಳುವುದಾಗಿ ಟಾಂಗ್ ಕೊಟ್ಟಿದೆ.

ಸಾರ್ಕ್ ಸೆಟಿಲೈಟ್ ಸೇವೆಯನ್ನು ಪಾಕ್ ನಿರಾಕರಿಸಿದ ಹಿನ್ನೆಲೆಯಲ್ಲಿ ಇದಕ್ಕೆ ಸೌಥ್ ಏಷ್ಯಾ ಸೆಟಿಲೈಟ್ ಎಂದು ನಾಮಕರಣ ಮಾಡಲಾಗಿದೆ. ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಆಫ್ಘಾನಿಸ್ತಾನ, ಮಾಲ್ಡೀವ್ಸ್, ನೇಪಾಳ ಮತ್ತು ಭೂತಾನ್ ದೇಶಗಳಿಗೆ ಈ ಸೆಟಿಲೈಟ್ ಸೇವೆ ಲಭ್ಯವಿರಲಿದೆ.

ಏನಿದು ಉಪಗ್ರಹದ ವಿಶೇಷತೆ?
2,230 ಕಿಲೋ ತೂಕದ ಈ ಉಪಗ್ರಹವನ್ನು ಮೂರು ವರ್ಷದಲ್ಲಿ 235 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿದೆ. ವಿಪತ್ತು ನಿರ್ವಹಣೆ ಹಾಗೂ ಸಂವಹವನ ಅಭಿವೃದ್ಧಿಯ ವಿವಿಧ ಸೇವೆಗಳನ್ನು ಈ ಸೆಟಿಲೈಟ್ ಒದಗಿಸುವ ನಿರೀಕ್ಷೆ ಇದೆ. ವಿಸ್ಯಾಟ್, ಡಿಟಿಹೆಚ್, ಟಿಲಿ-ಎಜುಕೇಶನ್, ಟೆಲಿಮೆಡಿಸಿನ್'ಗಳ ಸೇವೆಯೂ ಒಳಗೊಂಡಿದೆ. ಇದರಲ್ಲಿ ಒಟ್ಟು 12 Ku-band ಟ್ರಾನ್ಸ್'ಪಾಂಡರ್'ಗಳಿವೆ. ಪ್ರತಿಯೊಂದು ರಾಷ್ಟ್ರಕ್ಕೂ ಕನಿಷ್ಠ ಒಂದಾದರೂ ಟ್ರಾನ್ಸ್'ಪಾಂಡರ್'ಗಳು ಲಭ್ಯವಿರಲಿವೆ. ಈ ಟ್ರಾನ್ಸ್'ಪಾಂಡರ್'ನ ಸಹಾಯದಿಂದ ಒಂದು ರಾಷ್ಟ್ರವು ತನ್ನದೇ ಟೆಲಿಕಮ್ಯೂನಿಕೇಶನ್ ಮತ್ತು ಬ್ರಾಡ್'ಕ್ಯಾಸ್ಟ್ ಪ್ರೋಗ್ರಾಮಿಂಗ್ ತಯಾರಿಸಿಕೊಳ್ಳಬಹುದು.

ಯಾರಿಗೆಲ್ಲಾ ಉಪಯೋಗ?
ಭಾರತದ ಈ ಸೌತ್ ಏಷ್ಯಾ ಸೆಟಿಲೈಟ್'ನಿಂದ ನಮ್ಮೆಲ್ಲಾ ನೆರೆ ರಾಷ್ಟ್ರಗಳಿಗೆ ಉಪಯೋಗವಿದ್ದೇ ಇದೆ. ಆದರೆ, ಪಾಕಿಸ್ತಾನ ಮತತ್ತು ಶ್ರೀಲಂಕಾ ದೇಶಗಳು ಚೀನಾದ ನೆರವಿನಿಂದ ಇಂಥ ಕಮ್ಯೂನಿಕೇಶನ್ ಸೆಟಿಲೈಟ್'ಗಳ ಸೇವೆ ಪಡೆದುಕೊಂಡಿವೆ. ಬಾಂಗ್ಲಾದೇಶವು ಫ್ರಾನ್ಸ್'ನ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ. ನೇಪಾಳವು ಎರಡು ಸಂವಹನ ಉಪಗ್ರಹಗಳಿಗೆ ಟೆಂಡರ್ ಕರೆದಿದೆ. ಆಫ್ಘಾನಿಸ್ತಾನವು ಹಳೆಯ ಸೆಟಿಲೈಟ್'ವೊಂದರ ಸೇವೆ ಈಗಾಗಲೇ ಪಡೆದುಕೊಳ್ಳುತ್ತಿದೆ. ಆದರೆ, ಭೂತಾನ್ ಮತ್ತು ಮಾಲ್ಡೀವ್ಸ್ ರಾಷ್ಟ್ರಗಳಿಗೆ ಇಂಥದ್ದೊಂದು ಕಮ್ಯುನಿಕೇಶನ್ ಸೆಟಿಲೈಟ್'ನ ಸೇವೆ ಅತ್ಯಗತ್ಯವಿತ್ತು. ಇವೆರಡು ರಾಷ್ಟ್ರ ಬಿಟ್ಟರೆ ಉಳಿದ ಸಾರ್ಕ್ ರಾಷ್ಟ್ರಗಳಿಗೆ ಭಾರತದ ಆಫರ್ ತೀರಾ ಅಗತ್ಯವಿರಲಿಲ್ಲ. ಏನೇ ಆದರೂ ನೆರೆಯ ರಾಷ್ಟ್ರಗಳಿಗೆ ಇಂಥ ಸೆಟಿಲೈಟ್ ಗಿಫ್ಟ್ ಮಾಡುವ ಮನಸ್ಸು ಭಾರತ ಮಾತ್ರವೇ ಮಾಡಿರುವುದು.

ಭಾರತಕ್ಕೆ ಏನು ಉಪಯೋಗ?
ಭಯೋತ್ಪಾದನೆ, ಬಡತನದಂತಹ ಅನೇಕ ಸಮಸ್ಯೆಗಳಿಗೆ ಅಭಿವೃದ್ಧಿಯೇ ಸೂಕ್ತ ಪರಿಹಾರ. ನೆರೆಹೊರೆ ರಾಷ್ಟ್ರಗಳು ಸಶಕ್ತವಾದರೆ ತಾವೂ ಬಲಯುತವಾಗಬಹುದು ಎಂಬುದು ಭಾರತದ ಅಭಿಪ್ರಾಯ. ಹೀಗಾಗಿ, ಮೋದಿ ಸರಕಾರವು ಕೆಲ ನೆರೆಯ ರಾಷ್ಟ್ರಗಳಿಗೆ ಆರ್ಥಿಕ ಪ್ಯಾಕೇಜ್ ಕೂಡ ಘೋಷಿಸಿದೆ.

ನೆರೆಹೊರೆಯವರ ಅಭಿವೃದ್ಧಿಯೊಂದಷ್ಟೇ ಅಲ್ಲ, ದಕ್ಷಿಣ ಏಷ್ಯಾದಲ್ಲಿ ಚೀನಾದ ಪ್ರಭಾವವನ್ನು ಕಡಿಮೆ ಮಾಡುವ ಉದ್ದೇಶವೂ ಭಾರತಕ್ಕಿದೆ. ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮೊದಲಾದ ದೇಶಗಳಿಗೆ ಚೀನಾ ವಿವಿಧ ರೀತಿಯಲ್ಲಿ ನೆರವಿನ ಹಸ್ತ ಚಾಚಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದೆ. ಆ ಮೂಲಕ ಭಾರತದ ಸುತ್ತಲೂ ಚೀನಾ ತನ್ನ ಕಣ್ಗಾವಲು ಇಡುವ ಸಾಧ್ಯತೆ ಇದೆ. ಇದು ಭಾರತಕ್ಕೆ ನಿಜಕ್ಕೂ ಆತಂಕ ತರುವ ಸುದ್ದಿ. ಹೀಗಾಗಿ, ನೆರೆರಾಷ್ಟ್ರಗಳಿಗೆ ಚೀನಾ ಮೇಲಿನ ಅವಲಂಬನೆಯನ್ನು ತಪ್ಪಿಸುವುದು ಭಾರತದ ಪ್ಲಾನ್. ಇದರ ಒಂದು ಹೆಜ್ಜೆಯೇ ಸೌಥ್ ಏಷ್ಯಾ ಸೆಟಿಲೈಟ್ ಉಡಾವಣೆ ಇರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೆಲ್ಫಿ& ಶೇಕ್‌ಹ್ಯಾಂಡ್‌ಗೆ 10 ಲಕ್ಷ : ಇಂಡಿಯಾ ಟೂರ್ ಮಾಡಿದ ಮೆಸ್ಸಿಗೆ ಆಯೋಜಕರು ಕೊಟ್ಟಿದ್ದು ಎಷ್ಟು ಕೋಟಿ
ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ