
ಬಾಲ್ಸೋರ್ (ಜೂ. 04): ಅಣ್ವಸ್ತ್ರಗಳನ್ನು ಕೊಂಡೊಯ್ಯುವ ಸಾಮರ್ಥ್ಯದ ಸ್ವದೇಶಿ ನಿರ್ಮಿತ ದೂರಗಾಮಿ ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತ ಭಾನುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. 5,000 ಕಿ.ಮೀ. ವ್ಯಾಪ್ತಿಯಲ್ಲಿ ದಾಳಿ ನಡೆಸುವ ಸಾಮರ್ಥ್ಯವನ್ನು ಅಗ್ನಿ-5 ಕ್ಷಿಪಣಿ ಹೊಂದಿದ್ದು ಚೀನಾದ ಎಲ್ಲಾ ನಗರಗಳನ್ನೂ ಇದು ತಲುಪಲಿದೆ.
ಒಡಿಶಾ ಕರಾವಳಿಯ ಡಾ. ಅಬ್ದುಲ್ ಕಲಾಮ್ ದ್ವೀಪದಲ್ಲಿರುವ ಸಮಗ್ರ ಪರೀಕ್ಷಾ ನೆಲೆಯಿಂದ ಮುಂಜಾನೆ 9.48 ಕ್ಕೆ ಅಗ್ನಿ-5 ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು. ಪರೀಕ್ಷೆಯ ವೇಳೆ ತನ್ನ ಸಂಪೂರ್ಣ ದೂರವನ್ನು ಕ್ರಮಿಸುವಲ್ಲಿ ಕ್ಷಿಪಣಿ ಯಶಸ್ವಿಯಾಗಿದೆ.
ಅಗ್ನಿ-5 ಕ್ಷಿಪಣಿಯು 17 ಮೀಟರ್ ಎತ್ತರ, 2 ಮೀಟರ್ ಅಗಲವಾಗಿದೆ. 1.5 ಟನ್ ತೂಕವನ್ನು ಕ್ಷಿಪಣಿಯು ಹೊಂದಿದ್ದು ಇದರ ಹಾರಾಟದ ಮೇಲೆ ರಾಡಾರ್, ವೀಕ್ಷಣಾ ನಿಲ್ದಾಣಗಳ ಮೂಲಕ ನಿಗಾ ಇಡಲಾಗಿತ್ತು. ಉಡ್ಡಯನ ಪ್ರದೇಶದಿಂದ ಗಗನಕ್ಕೆ ಚಿಮ್ಮಿದ ಅಗ್ನಿ ೫ ಕ್ಷಿಪಣಿ ನಿಗದಿತ ಎತ್ತರ ತಲುಪಿದ ಬಳಿಕ ಭೂಮಿಯತ್ತ ವಾಪಸ್ಸಾಯಿತು. ಈ ವೇಳೆ ಭೂಮಿಯ ಗುರುತ್ವಾಕರ್ಷಣೆಯಿಂದಾಗಿ ವೇಗ ಹೆಚ್ಚಿತ್ತು.
ಭೂಮಿಯನ್ನು ಪ್ರವೇಶಿಸುವ ವೇಳೆ ಕ್ಷಿಪಣಿಯ ತಾಪಮಾನ ಹೆಚ್ಚಾಗಿ ಸ್ಫೋಟವಾಗುವ ಸಾಧ್ಯತೆ ಇರುತ್ತದೆ. ಆದರೆ ಸ್ವದೇಶೀಯವಾಗಿ ಅಭಿವೃದ್ಧಿಪಡಿಸಿದ ಇಂಗಾಲ ಕವಚವು ಯಶಸ್ವಿಯಾಗಿ ಕ್ಷಿಪಣಿಗೆ ಶಾಖದಿಂದ ರಕ್ಷಣೆ ನೀಡಿತು. ಭೂಮಿ ವ್ಯಾಪ್ತಿ ಪ್ರವೇಶಿದ ಬಳಿಕ ನಿಗದಿತ ಗುರಿಯನ್ನು ಅಗ್ನಿ ಕ್ಷಿಪಣಿ ತಲುಪಿತು. ಈ ಮೂಲಕ ಪರೀಕ್ಷೆ ಯಶಸ್ವಿಯಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.