
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಅವರ ಪುತ್ರ ಹಾಗೂ ಪಕ್ಷದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರು ಮತ್ತೆ ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಮುಂದಿನ ಎರಡು ಅಥವಾ ಮೂರು ದಿನಗಳ ಕಾಲ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಸಂಚರಿಸಿ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರದ ಅಭ್ಯರ್ಥಿಯ ಪರ ಪ್ರಚಾರ ನಡೆಸಲಿದ್ದಾರೆ. ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆ ಕ್ಷಣದಲ್ಲಿ ವಿಜಯೇಂದ್ರ ಅವರಿಗೆ ವರುಣಾ ಕ್ಷೇತ್ರದ ಟಿಕೆಟ್ ನಿರಾಕರಿಸಲಾಗಿತ್ತು.
ಈ ಬೆಳವಣಿಗೆ ನಂತರ ಆ ಭಾಗದ ಪಕ್ಷದ ಸಂಘಟನೆಯಲ್ಲಿ ಸಾಕಷ್ಟು ಬೆಳವಣಿಗೆ ನಡೆದಿತ್ತು. ಅನೇಕ ಅಭ್ಯರ್ಥಿಗಳು ಹಾಗೂ ಮುಖಂಡರು ವಿಜಯೇಂದ್ರ ಪರ ಬ್ಯಾಟಿಂಗ್ ಮಾಡಿದ್ದರು. ಟಿಕೆಟ್ ನಿರಾಕರಣೆ ವಿರೋಧಿಸಿ ವಿಜಯೇಂದ್ರ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ. ಅಲ್ಲದೆ ಮತ್ತೊಬ್ಬ ಅಭಿಮಾನಿ ರಕ್ತದೊತ್ತಡ ಕುಸಿದು ಸಾವನ್ನಪ್ಪಿದ್ದ. ನಂತರ ವಿಜಯೇಂದ್ರ ಅವರು ಆ ಕಡೆ ಹೆಚ್ಚು ಹೋಗಿರಲಿಲ್ಲ.
ಇದೀಗ ಚುನಾವಣಾ ಫಲಿತಾಂಶ ಹೊರಬಿದ್ದು ಎರಡು ವಾರಗಳ ನಂತರ ವಿಜಯೇಂದ್ರ ಅವರು ಅಲ್ಲಿಗೆ ತೆರಳಿದ್ದಾರೆ. ಸಾವನ್ನಪ್ಪಿದ ಇಬ್ಬರು ಅಭಿಮಾನಿಗಳ ನಿವಾಸಕ್ಕೂ ಭೇಟಿ ನೀಡಿ ಅವರ ಕುಟುಂಬಗಳಿಗೆ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ. ಈ ಬಗ್ಗೆ ಭಾನುವಾರ ದೂರವಾಣಿ ಮೂಲಕ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ವಿಜಯೇಂದ್ರ, ಎರಡು ಮೂರು ದಿನಗಳ ಕಾಲ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಯ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳುತ್ತೇನೆ.
ಪಕ್ಷದ ಕಾರ್ಯಕರ್ತರೊಂದಿಗೆ ಸಭೆಯನ್ನೂ ನಡೆಸುತ್ತೇನೆ. ಟಿಕೆಟ್ ನೀಡಿಲಿಲ್ಲ ಎಂಬ ಕಾರಣಕ್ಕಾಗಿ ನಾನು ಪಕ್ಷ ಸಂಘಟನೆಯಿಂದ ವಿಮುಖನಾಗಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಿಯಾಶೀಲವಾಗಿ ಪಕ್ಷದ ಸಂಘಟನೆಯಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ನೀಡಿ ರುವುದರಿಂದ ಪರಿಷತ್ ಚುನಾವಣೆ ಮುಗಿದ ನಂತರ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಕೈಗೊಳ್ಳುತ್ತೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.