ಭಾರತಕ್ಕೆ ಸಿಗಲಿದೆ ಮಲ್ಯ ಸ್ವಿಸ್‌ ಬ್ಯಾಂಕ್‌ ರಹಸ್ಯ

By Web DeskFirst Published Feb 1, 2019, 9:35 AM IST
Highlights

ಭಾರತಕ್ಕೆ ಸಿಗಲಿದೆ ಮಲ್ಯ ಸ್ವಿಸ್‌ ಬ್ಯಾಂಕ್‌ ವಿವರ| ಭಾರತದ ಕೋರಿಕೆಗೆ ಸ್ವಿಸ್‌ ಸರ್ಕಾರ ಒಪ್ಪಿಗೆ| ವಿವರ ಹಸ್ತಾಂತರ ಪ್ರಶ್ನಿಸಿದ್ದ ಮಲ್ಯ ಅರ್ಜಿ ವಜಾ

ನವದೆಹಲಿ[ಫೆ.01]: 9 ಸಾವಿರ ಕೋಟಿ ಸಾಲ ಮಾಡಿ ಬ್ಯಾಂಕ್‌ಗಳಿಗೆ ವಂಚಿಸಿರುವ ದೇಶಭ್ರಷ್ಟಉದ್ಯಮಿ ವಿಜಯ ಮಲ್ಯ ಅವರ ಸ್ವಿಸ್‌ ಬ್ಯಾಂಕ್‌ ರಹಸ್ಯ ಖಾತೆ ವಿವರಗಳು ಶೀಘ್ರದಲ್ಲೇ ಭಾರತಕ್ಕೆ ಸಿಗುವ ನಿರೀಕ್ಷೆಯಿದೆ. ಈ ಕುರಿತು ಸಿಬಿಐ ಮಾಡಿದ ಮನವಿಯನ್ನು ಸ್ವಿಜರ್ಲೆಂಡ್‌ ಅಧಿಕಾರಿಗಳು ಮನ್ನಿಸಿದ್ದಾರೆ.

ಮಲ್ಯ ಅವರ 4 ಖಾತೆಗಳನ್ನು ಮಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಅದರ ವಿವರಗಳನ್ನು ತಮಗೆ ಕೊಡಬೇಕು ಎಂದು ಸ್ವಿಸ್‌ ಪ್ರಾಸಿಕ್ಯೂಟರ್‌ಗೆ ಸಿಬಿಐ ಮನವಿ ಮಾಡಿಕೊಂಡಿತ್ತು. ಪ್ರಾಸಿಕ್ಯೂಟರ್‌ ಅವರು ಇದಕ್ಕೆ ಒಪ್ಪಿಗೆ ಕೂಡ ನೀಡಿದ್ದರು. ಆದರೆ ಇದನ್ನು ಪ್ರಶ್ನಿಸಿ ವಿಜಯ ಮಲ್ಯ ಅವರು ‘ರಾಕೇಶ್‌ ಅಸ್ಥಾನಾ ಭ್ರಷ್ಟಾಚಾರ ಪ್ರಕರಣ’ವನ್ನು ಪ್ರಸ್ತಾಪಿಸಿ ಸ್ವಿಸ್‌ ಫೆಡರಲ್‌ ಕೋರ್ಟ್‌ಗೆ ಹೋಗಿದ್ದರು. ಆದರೆ ಕೋರ್ಟು, ಮಲ್ಯ ಮನವಿಯನ್ನು ತಿರಸ್ಕರಿಸಿದೆ.

ತಮ್ಮ ವಿರುದ್ಧದ ಆರೋಪದ ತನಿಖೆ ನಡೆಸುತ್ತಿದ್ದ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ಥಾನಾ ಮೇಲೆಯೇ ಭ್ರಷ್ಟಾಚಾರ ಆರೋಪಗಳಿದ್ದು, ತಮ್ಮ ವಿಷಯದಲ್ಲಿ ನಿಷ್ಪಕ್ಷ ತನಿಖೆ ನಡೆಯುತ್ತಿಲ್ಲ ಎಂದು ಮಲ್ಯ ವಾದಿಸಿದ್ದರು. ಆದರೆ ವಿದೇಶದಲ್ಲಿ ನಡೆಯುತ್ತಿರುವ ಪ್ರಕರಣಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಸ್ವಿಸ್‌ ನ್ಯಾಯಾಧೀಶರು ಮಲ್ಯ ಅವರ ಮನವಿ ತಿರಸ್ಕರಿಸಿದ್ದಾರೆ. ಇದರೊಂದಿಗೆ ಮಲ್ಯ ಅವರ ಬ್ಯಾಂಕ್‌ ಖಾತೆ ವಿವರ ಹಸ್ತಾಂತರಕ್ಕೆ ಇದ್ದ ತೊಡಕು ನಿವಾರಣೆಯಾಗಿದೆ.

click me!