ಉಗ್ರರ ಪೋಷಣೆ: ಪಾಕ್‌ ಮಾನ ಹರಾಜಿಗೆ ಭಾರತ ಸಜ್ಜು

By Web DeskFirst Published Mar 6, 2019, 9:33 AM IST
Highlights

ಉಗ್ರರ ಪೋಷಣೆ: ಪಾಕ್‌ ಮಾನ ಹರಾಜಿಗೆ ಭಾರತ ಸಜ್ಜು| ಪಾಕಿಸ್ತಾನದ ಸೇನಾ ನೆಲೆಗಳ ಪಕ್ಕದಲ್ಲೇ ಉಗ್ರ ಶಿಬಿರ| ಪಾಕ್‌ ಉಗ್ರ ನೆಲೆಗಳ ಬಗ್ಗೆ ಗುಪ್ತಚರ ವರದಿ ಸಿದ್ಧ

ನವದೆಹಲಿ[ಮಾ.06]: ತಾನು ಉಗ್ರವಾದವನ್ನು ಪೋಷಿಸುತ್ತಿಲ್ಲ ಎಂದು ಹೇಳಿಕೊಂಡು ಬಂದಿರುವ ಪಾಕಿಸ್ತಾನದ ನಿಜವಾದ ಮುಖವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತೋರಿಸಲು ಭಾರತ ಮುಂದಾಗಿದೆ. ಪಾಕಿಸ್ತಾನದ ಸೇನಾ ನೆಲೆಯ ಸಮೀಪವೇ ಉಗ್ರರ ಶಿಬಿರಗಳು ಇರುವ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ವಿಸ್ತೃತ ವರದಿಯೊಂದನ್ನು ಸಿದ್ಧಪಡಿಸಿದೆ. ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಒಳಭಾಗದಲ್ಲಿ 16 ಭಯೋತ್ಪಾದಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗುಪ್ತಚರ ವರದಿಯಲ್ಲಿ ಗುರುತಿಸಲಾಗಿದೆ. ಉಗ್ರರ ನೆಲೆಗಳು ಸೇನಾ ನೇಲೆಗಳ ಸಮೀಪವೇ ಇವೆ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉಗ್ರರ ಈ ಅಡುಗುದಾಣಗಳ ಉಪಗ್ರಹ ಚಿತ್ರಗಳನ್ನು ಮಿತ್ರ ರಾಷ್ಟ್ರಗಳಿಗೆ ನೀಡುವ ಮೂಲಕ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಬಗ್ಗೆ ಭಾರತ ಜಾಗತಿಕ ವೇದಿಕೆಗಳಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಲಿದೆ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದಕ ಕೇಂದ್ರಗಳಲ್ಲಿ ಭಾರತದ ಮೇಲೆ ದಾಳಿಗೆ ಸಂಚು ರೂಪಿಸಲಾಗುತ್ತಿದೆ ಮತ್ತು ಅಲ್ಲಿ ಉಗ್ರರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ರೈಫಲ್ಸ್‌ ತರಬೇತಿ, ನೀರಿನ ಆಳದಲ್ಲಿ ಹೋರಾಟ, ಐಇಡಿ ಸ್ಫೋಟಕಗಳ ಮತ್ತು ಡ್ರೋನ್‌ಗಳ ಬಳಕೆಯ ತರಬೇತಿಯನ್ನು ಉಗ್ರರಿಗೆ ನೀಡಲಾಗುತ್ತಿದೆ. ಈ ಪೈಕಿ ಆರು ಉಗ್ರ ತರಬೇತಿ ಕೇಂದ್ರಗಳು ಅಥವಾ ಲಾಂಚ್‌ ಪ್ಯಾಡ್‌ಗಳಲ್ಲಿ ಉಗ್ರರಿಗೆ ಕಮಾಂಡೋ ಮಾದರಿ ಕಾರ್ಯಾಚರಣೆ ತರಬೇತಿ ನೀಡಲಾಗುತ್ತಿದೆ. ಭಾರತೀಯ ವಾಯು ಪಡೆ ದಾಳಿ ನಡೆಸಿದ ಬಾಲಾಕೋಟ್‌ ಉಗ್ರ ನೆಲೆಗಳನ್ನು ಹೊರತುಪಡಿಸಿ ಇನ್ನೂ 5 ಉಗ್ರ ಕೇಂದ್ರಗಳು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

click me!