
ನವದೆಹಲಿ([ಸೆ.21): ರಫೆಲ್ ವಿವಾದಕ್ಕೆ ತುಪ್ಪ ಸುರಿದಿರುವ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ, ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಭಾರತ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಢಿಫೆನ್ಸ್ ಇಂಡಸ್ಟ್ರೀಸ್ ಅನ್ನು ಆಯ್ಕೆ ಮಾಡಿತ್ತು. ಆದರೆ ಡಸ್ಸಾಲ್ಟ್ ಏವಿಯೇಷನ್ ಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಹೇಳಿದ್ದಾರೆ.
ಮೀಡಿಯಾಪಾರ್ಟ್ ಗೆ ನೀಡಿದ ಸಂದರ್ಶನದಲ್ಲಿ ಪಾಲುದಾರನಾಗಿ ರಿಲಯನ್ಸ್ ಅನ್ನು ಆಯ್ಕೆ ಮಾಡಿದವರು ಯಾರು? ಎಂಬ ಪ್ರಶ್ನೆಗೆ ಉತ್ತರಿಸಿದ ಫ್ರಾನ್ಸ್ ಮಾಜಿ ಅಧ್ಯಕ್ಷ್ಯ, ರಿಲಾಯನ್ಸ್ ಹೆಸರನ್ನು ಪ್ರಸ್ತಾಪಿಸಿದ್ದು ಭಾರತ ಮತ್ತು ಡಸಾಲ್ಟ್ ಗೆ ಬೇರೆ ಆಯ್ಕೆ ಇರಲಿಲ್ಲ. ಹೀಗಾಗಿ ಆ ಕಂಪನಿಯನ್ನು ಪಾಲುದಾರಿಕೆಯನ್ನು ಒಪ್ಪಿಕೊಳ್ಳಲಾಯಿತು ಎಂದು ಹೇಳಿದ್ದಾರೆ.
ಹೊಲಾಂಡ್ ಅವರ ಈ ಹೇಳಿಕೆ ಭಾರತ ಸರ್ಕಾರದ ಹೇಳಿಕೆಗೆ ಸಂಪೂರ್ಣ ತದ್ವಿರುದ್ಧವಾಗಿದ್ದು, ರಿಲಾಯನ್ಸ್ ಮತ್ತು ಡಸಾಲ್ಟ್ ನಡುವಿನ ವಾಣಿಜ್ಯ ಒಪ್ಪಂದವಾಗಿದ್ದು, ಅದರಲ್ಲಿ ಸರ್ಕಾರದ ಪಾತ್ರವಿಲ್ಲ ಮತ್ತು ರಿಲಯನ್ಸ್ ಢಿಫೆನ್ಸ್ ಆಯ್ಕೆ ಮಾಡುವುದು ಸಂಪೂರ್ಣ ಡಸಾಲ್ಟ್ ಏವಿಯೇಷನ್ ನಿರ್ಧಾರವಾಗಿತ್ತು ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು.
ಇನ್ನು ಹೊಲಾಂಡ್ ಸಂದರ್ಶನದ ಬಗ್ಗೆ ತಕ್ಷಣ ಟ್ವೀಟ್ ಮಾಡಿರುವ ರಕ್ಷಣಾ ಸಚಿವಾಲಯದ ವಕ್ತಾರರು, ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂಡ್ ಅವರ ಹೇಳಿಕೆಯನ್ನು ಪರಿಶೀಲಿಸಲಾಗುವುದು. ವಾಣಿಜ್ಯ ಒಪ್ಪಂದದ ಬಗ್ಗೆ ಫ್ರಾನ್ಸ್ ಸರ್ಕಾರವಾಗಲಿ ಅಥವಾ ಭಾರತ ಸರ್ಕಾರವಾಗಲಿ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆಯನ್ನು ಸ್ವಾಗತಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರಫೆಲ್ ಒಪ್ಪಂದ ಕುರಿತಂತೆ ಕಾಂಗ್ರೆಸ್ ಆರೋಪದಲ್ಲಿ ಸತ್ಯಾಂಶವಿದೆ ಎಂದು ಹೊಲಾಂಡೆ ಹೇಳಿಕೆಯಿಂದ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೋದಿ ದೇಶದ ಜನತೆ ಮತ್ತು ಸೈನ್ಯಕ್ಕೆ ದ್ರೋಹ ಮಾಡಿರುವುದು ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
2015ರ ಏಪ್ರಿಲ್ ನಲ್ಲಿ 36 ರಾಫೆಲ್ ಯುದ್ಧ ವಿಮಾನ ಖರೀದಿಗಾಗಿ ಭಾರತ ಮತ್ತು ಫ್ರಾನ್ಸ್ ನಡುವೆ ಅಂತರ್ ಸರ್ಕಾರಿ ಒಪ್ಪಂದ ನಡೆದಾಗ ಫ್ರಾಂಕೋಯಿಸ್ ಹೊಲಾಂಡೆ ಫ್ರಾನ್ಸ್ ಅಧ್ಯಕ್ಷರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.