ಏರೋ ಇಂಡಿಯಾ; ರಕ್ಷಣಾ ಉತ್ಪನ್ನಗಳ ರಫ್ತಿನತ್ತ ದೇಶದ ಚಿತ್ತ

Published : Feb 11, 2017, 04:49 PM ISTUpdated : Apr 11, 2018, 01:00 PM IST
ಏರೋ ಇಂಡಿಯಾ; ರಕ್ಷಣಾ ಉತ್ಪನ್ನಗಳ ರಫ್ತಿನತ್ತ ದೇಶದ ಚಿತ್ತ

ಸಾರಾಂಶ

ಬೆಂಗಳೂರು (ಫೆ.11): ರಕ್ಷಣಾ ಉತ್ಪನ್ನಗಳನ್ನು ದೇಶೀಯವಾಗಿಯೇ ಉತ್ಪಾದಿಸುವತ್ತ ಮುಂದಡಿ ಇಟ್ಟಿರುವ ಭಾರತ ಇದೀಗ ರಕ್ಷಣಾ ಉತ್ಪನ್ನಗಳ ರಫ್ತಿನ ಮೂಲಕ ಆದಾಯ ಗಳಿಸುವತ್ತ ಚಿತ್ತ  ಹರಿಸಿದೆ.ಈ ಬಾರಿ ಏರೋ ಇಂಡಿಯಾದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ(ಡಿಆರ್‌ಡಿಒ) ಸಂಸ್ಥೆ ರಕ್ಷಣಾ ಉತ್ಪನ್ನಗಳ ಮಾರಾಟ-ಮಾತುಕತೆಗಳಿಗೆ  ಹೆಚ್ಚಿನ ಆದ್ಯತೆ ನೀಡಲಿದೆ.

ಬೆಂಗಳೂರು (ಫೆ.11): ರಕ್ಷಣಾ ಉತ್ಪನ್ನಗಳನ್ನು ದೇಶೀಯವಾಗಿಯೇ ಉತ್ಪಾದಿಸುವತ್ತ ಮುಂದಡಿ ಇಟ್ಟಿರುವ ಭಾರತ ಇದೀಗ ರಕ್ಷಣಾ ಉತ್ಪನ್ನಗಳ ರಫ್ತಿನ ಮೂಲಕ ಆದಾಯ ಗಳಿಸುವತ್ತ ಚಿತ್ತ  ಹರಿಸಿದೆ.ಈ ಬಾರಿ ಏರೋ ಇಂಡಿಯಾದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ(ಡಿಆರ್‌ಡಿಒ) ಸಂಸ್ಥೆ ರಕ್ಷಣಾ ಉತ್ಪನ್ನಗಳ ಮಾರಾಟ-ಮಾತುಕತೆಗಳಿಗೆ  ಹೆಚ್ಚಿನ ಆದ್ಯತೆ ನೀಡಲಿದೆ.

ಯುದ್ಧ ವಿಮಾನಗಳೂ ಸೇರಿದಂತೆ ಬಹುತೇಕ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಇದೀಗ ಲಘು ಯುದ್ಧವಿಮಾನಗಳು(ಎಲ್‌ಸಿಎ), ಹೆಲಿಕಾಪ್ಟರ್‌ಗಳು ಸೇರಿದಂತೆ ’ಏರ್‌ಬೋರ್ನ್‌ ಅರ‌್ಲಿ ವಾರ್ನಿಂಗ್ ಸಿಸ್ಟಮ್’ ಮೊದಲಾದ ಉಪಕರಣಗಳನ್ನು ದೇಶೀಯವಾಗಿಯೇ ನಿರ್ಮಾಣ ಮಾಡುತ್ತಿದೆ.ಈ ಎಲ್ಲ  ಉಪಕರಣಗಳ ಮಾರಾಟ ದೇಶಕ್ಕೆ ಆರ್ಥಿಕವಾಗಿ ಲಾಭ ತಂದುಕೊಡುವ ಜತೆಗೆ ದೇಶದ ಶಕ್ತಿ ಸಾಮರ್ಥ್ಯವನ್ನೂ ಬಿಂಬಿಸಲಿದೆ ಎಂದು ಡಿಆರ್‌ಡಿಒ ಅಧ್ಯಕ್ಷ ಎಸ್.ಕ್ರಿಸ್ಟೋಫರ್ ಹೇಳಿದರು.

ಮಂಗಳವಾರದಿಂದ ಆರಂಭವಾಗಲಿರುವ ಏರೋ ಇಂಡಿಯಾ ೨೦೧೭ದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏರೋ ಇಂಡಿಯಾದಲ್ಲಿ  ನಾವೇ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಇತರ ದೇಶಗಳಿಗೆ, ಸಂಸ್ಥೆಗಳು ಜತೆಗೆ ಸಾರ್ವಜನಿಕರಿಗೆ ಪ್ರದರ್ಶಿಸಲು ಅವಕಾಶವಾಗುತ್ತದೆ. ಇದು ದೇಶದ ಹೆಮ್ಮೆಯಾಗಿದ್ದು ಜತೆಗೆ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೂ ಗೌರವ ತಂದಂತೆ ಆಗುತ್ತದೆ.  ಯಾವುದೇ ರಕ್ಷಣಾ ಉತ್ಪನ್ನಗಳ ಮಾರಾಟಕ್ಕೆ ಇದುವರೆಗೆ ಇಲ್ಲದ ಅವಕಾಶ ಇದೀಗ ಪೂರ್ಣ ಬದಲಾಗಿದ್ದು ಉತ್ಪನ್ನಗಳ ಮಾರಾಟದತ್ತ ಡಿಆರ್‌ಡಿಒ ಮುಂದಡಿ ಇಡುವಂತಾಗಿದೆ. ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಈ ಮೂಲಕ ಇನ್ನಷ್ಟು ಪುಷ್ಠಿ ಸಿಕ್ಕಿದೆ ಎಂದರು.

ತೇಜಸ್ ಖರೀದಿಗೆ ಆಸಕ್ತಿ

ಎಲ್‌ಸಿಎ ತೇಜಸ್ ಕನಸು ನನಸಾಗಿದ್ದು ಸಂಪೂರ್ಣ ಸ್ವದೇಶಿ ನಿರ್ಮಿತ ತೇಜಸ್ ಪೈಲಟ್, ಸಹ ಪೈಲಟ್ ಜತೆಗೆ ಪೈಲಟ್, ಸಹ ಪ್ರಯಾಣಿಕ ಹೀಗೆ ಲಘು ಯುದ್ಧವಿಮಾನಗಳ ಸಾಲಿನಲ್ಲಿ ಡಿಆರ್‌ಡಿಒ ಸಾಧನೆ ಮಾಡಿದೆ. ಮಾರ್ಕ್‌೧, ಮಾರ್ಕ್ ೨ ಎಲ್‌ಸಿಎ  ಇವುಗಳೆಲ್ಲದರ ನಿರ್ಮಾಣ ಅತ್ಯಂತ ಕಡಿಮೆ ವೆಚ್ಛದಲ್ಲಿ ಸಾಧ್ಯವಾಗಿದ್ದು ಇದೀಗ ನೆರೆ ರಾಷ್ಟ್ರಗಳು ಕೂಡ ಈ ಎಲ್‌ಸಿಎಗಳ ಖರೀದಿಗೆ ಆಸಕ್ತಿ ತೋರಿಸುತ್ತಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಹೋಲಿಕೆ ಮಾಡಿದರೆ ಭಾರತೀಯ ನಿರ್ಮಿತ ಎಲ್‌ಸಿಎಗಳ ಬೆಲೆ ನಾಲ್ಕನೆ ಒಂದರಷ್ಟಿದ್ದು  ರಫ್ತು ವ್ಯವಹಾರಕ್ಕೆ ಉಜ್ವಲವಾದ ಅವಕಾಶಗಳಿವೆ. ಕಳೆದ ಹತ್ತು ವರ್ಷಗಳಲ್ಲಿ ಸಾಧ್ಯವಾಗದೇ ಇದ್ದ ಕೆಲವೊಂದು ಯಶಸ್ಸು ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಸಾಧ್ಯವಾಗಿದೆ ಎಂದು ಹೇಳಿದರು. ವಿಯೆಟ್ನಾಂ, ಮ್ಯಾನ್ಮಾರ್ ಬೇಡಿಕೆ

ಡಿಆರ್‌ಡಿಒ ಉತ್ಪನ್ನಗಳಿಗೆ ವಿಯೆಟ್ನಾಂ, ಮ್ಯಾನ್ಮಾರ್ ಮೊದಲಾದ ರಾಷ್ಟ್ರಗಳಿಂದ ಬೇಡಿಕೆ ವ್ಯಕ್ತವಾಗಿದೆ. ವಿಯೆಟ್ನಾಂ ೨೧ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದು (ನೌಕಾಸೇನೆ) ಮ್ಯಾನ್ಮಾರ್ ಕೂಡ ಸಾಗರಗರ್ಭದಲ್ಲಿ ಮಿಲಿಟರಿ ಸರ್ವೇಕ್ಷಣೆ ನಡೆಸುವ ಸೋನಾರ್‌ಗಳನ್ನು ಆಮದು ಮಾಡಿಕೊಂಡಿದೆ. ಇನ್ನೂ ಕೆಲ ರಾಷ್ಟ್ರಗಳೂ ನಮ್ಮೊಂದಿಗೆ ವ್ಯವಹರಿಸಿದ್ದು ಆ ರಾಷ್ಟ್ರಗಳ ವಿನಂತಿ ಮೇರೆಗೆ ಅವುಗಳ ಹೆಸರು ಬಹಿರಂಗಪಡಿಸಲಾಗದು ಎಂದು ಡಿಆರ್‌ಡಿಒ ಅಧ್ಯಕ್ಷರು ಸ್ಪಷ್ಟಪಡಿಸಿದರು.

ದೇಶೀಯವಾಗಿ ಉತ್ಪಾದಿಸಿದ ರಕ್ಷಣಾ ಉತ್ಪನ್ನಗಳ ಮಾರಾಟದ ಮೂಲಕ ಡಿಆರ್‌ಡಿಒ ಈ ಉತ್ಪನ್ನಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಹೊಸ ತಲೆಮಾರಿನ ಉತ್ಪನ್ನಗಳತ್ತ ಗಮನಹರಿಸಲು ಅಥವಾ ಈಗ ತಯಾರಿಸಿದ ಉತ್ಪನ್ನಗಳನ್ನು ಇನ್ನಷ್ಟು ಉನ್ನತ ದರ್ಜೆಗೇರಿಸಲು ಅವಕಾಶವಾಗುತ್ತದೆ. ಆಸಕ್ತ ಗ್ರಾಹಕ ರಾಷ್ಟ್ರಗಳಿಗಾಗಿ ಕಡಿಮೆ ಖರ್ಚಿನಲ್ಲಿ ಈ ಉತ್ಪನ್ನಗಳನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಿ ರಫ್ತು ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ತಂತ್ರಜ್ಞಾನದಲ್ಲೂ ದಾಪುಗಾಲು ಹಾಕುತ್ತಿದ್ದು ಪಿನಾಕಾ(ಮಲ್ಟಿ ಬ್ಯಾರಲ್ ರಾಕೆಟ್ ಲಾಂಚರ್)ದ ಮೂರನೇ ಆವೃತ್ತಿ ಉತ್ಪಾದಿಸಿದಾಗ ಮೊದಲ ಎರಡು ಆವೃತ್ತಿಗಳು(ಮಾರ್ಕ್‌೧,೨)ಗಿಂತ ಹೆಚ್ಚಾಗಿ ಮಾರ್ಕ್ 3 ಗೆ ಹೆಚ್ಚಿನ ಬೇಡಿಕೆ ಬಂದರೂ ಕಡಿಮೆ ಬೆಲೆಯಲ್ಲಿ ಇವುಗಳನ್ನು ಉತ್ಪಾದಿಸಿ ರಫ್ತು ಮಾಡಬಹುದು. ಇಂದಿನ ದಿನಮಾನದಲ್ಲಿ  ರಕ್ಷಣಾ ಉತ್ಪನ್ನಗಳನ್ನು ಖರೀದಿಸುವ  ರಾಷ್ಟ್ರಗಳು ಕೇವಲ ಉತ್ಪನ್ನಗಳನ್ನಷ್ಟೇ ಅಲ್ಲದೇ ಅವುಗಳ ತಂತ್ರಜ್ಞಾನವನ್ನೂ ಖರೀದಿಸಲು ಬಯಸುತ್ತಿದ್ದು

ಈ ತಂತ್ರಜ್ಞಾನ ವರ್ಗಾವಣೆಗೂ ಡಿಆರ್‌ಡಿಒ ಸಿದ್ಧವಿದೆ ಎಂದು ಅಧ್ಯಕ್ಷ ಕ್ರಿಸ್ಟೋಫರ್ ತಿಳಿಸಿದರು.

ಏರೋ ಇಂಡಿಯಾದಲ್ಲಿ ಡಿಆರ್‌ಡಿಓ ವಿಶೇಷತೆ

-ತೇಜಸ್ ಲಘು ಯುದ್ಧ ವಿಮಾನಗಳ ಹಾರಾಟ(ಬೆಳಗ್ಗೆ ಮತ್ತು ಮಧ್ಯಾಹ್ನ)

-ತೇಜಸ್ ಯುದ್ಧ ವಿಮಾನ ಪ್ರದರ್ಶನ

-ರುಸ್ತುಂ೧-ರುಸ್ತುಂ೨(ದ್ರೋಣ್) ಪ್ರದರ್ಶನ

-ಅಸ್ತ್ರ ಕ್ಷಿಪಣಿ ಪ್ರದರ್ಶನ

-ಏರ್‌ಬಾರ್ನ್‌ ಅರ‌್ಲಿ ವಾರ್ನಿಂಗ್ ಕಂಟ್ರೋಲ್ ಸಿಸ್ಟಮ್ ಸೇನೆಗೆ ಸೇರ್ಪಡೆ

ಅವಾಕ್ಸ್  ಸರ್ವೇಕ್ಷಣೆ ವಿಮಾನ ಸೇನೆಗೆ ಸೇರ್ಪಡೆ

’ಯುದ್ಧ ವಿಮಾನಗಳು, ವೈಮಾನಿಕ ದಾಳಿಗಳ ಕುರಿತಾಗಿ  ಎಚ್ಚರಿಕೆ ಸಂದೇಶಗಳನ್ನು ರವಾನಿಸುವ  ಏರ್‌ಬಾರ್ನ್‌ ಅರ‌್ಲಿ ವಾರ್ನಿಂಗ್ ಕಂಟ್ರೋಲ್ ಸಿಸ್ಟಮ್ (ಅವಾಕ್ಸ್) ವಿಮಾನ ಡಿಆರ್‌ಡಿಒ ಸೇನೆಗೆ ಸೇರ್ಪಡೆಗೊಳಿಸುತ್ತಿರುವುದು ಏರೋ ಇಂಡಿಯಾ 11ನೆಯ ಆವೃತ್ತಿಯ ವಿಶೇಷವಾಗಿದೆ. ಈ ಮೂಲಕ ಸ್ವದೇಶಿ ನಿರ್ಮಾಣ ಶಕ್ತಿಯ ಸಂದೇಶ ವಿಶ್ವಕ್ಕೆ ರವಾನೆ ಆಗಲಿದೆ. ಸುಮಾರು ೧೦೦ ಕಿಮೀ ವ್ಯಾಪ್ತಿಯಲ್ಲಿ

240 ಡಿಗ್ರಿಯಷ್ಟು ಕೋನಗಳಲ್ಲಿ ಕಾರ್ಯಾಚರಣೆ ನಡೆಸಬಲ್ಲದು. ಈ ಮಿನಿ ಅವಾಕ್ಸ್ ಪ್ರಮುಖ ಆಕರ್ಷಣೆಯಾಗಲಿದ್ದು ಉದ್ಘಾಟನಾ ಪ್ರದರ್ಶನದಲ್ಲಿ ದೇಶಕ್ಕೆ ಸಮರ್ಪಣೆಗೊಳ್ಳಲಿದೆ. ಆಕಾಶದಲ್ಲೇ ಇಂಧನ ತುಂಬಿಸಿಕೊಳ್ಳಬಲ್ಲ ಈ ವಿಮಾನಗಳು ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ನಿರಂತರ ಸರ್ವೇಕ್ಷಣೆಗೆ ನೆರವಾಗಲಿವೆ. ರೇಡಾರ್, ಡೇಟಾಲಿಂಕ್, ಡಾಟ್‌ಕಾಂ ರೇಡಿಯೋ, ಸ್ವಯಂ ರಕ್ಷಣಾ ಸಾಧನಗಳನ್ನೂ ಇದು ಒಳಗೊಂಡಿದ್ದು ಸಂಪೂರ್ಣ ಡಿಆರ್‌ಡಿಒ ನಿರ್ಮಿತ ವ್ಯವಸ್ಥೆ ಇದಾಗಿದೆ.

ಮುಂದಿನ ಏರ್‌ಶೋಗೆ ಕಾವೇರಿ ಎಂಜಿನ್!

ಮುಂದಿನ ಏರ್‌ಶೋದಲ್ಲಿ ದೇಶದಲ್ಲೇ ನಿರ್ಮಿತ ವಿಮಾನದ ಎಂಜಿನ್ ಕಾವೇರಿ ಪ್ರದರ್ಶನವಾಗಲಿದೆ. ಇದೀಗ ಮಾದರಿ ಎಂಜಿನ್ ನಿರ್ಮಾಣವಾಗಿದ್ದು ಈ ಎಂಜಿನ್ ಹಾರಾಟ ಯೋಗ್ಯ ಮತ್ತು ಸಂಪೂರ್ಣ ಸುರಕ್ಷಿತ ಎಂಬುದು ಪ್ರಮಾಣೀಕರಿಸಬೇಕಿದೆ. ಮುಂದಿನ ವರ್ಷಾಂತ್ಯದೊಳಗೆ ಎಲ್ಲ ಪರೀಕ್ಷೆಗಳನ್ನೂ ಪೂರೈಸಿ ಕಾವೇರಿ ಎಂಜಿನ್ ಸಿದ್ಧಗೊಳ್ಳಲಿದೆ ಎಂದು ಡಿಆರ್‌ಡಿಒ ಅಧ್ಯಕ್ಷ ಎಸ್.ಕ್ರಿಸ್ಟೋಫರ್ ತಿಳಿಸಿದರು.

-ವರದಿ; ಪ್ರಶಾಂತ್ ಕುಮಾರ್ ಎಂ.ಎನ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕೆಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ