
ಗಡ್ಕರಿಯ ‘ಬಂಡು’:
ಕೇಂದ್ರ ಸಚಿವ ನಿತಿನ್ ಗಡ್ಕರಿ ಬಳಿ ಯಾರಾದರೂ ರಾಹುಲ್ ಗಾಂಧಿ ಬಗ್ಗೆ ತಾರೀಫ್ ಮಾಡಿದರೆ ಸಾಕು ಒಂದು ಜೋಕ್ ಹೇಳುತ್ತಾರೆ. ಮೊನ್ನೆ ಕೆಲ ಪತ್ರಕರ್ತರು ಅಮೆರಿಕದಲ್ಲಿ ರಾಹುಲ್ ಚೆನ್ನಾಗಿ ಮಾತನಾಡಿ ಇಮೇಜ್ ಬದಲಾವಣೆ ಮಾಡಿಕೊಂಡ್ರು ಎಂದು ಹೇಳಿದಾಗ ಗಡ್ಕರಿ ಹೇಳಿದ ಜೋಕ್ ಮಜವಾಗಿದೆ. ಗಡ್ಕರಿ ಮನೆಯಲ್ಲಿ ಮೊಮ್ಮಗನನ್ನು ಪ್ರೀತಿಯಿಂದ ಬಂಡು ಬಂಡ್ಯ ಎಂದು ಕರೆಯುತ್ತಾರಂತೆ. ಗಡ್ಕರಿ ಪತ್ನಿ ದಿನವೂ ಮೊಮ್ಮಗನ ಚಟುವಟಿಕೆ ನೋಡಿ ನಿತಿನ್‌ಜೀಗೆ ಫೋನ್ ಮಾಡುತ್ತಾರಂತೆ. ನೋಡ್ರಿ ಬಂಡು ಇವತ್ತು ಅಂಬೆಗಾಲು ಇಟ್ಟ, ಬಂಡು ಇವತ್ತು ನಡೆದ, ಇವತ್ತು ಓಡಿದ, ಇವತ್ತು ಸೈಕಲ್ ಹೊಡೆದ ಎಂದು... ಗಡ್ಕರಿ ಹೇಳುವ ಪ್ರಕಾರ ಕಾಂಗ್ರೆಸ್ಸಿಗರ ಮತ್ತು ಕೆಲ ಪತ್ರಕರ್ತರ ರಾಹುಲ್ ಬಗೆಗಿನ ಪ್ರಶಂಸೆ ಬಂಡುವಿನ ಕೌತುಕದ ಥರವೇ ಇದೆಯಂತೆ. ರಾಹುಲ್ ಇಮೇಜ್ ಮೇಕ್ ಓವರ್ ಆಯ್ತು ಎಂದು ನೀವು ಹೇಳುತ್ತಲೇ ಇರುತ್ತೀರಿ, ಆದರೆ ರಾಹುಲ್ ಬದಲಾಗೋದಿಲ್ಲ ಬಿಡಿ ಎನ್ನುತ್ತಾರೆ ಗಡ್ಕರಿ.
ರಾಹುಲ್ ಮಂದಿರ ಯಾತ್ರೆ:
ಗುಜರಾತ್‌ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಡೆಸಿದ ಪ್ರವಾಸ ಅಕ್ಷರಶಃ ತೀರ್ಥಯಾತ್ರೆಯ ಥರ ಇತ್ತಂತೆ. ಮೊದಲಿಗೆ ಗುಜರಾತ್'ನಲ್ಲಿರುವ ವೈಷ್ಣವ ಸಂಪ್ರದಾಯದ ಅರ್ಹಿ ಸಮುದಾಯವನ್ನು ಓಲೈಸಲು ದ್ವಾರಕಾಧೀಶ ಮಂದಿರಕ್ಕೆ ಭೇಟಿ ನೀಡಿದ ರಾಹುಲ್, ಸೌರಾಷ್ಟ್ರದಲ್ಲಿ 22 ಪ್ರತಿಶತ ಇರುವ ಹಿಂದುಳಿದ ಕೋಳಿ ಸಮುದಾಯವನ್ನು ಖುಷಿಪಡಿಸಲು ಹೋಗಿದ್ದು ಚಾಮುಂಡಾ ಮಂದಿರಕ್ಕೆ. ಅಲ್ಲಿಂದ ಪ್ರಬಲ ಪಟೇಲ್ ಸಮುದಾಯ ಪೂಜಿಸುವ ಕಾವ್'ಗಡ್'ನಲ್ಲಿರುವ ಖೋಡಿರ್ಯಾ ಮಾತೆ ಮಂದಿರಕ್ಕೆ ಹೋಗಿ, ಅಲ್ಲಿಂದ ವ್ಯಾಪಾರಿ ಸಮುದಾಯದ ಲೋಹಣಾಗಳು ಪೂಜಿಸುವ ವೀರರ್ಪುನಲ್ಲಿರುವ ಜಲರಾಮ್ ಬಾಪಾ ಮಂದಿರಕ್ಕೂ ಹೋಗಿ ಬಂದಿದ್ದಾರೆ. ಕೊನೆಗೆ ಯುವಕರನ್ನು ಆಕರ್ಷಿಸಲು ನವರಾತ್ರಿಯಲ್ಲಿ ಮಾಡಲಾಗುವ ಗರ್ಬಾನೃತ್ಯ ಕಾರ್ಯಕ್ರಮದಲ್ಲೂ ಪಾಲ್ಗೊಂಡು ಬಂದ ಅವರು, ತಾವು ಮಾಡಿರುವ ದೇವಿ ಆರತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಆದರೆ ಪ್ರತಿಭಟನೆಗೆ ಹೋಗಿ ರಾಹುಲ್ ಕೇವಲ ಫೋಟೋ ತೆಗೆಸಿಕೊಳ್ಳುವ ಹಾಗೆ ಮಂದಿರಕ್ಕೆ ಹೋಗಿ ಸೆಲ್ಫಿ ತೆಗೆದುಕೊಂಡರೆ ಸಾಲದು. ಚುನಾವಣೆಗೆ ರಣತಂತ್ರವನ್ನೂ ಹೆಣೆಯಬೇಕು. ಆಗ ಮಾತ್ರ 20 ವರ್ಷಗಳಿಂದ ದೂರ ಹೋಗಿರುವ ಗುಜರಾತಿಗಳು ಸ್ವಲ್ಪ ಹತ್ತಿರ ಬಂದಾರು.
ಇದನ್ನೂ ಓದಿ: ಮೋದಿ ವಿರುದ್ಧ ಆಡ್ವಾಣಿ ಮೈಕ್ ಟೆಸ್ಟಿಂಗ್
- ಪ್ರಶಾಂತ್ ನಾತು, ಕನ್ನಡಪ್ರಭ
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.