ಉ.ಪ್ರ. ಸಿಎಂ ಆಗಬೇಕಿದ್ದ ಮನೋಜ್ ಸಿನ್ಹಾ ಕೊನೇ ಕ್ಷಣದಲ್ಲಿ ಕುರ್ಚಿ ಮಿಸ್ ಮಾಡಿಕೊಂಡಿದ್ದೇಕೆ?

By Suvarna Web DeskFirst Published Mar 21, 2017, 1:52 PM IST
Highlights

ಕಳೆದ ವಾರ ಬಿಜೆಪಿ ಕೋರ್‌ ಕಮಿಟಿಯಲ್ಲಿ ರಾಜ್ಯದ ಬಿಜೆಪಿ ನಾಯಕರನ್ನು ಕಾಡಿದ ಮುಖ್ಯ ಪ್ರಶ್ನೆ ಎಸ್‌.ಎಂ.ಕೃಷ್ಣ ಬಿಜೆಪಿ ಸೇರಲು ಇಟ್ಟಿರುವ ಡಿಮ್ಯಾಂಡ್‌ ಏನು ಎಂಬುದು. ಕೊನೆಗೆ ಬಿಎಸ್‌ವೈ ಅವರು ‘ಕೃಷ್ಣ ನನಗೇನೂ ಬೇಡ, ಉಪರಾಷ್ಟ್ರಪತಿ ಹುದ್ದೆ ಕೊಟ್ಟರೂ ಸ್ವೀಕರಿಸಲ್ಲ ಎಂದಿದ್ದಾರೆ' ಎಂದು ಸ್ಪಷ್ಟಪಡಿಸಿದರಂತೆ.

ಇಂಡಿಯಾ ಗೇಟ್‌ - ದೆಹಲಿಯಿಂದ ಕಂಡ ರಾಜಕಾರಣ

ಫೋನ್‌ ಚರ್ಚೆಯಲ್ಲಿ ಸಿಎಂ ಆಯ್ಕೆ
ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಕೇಂದ್ರ ಸಚಿವ ಮನೋಜ್‌ ಸಿನ್ಹಾ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿತ್ತು. ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರ ಮೊದಲ ಆಯ್ಕೆಯೂ ಮನೋಜ್‌ ಸಿನ್ಹಾ ಅವರೇ ಆಗಿದ್ದರು. ಆದರೆ ಶುಕ್ರವಾರ ರಾತ್ರಿ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಯೋಗಿ ಆದಿತ್ಯನಾಥ್‌ ಹೆಸರನ್ನು ಅಂತಿಮಗೊಳಿಸಲಾಯಿತು ಎಂದು ಹೇಳಲಾಗುತ್ತಿದೆ. ಯೋಗಿ ಆದಿತ್ಯನಾಥ್‌ ಹೆಸರಿಗೆ ರಾಜನಾಥ್‌ ಸಿಂಗ್‌ರ ಒಪ್ಪಿಗೆ ಇರಲಿಲ್ಲವಂತೆ. ಆದರೆ, ಮೋಹನ್‌ ಭಾಗವತ್‌ ಮತ್ತು ನರೇಂದ್ರ ಮೋದಿ ನಿರ್ಧರಿಸಿದ ಮೇಲೆ ಶನಿವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ಯೋಗಿ ಆದಿತ್ಯನಾಥ್‌ ಅವರನ್ನು ಕರೆಸಿಕೊಂಡ ಶಾ, ನೀವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿ​ದಾಗಲೇ ಯೋಗಿಗೆ ವಿಷಯ ಗೊತ್ತಾಗಿದೆ. ಹೊಸ ಮುಖ್ಯಮಂತ್ರಿ ಆಯ್ಕೆ​ಯನ್ನು ಸಂಜೆ 6 ಗಂಟೆಗೆ ಘೋಷಿಸುವ ಮುಂಚೆ ಅಮಿತ್‌ ಶಾ 4.45ಕ್ಕೆ ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್‌ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. 

Latest Videos

ಬಿಜೆಪಿ ರಾಜಕಾರಣಿ ಮಕ್ಕಳ ಕಷ್ಟ
ಮೋದಿ ಪ್ರಧಾನಿಯಾದ ಮೇಲೆ ಬಿಜೆಪಿಯಲ್ಲಿ ಸಕ್ರಿಯ ರಾಜ​ಕಾರ​ಣಿ​ಗಳ ಮಕ್ಕಳು ಅಧಿಕಾರ ಸಿಗದೇ ಕಷ್ಟ ಅನುಭವಿಸುತ್ತಿದ್ದಾರೆ. ರಾಜನಾಥ್‌ ಸಿಂಗ್‌ ಎಷ್ಟೇ ಪ್ರಯತ್ನಪಟ್ಟರೂ ಕೂಡ ಪುತ್ರ ಪಂಕಜ್‌ ಸಿಂಗ್‌'ರನ್ನು ಯೋಗಿ ಆದಿತ್ಯನಾಥ್‌'ರ ಸಂಪುಟದಲ್ಲಿ ಮಂತ್ರಿ ಮಾಡಲು ಮೋದಿ, ಅಮಿತ್‌ ಶಾ ಒಪ್ಪಲಿಲ್ಲವಂತೆ. ಮೊದಲೇ ಉತ್ತರ​ಪ್ರದೇಶದ ಗೆಲು​ವಿನ ಬಗ್ಗೆ ತನ್ನ ಹೆಸರನ್ನು ಯಾರೂ ಹೇಳುತ್ತಿಲ್ಲವೆಂದು ಬೇಸರಿ​ಸಿ​ಕೊಂಡಿದ್ದ ರಾಜನಾಥ್‌ ಸಿಂಗ್‌, ಪುತ್ರನಿಗೆ ಮಂತ್ರಿಗಿರಿ ಕೊಡಿ​ಸ​ಲಾಗದ ನೋವನ್ನೂ ಕೂಡ ಯಾರ ಬಳಿಯೂ ಹೇಳಿಕೊಳ್ಳಲು ಸಾಧ್ಯ​ವಾಗದೆ ಒದ್ದಾಡು​ತ್ತಿ​ದ್ದಾರೆ. ಇನ್ನು ವಸುಂಧರಾ ಪುತ್ರ ದುಷ್ಯಂತ್‌ ಸಿಂಗ್‌, ರಮಣ ಸಿಂಗ್‌ ಪುತ್ರ ಅಭಿಷೇಕ್‌ ಸಿಂಗ್‌, ಪ್ರೇಮ್‌'ಕುಮಾರ ಧುಮಾಲ್‌ ಪುತ್ರ ಅನು​ರಾಗ್‌ ಠಾಕೂರ್‌'ರನ್ನೂ ಮೋದಿ ಅಧಿಕಾರದಿಂದ ದೂರ​ವಿ​ಟ್ಟಿ​ದ್ದಾರೆ. 

ಪವರ್‌'ಫುಲ್‌ ಜಿಲ್ಲೆ ಪೌರಿಗಡವಾಲ್‌
ಉತ್ತರಾಖಂಡ ರಾಜ್ಯದ ಗುಡ್ಡಗಾಡು ಜಿಲ್ಲೆ ಪೌರಿಗಡವಾಲ್‌ ಸದ್ಯಕ್ಕೆ ದೇಶದ ಅತ್ಯಂತ ಪವರ್‌'ಫುಲ್‌ ಜಿಲ್ಲೆ. ಉತ್ತರಪ್ರದೇಶದ ಸಿಎಂ ಅಜಯ್‌ ಸಿಂಗ್‌ ಬಿಶ್ಟ್ ಉರುಫ್‌ ಯೋಗಿ ಆದಿತ್ಯನಾಥ್‌, ಉತ್ತರಾ​ಖಂಡದ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌, ರಾಷ್ಟ್ರೀಯ ಭದ್ರತಾ ಸಲಹೆ​ಗಾರ ಅಜಿತ್‌ ದೋವಲ್‌, ಭೂ ಸೇನೆಯ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ಬೇಹುಗಾರಿಕಾ ಸಂಸ್ಥೆ ‘ರಾ' ಮುಖ್ಯಸ್ಥ ಅನಿಲ್‌ ಧಸ​ಮಾನಾ ಎಲ್ಲರೂ ಕೂಡ ಇದೇ ಜಿಲ್ಲೆಯವರು ಎನ್ನುವುದು ವಿಶೇಷ. 

ದೈವಭಕ್ತ ದೇವೇಗೌಡರು 
ಕರ್ನಾಟಕದ ರಾಜಕಾರಣಿಗಳಲ್ಲಿ ಅತ್ಯಂತ ಹೆಚ್ಚು ದೈವಭಕ್ತ ರಾಜ​ಕಾ​ರಣಿ ಅಂದರೆ ಅದು ಮಾಜಿ ಪ್ರಧಾನಿ ದೇವೇಗೌಡರು. ದೆಹಲಿ​ಯ​ಲ್ಲಿ​ದ್ದಾ​ಗಲೂ ಬೇಸಿಗೆಯಿರಲಿ, ಚಳಿಯಿರಲಿ ದಿನಕ್ಕೆ 2 ಬಾರಿ ಸ್ನಾನ ಮಾಡುವ ಗೌಡರು ವಿಷ್ಣು ಸಹಸ್ರನಾಮ, ಹನುಮಾನ್‌ ಚಾಲೀಸಾ ಪಠಿಸುವುದನ್ನು ತಪ್ಪಿಸುವುದಿಲ್ಲವಂತೆ. ದೇವೇಗೌಡರ ಆಪ್ತರು ಹೇಳುವ ಪ್ರಕಾರ ಜ್ಯೋತಿಷಿ ಒಬ್ಬರು ದೇವೇಗೌಡರಿಗೆ ಮುಂದಿನ ವರ್ಷ ಅಧಿಕಾರ ಮರಳಿ ಬರಲಿದೆ ಎಂದು ಹೇಳಿದ್ದಾರಂತೆ. 

ಕೈಕೊಟ್ಟ ದಿಗ್ವಿಜಯ್ ಸ್ಟೈಲ್
ಗೋವಾದಲ್ಲಿ ಅಧಿಕಾರದ ಹತ್ತಿರಕ್ಕೆ ಬಂದರೂ ಕೂಡ ಸರ್ಕಾರ ರಚಿ​ಸ​ದೆ ಇರಲು ಕಾಂಗ್ರೆಸ್‌ ಉಸ್ತುವಾರಿ ದಿಗ್ವಿಜಯ್ ಸಿಂಗ್‌ ಕಾರಣ ಎಂದು ಅಲ್ಲಿನ ಕಾಂಗ್ರೆಸ್‌ ಶಾಸಕರು ರಾಹುಲ್‌ ಗಾಂಧಿಗೆ ದೂರು ನೀಡಿ​ದ್ದಾರೆ. ಗೋವಾ ಪೀಪಲ್ ಫ್ರಂಟ್‌'ನ ಮೂವರು ಶಾಸಕರು ಕಾಂಗ್ರೆಸ್‌ಗೆ ಬೆಂಬಲ ನೀಡಲು ಸಂಜೆಯೇ ತಯಾರಿದ್ದರೂ ಕೂಡ ನಾಳೆ ಬೆಳಗ್ಗೆ ಮಾತಾ​ಡೋಣ ಎಂದು ಹೋಟೆಲ್‌ಗೆ ಹೋದ ದಿಗ್ವಿ​ಜಯ್‌ ಸಿಂಗ್‌ ಬೆಳಗ್ಗೆ ಏಳುವುದರೊಳಗೆ ಮೂವರು ಶಾಸಕರು ಮನೋಹರ್‌ ಪರಿ​ಕ್ಕರ್‌ ಜಿಂದಾಬಾದ್‌ ಎಂದು ಹೇಳುತ್ತಿದ್ದರಂತೆ. ಸಂಜೆಯೇ ಬೆಂಬಲ ನೀಡಲು ತಯಾರಿದ್ದ ಮೂವರು ಶಾಸಕರನ್ನು ಪತ್ರಿಕಾ​ಗೋಷ್ಠಿ ನಡೆಸಿ ಹೇಳಿಕೆ ಕೊಡಿಸದೆ ‘ನಾಳೆ ನೋಡೋಣ' ಎಂದು​ ಹೇಳಿದ್ದೇ ಕಾಂಗ್ರೆಸ್‌ಗೆ ಮುಳುವಾಯಿತು ಎನ್ನಲಾಗುತ್ತಿದೆ. ಹೀಗಾ​ಗಿಯೇ ಕರ್ನಾಟಕದಿಂದ ಕೂಡ ದಿಗ್ವಿಜಯ್‌ರನ್ನು ತೆಗೆ​ಯಲು ಯೋಚಿಸಲಾಗುತ್ತಿದ್ದು, ಅವರ ಸ್ಥಾನಕ್ಕೆ ಕೇರಳದ ಸಂಸದ ಕೆ.ವಿ.ಥಾಮಸ್‌ ಹೆಸರು ಕೇಳಿಬರುತ್ತಿದೆ. 

ಜೇಟ್ಲಿ ಕಂಡರೆ ಮೋದಿಗಾಗಲ್ವಾ?
2014ರಲ್ಲಿ ನರೇಂದ್ರ ಮೋದಿ ದೆಹಲಿಗೆ ಪ್ರಧಾನಿಯಾಗಿ ಬಂದಾಗ ಅರುಣ್‌ ಜೇಟ್ಲಿ ಹೇಳಿದ್ದೇ ಅಂತಿಮ ಎಂಬ ವಾತಾವರಣವಿತ್ತು. ಆದರೆ, ಸರ್ಕಾರಕ್ಕೆ ಮೂರು ವರ್ಷಗಳು ತುಂಬುತ್ತಿರುವಾಗ ಎಲ್ಲವೂ ಬದಲಾಗಿದ್ದು, ಅರುಣ್‌ ಜೇಟ್ಲಿ ಅವರನ್ನು ಈಗ ಯಾವುದೇ ವಿಷಯ​ದಲ್ಲೂ ಕೂಡ ಪ್ರಧಾನಿ ಮೋದಿ ಅಭಿಪ್ರಾಯ ಕೇಳುತ್ತಿಲ್ಲವಂತೆ. ಜೇಟ್ಲಿ ಅಭಿಪ್ರಾಯ ಸರಿಯಾಗಿ ಇರಲ್ಲ ಮತ್ತು ಒಳಜಗಳ ಹೆಚ್ಚಲು ಮೂಲ ಕಾರಣವೇ ಜೇಟ್ಲಿ ಎಂದು ಮೋದಿ ಮತ್ತು ಅಮಿತ್‌ ಶಾ ಇಬ್ಬರಿಗೂ ಮನವರಿಕೆಯಾಗಿದೆಯಂತೆ. ಅಂದ ಹಾಗೆ ಯಡಿ​ಯೂರಪ್ಪ​ನವರಿಗೆ ದೆಹಲಿಯಲ್ಲಿ ಆಪದ್ಬಾಂಧವ ಅರುಣ್‌ ಜೇಟ್ಲಿ. 

ಕೃಷ್ಣ ಇಟ್ಟಿರುವ ಡಿಮ್ಯಾಂಡ್‌ ಏನು?
ಕಳೆದ ವಾರ ಬಿಜೆಪಿ ಕೋರ್‌ ಕಮಿಟಿಯಲ್ಲಿ ರಾಜ್ಯದ ಬಿಜೆಪಿ ನಾಯಕರನ್ನು ಕಾಡಿದ ಮುಖ್ಯ ಪ್ರಶ್ನೆ ಎಸ್‌.ಎಂ. ಕೃಷ್ಣ ಬಿಜೆಪಿ ಸೇರಲು ಇಟ್ಟಿರುವ ಡಿಮ್ಯಾಂಡ್‌ ಏನು ಎಂಬುದು. ಆದರೆ, ಸಭೆಯಲ್ಲಿ ಎಲ್ಲರೂ ಇದೇ ಪ್ರಶ್ನೆ ಕೇಳಿದಾಗ ಯಡಿಯೂರಪ್ಪನವರು ಕೃಷ್ಣ ಅವರು ನನಗೇನೂ ಬೇಡ, ಉಪರಾಷ್ಟ್ರಪತಿ ಹುದ್ದೆ ಕೊಟ್ಟರೂ ಸ್ವೀಕರಿಸಲ್ಲ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರಂತೆ. ಎಸ್‌.ಎಂ.ಕೃಷ್ಣ ಬಿಜೆಪಿ ಸೇರ್ಪಡೆಗೆ ಜ್ಯೋತಿಷಿ ಒಬ್ಬರಿಂದ ಸಮಯವನ್ನೂ ಪಡೆದಿದ್ದರಂತೆ. ಬೆಳಗ್ಗೆ 11 ಗಂಟೆಗೆ ಪಕ್ಷದ ಕಚೇರಿಗೆ ಹೋಗಿ ಮೊದಲು ಸೇರ್ಪಡೆಯಾಗಿ ಬಿಡಿ, ನಂತರ ಯಾವಾಗ ಬೇಕಾದರೂ ಪತ್ರಿಕಾ​ಗೋಷ್ಠಿ ನಡೆಸಿದರೆ ಆಗಬಹುದು ಎಂದು ಜ್ಯೋತಿಷಿ ಹೇಳಿದ್ದನ್ನೇ ಕೃಷ್ಣ ಅವರು ಅಶೋಕ್‌ ಬಳಿ ಹೇಳಿ ಕಳುಹಿಸಿದ್ದರಂತೆ. ಆದರೆ, ತಂಗಿ ಸುನೀತಾ ಅವರ ಸಾವಿನ ಕಾರಣದಿಂದ ಎಲ್ಲವೂ ಬದಲಾವಣೆಯಾಗಿದೆ. ಇನ್ನೊಂದು ಕುತೂಹಲ ಎಂದರೆ, ಕೃಷ್ಣ ಸಾಹೇಬರನ್ನು ಬಿಜೆಪಿ ನಾಯಕರು ಕೋರ್‌ ಕಮಿಟಿಯ ಜಾಗದಿಂದಲೇ ಮಾತನಾಡಿಸಲು ಪ್ರಯತ್ನ ಪಟ್ಟರೂ ಕೃಷ್ಣ ಅವರ ಕಾರ್ಯದರ್ಶಿ ‘ಸಾಹೇಬರು ಕಾರಿನಲ್ಲಿ ಹೋಗುವಾಗ ಮೊಬೈಲ್‌ನಲ್ಲಿ ಮಾತನಾಡೋಲ್ಲ' ಎಂದು ಹೇಳಿದ್ದರಿಂದ ಆರ್‌.ಅಶೋಕ್‌ ಅವರು ಸಭೆಯಿಂದ ಅರ್ಧಕ್ಕೆ ಹೊರ ಹೋಗಿ, ಎಸ್‌'ಎಂ ಕೃಷ್ಣರ ಬಿಜೆಪಿ ಸೇರ್ಪಡೆಯ ವಿಧಿ ವಿಧಾನಗಳ ಬಗ್ಗೆ ಮಾತನಾಡಲು ಹೋಟೆಲ್‌'ಗೆ ಧಾವಿಸಿದರಂತೆ. 

ಪವಾರ್‌, ಲಾಲು ಬಳಿ ಹತಾಶ ರಾಹುಲ್‌
ಉತ್ತರಪ್ರದೇಶ ಚುನಾವಣೆಯಲ್ಲಿ ಸೋಲಿನ ನಂತರ ರಾಹುಲ್‌ ಹತಾಶರಾಗಿದ್ದು, ಸಂಸತ್ತಿಗೂ ಕೂಡ ಬರಲು ಮನಸ್ಸಿಲ್ಲದೆ ವಿದೇಶಕ್ಕೆ ತಾಯಿ ಭೇಟಿಯಾಗಲು ಹೋಗಿದ್ದಾರೆ. ಚುನಾ​ವಣೆ​ಯಲ್ಲಿ ಸೋತ ದಿನದ ರಾತ್ರಿ ಶರದ್‌ ಪವಾರ್‌ ನಿವಾಸಕ್ಕೆ ತೆರ​ಳಿದ್ದ ರಾಹುಲ್‌ ಸುಮಾರು 2 ಗಂಟೆ ಮನ್‌ ಕಿ ಬಾತ್‌ ನಡೆ​ಸಿ​ದ​ರಂತೆ. 2019ರ ಮೊದಲು ಎಲ್ಲ ಸೆಕ್ಯುಲರ್‌ ಪಕ್ಷಗಳನ್ನು ನೀವು ಒಟ್ಟುಗೂಡಿಸಿ ಎಂದು ಕೇಳಿಕೊಂಡಿ​ದ್ದಾ​ರಂತೆ. ಅಂದ ಹಾಗೆ ರಾಹುಲ್‌ ಬಾಬಾ ಮರುದಿನ ಲಾಲು ಯಾ​ದವ್‌ ಬಳಿಯೂ ಸೋಲಿನ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರಂತೆ. 

ಪಿ.ಕೆ. ಇನ್‌ ಕರ್ನಾಟಕ
ಪ್ರಶಾಂತ್‌ ಕಿಶೋರ್‌ ಅವರನ್ನು ಕರ್ನಾಟಕಕ್ಕೆ ಕರೆತರಲು ದೇವೇಗೌಡರ ಮೊಮ್ಮಗ ಪ್ರಜ್ವಲ್‌ ಗೌಡ ಪ್ರಯತ್ನ ಪಡುತ್ತಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ಸುದ್ದಿ ಓಡಾಡುತ್ತಿದೆ. ಈ ಬಗ್ಗೆ ಪ್ರಶಾಂತ್‌ ಕಿಶೋರ್‌ ಅವರನ್ನೇ ಕೇಳಿದಾಗ ಅವರು ನಗೆ ಬೀರಿದರೇ ಹೊರತು ಗುಟ್ಟು ಬಿಟ್ಟು ಕೊಡಲಿಲ್ಲ. ಆದರೆ, ಕಾಂಗ್ರೆಸ್‌ ಹೈಕಮಾಂಡ್‌ ದೆಹಲಿಯ ಏಜೆನ್ಸಿ ಒಂದಕ್ಕೆ ಕರ್ನಾಟಕದಲ್ಲಿ ಪಕ್ಷದ ಸ್ಥಿತಿಗತಿ ಬಗ್ಗೆ ಸರ್ವೇ ನಡೆಸುವಂತೆ ಹೇಳಿ​ದ್ದು, ಈ ಏಜೆನ್ಸಿ ಕೂಡ ಪ್ರಶಾಂತ್‌ ಕಿಶೋರ್‌ ಆಪ್ತರದ್ದೇ ಎನ್ನುವುದು ಸ್ಪಷ್ಟವಾಗಿಲ್ಲ. 

ಫೋನ್‌ ಅಂದ್ರೆ ಎಲ್ಲರಿಗೂ ಹೆದರಿಕೆ
ಇತ್ತೀಚೆಗೆ ಕರ್ನಾಟಕದ ವಿಪಕ್ಷ ನಾಯಕರ ಫೋನ್‌ ಟ್ಯಾಪ್‌ ಆಗುತ್ತಿದೆ ಎನ್ನುವುದು ಅನೇಕ ಸಂಸದರ ಹೆದರಿಕೆಗೆ ಕಾರಣವಾಗಿದೆ. ಹೀಗಾಗಿ ಯಾರೂ ಕೂಡ ರಾಜಕೀಯದ ಬಗ್ಗೆ ಫೋನ್‌'ನಲ್ಲಿ ಮಾತನಾಡುತ್ತಿಲ್ಲ. ಕೆಲ ಹಿರಿಯ ಸಂಸದರು ಖಾಸಗಿಯಾಗಿ ಹೇಳುವ ಪ್ರಕಾರ ಚುನಾವಣೆಗೆ ಮೊದಲು ಇವೆಲ್ಲ ಮಾಮೂಲಿನ ಸಂಗತಿಯಂತೆ.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್‌ 

click me!