ಕೆಪಿಸಿಸಿ ಅಧ್ಯಕ್ಷರಾಗಲು ಡಿಕೆಶಿ ಇಟ್ಟಿದ್ದಾರಾ ಷರತ್ತು?

By Suvarna Web DeskFirst Published Apr 4, 2017, 10:43 AM IST
Highlights

ಆಕ್ಸ್‌ಫರ್ಡ್‌ಗೆ ಹೋಗಿ ಭಾಷಣ ಮಾಡಲು ತರೂರ್‌ ಮೂಲಕ ಲಾಬಿ ಮಾಡಿಸ್ತಿದ್ದಾರಾ ರಾಹುಲ್‌!

ಇಂಡಿಯಾ ಗೇಟ್‌ | ದೆಹಲಿಯಿಂದ ಕಂಡ ರಾಜಕಾರಣ

ರಾಜ್ಯ ಕಾಂಗ್ರೆಸ್ಸಿಗೆ ಡಿಕೆಶಿ ಅಧ್ಯಕ್ಷರಾಗ್ತಾರಾ?
ಉಪಚುನಾವಣೆ ನಂತರ ರಾಜ್ಯ ಕಾಂಗ್ರೆಸ್‌ಗೆ ಹೊಸ ಅಧ್ಯಕ್ಷರ ನೇಮಕ ಆಗುವ ಸಂಭವವಿದೆ. ಒಕ್ಕಲಿಗರ ಪ್ರಭಾವಿ ನಾಯಕ ಎಸ್‌.ಎಂ.ಕೃಷ್ಣ ಪಕ್ಷ ತ್ಯಜಿಸಿದ ನಂತರ ಬಹುತೇಕ ಡಿ.ಕೆ.ಶಿವಕುಮಾರ್‌ ಹೆಸರನ್ನೇ ರಾಹುಲ್ ಗಾಂಧಿ ಫೈನಲ್‌ ಮಾಡುತ್ತಾರೆ ಎಂಬ ಬೆಟ್ಟಿಂಗ್‌ ನಡೆಯುತ್ತಿದೆ. ಆದರೆ ಕೆಪಿಸಿಸಿ ಅಧ್ಯಕ್ಷ​ರಾಗಲು ಡಿಕೆಶಿ ಕೆಲ ಷರತ್ತುಗಳನ್ನು ಹೈಕಮಾಂಡ್‌ ಮುಂದೆ ಇಟ್ಟಿದ್ದಾರೆ ಎಂಬ ಅಂತೆಕಂತೆಗಳು ಇಲ್ಲಿ ದಟ್ಟವಾಗಿವೆ. ಮೊದಲ​ನೆಯದು- ಯಾವುದೇ ಕಾರಣಕ್ಕೂ ಚುನಾವಣೆಗೆ ಮುಂಚೆ ಸಿದ್ದರಾಮಯ್ಯ ಅಥವಾ ಇನ್ನಾರನ್ನೂ ಮುಂದಿನ ಮುಖ್ಯಮಂತ್ರಿಯಾಗಿ ಬಿಂಬಿ​ಸ​​ಕೂಡದು. ಸಾಮೂಹಿಕ ನೇತೃತ್ವದಲ್ಲಿಯೇ ಚುನಾವಣೆ ಎದುರಿ​ಸಬೇಕು. ಎರಡನೆಯದು- ಟಿಕೆಟ್‌ ಹಂಚಿಕೆ ಮಾಡಲು ಮತ್ತು ಪ್ರಚಾರ ರೂಪಿಸಲು ತನಗೆ ಫ್ರೀ ಹ್ಯಾಂಡ್‌ ನೀಡಬೇಕು. ಆದರೆ, ಷರತ್ತು​ಗಳನ್ನು ಕೇಳಿಸಿಕೊಂಡಿರುವ ದೆಹಲಿ ನಾಯಕರು ಡಿಕೆಶಿಗೆ ‘ಆಯ್ತು' ಅಂತಾನೂ ಹೇಳಿಲ್ಲ ‘ಇಲ್ಲ' ಅಂತಾನೂ ಹೇಳಿಲ್ಲವಂತೆ. ಶಿವ​ಕುಮಾರ್‌ ಆಪ್ತರು ಖಾಸಗಿಯಾಗಿ ಸಿಕ್ಕಾಗ ಹೇಳುವ ಪ್ರಕಾರ ‘ಸಾಹೇಬರು ಈಗ ಅಧ್ಯಕ್ಷರಾದರೂ ಪಕ್ಷ ಏಕಾಂಗಿಯಾಗಿ ಅಧಿಕಾರಕ್ಕೆ ಬರದಿದ್ದರೆ ಕಷ್ಟ. ಜೆಡಿಎಸ್‌ ಜೊತೆಗೂಡಿ ಸರ್ಕಾರ ರಚಿಸುವಂತಾದರೆ ಮತ್ತು ಆಗ ದೇವೇ​ಗೌಡ​​ರು ಡಿಕೆಶಿಯವರ ತಲೆದಂಡ ಕೇಳಿದರೆ ಏನು ಗತಿ' ಎಂದು ತಮ್ಮದೇ ವ್ಯಾಖ್ಯಾನ ಮುಂದಿಡುತ್ತಾರೆ. ಹೈಕಮಾಂಡ್‌ ನಾಯಕರು ಹೇಳುವ ಪ್ರಕಾರ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್‌ ಅಧ್ಯಕ್ಷ, ಪರಮೇಶ್ವರ್‌ ಅಥವಾ ಖರ್ಗೆ ಪ್ರಚಾರ ಸಮಿತಿ ಅಧ್ಯಕ್ಷರು ಎನ್ನುವ ರೀತಿಯಲ್ಲಿ ಚುನಾವಣಾ ತಂಡ ಇರಲಿದೆಯಂತೆ. ಆದರೆ, ಇದು ನಿಜವಾ? ನಿಶ್ಚಿತವಾಗಿ ನೇಮಕಾತಿ ಯಾವಾಗ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇಲ್ಲ. 

Latest Videos

ರಾಹುಲ್‌ ಇನ್‌ ಆಕ್ಸ್‌'ಫರ್ಡ್‌:
ಉತ್ತರಪ್ರದೇಶದ ಚುನಾವಣೆ ಸೋತ ನಂತರ ಶತಾಯಗತಾಯ ಮರಳಿ ಹೊಸದಾಗಿ ತನ್ನ ವ್ಯಕ್ತಿತ್ವವನ್ನು ಪ್ಯಾಕೇಜ್‌ ಮಾಡಿಕೊಳ್ಳಬೇಕು ಎಂಬ ಪ್ರಯತ್ನದಲ್ಲಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿಶ್ವದ ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿಶ್ವ ವಿದ್ಯಾಲಯದಲ್ಲಿ ಭಾಷಣ ಮಾಡುವ ಮೂಲಕ ಹೊಸ ಇನ್ನಿಂಗ್ಸ್‌ ಆರಂಭಿಸುವ ಪ್ರಯತ್ನದಲ್ಲಿ​ದ್ದಾ​ರಂತೆ. ಕೇರಳದ ಸಂಸದ ಶಶಿ ತರೂರ್‌ ಮೂಲಕ ರಾಹುಲ್‌ ಗಾಂಧಿ ಕಾರ್ಯಾ​ಲಯ ಆಕ್ಸ್‌ಫರ್ಡ್‌ ವಿದ್ಯಾರ್ಥಿ ಯೂನಿಯನ್‌ನಿಂದ ಆಮಂತ್ರಣ ಪಡೆಯುವ ಪ್ರಯತ್ನದಲ್ಲಿದೆ. ಆದರೆ, ಸೋಶಿಯಲ… ಮೀಡಿ​​ಯಾದಲ್ಲಿ ರಾಹುಲ್‌ಗೆ ಒಳ್ಳೆಯ ಹೆಸರಿಲ್ಲ ಎನ್ನುವ ಕಾರಣಕ್ಕೆ ಕೆಲ ವಿದ್ಯಾರ್ಥಿ ನಾಯಕರು ರಾಹುಲ್‌ ಬರುವುದು ಬೇಡ ಎಂದು ತಗಾದೆ ತೆಗೆದಿದ್ದಾರಂತೆ. 

ಚಾಯ್ ಪೇ ಚರ್ಚಾ:
ಉತ್ತರಪ್ರದೇಶ ಚುನಾವಣಾ ಫಲಿತಾಂಶ ಬಂದ ನಂತರ ಮೂರು ದಿನ ಗುಜರಾತ್‌ಗೆ ಹೋಗಿ ಬಂದ ಅಮಿತ್‌ ಶಾ ಗುಜರಾತ್‌ ಚುನಾವಣಾ ಕೆಲಸಕ್ಕೆ ಚಾಲನೆ ಕೊಟ್ಟು ಬಂದಿದ್ದಾರೆ. ಬಹುತೇಕ ಅಲ್ಲಿನ ಬಿಜೆಪಿ ಶಾಸಕರಿಗೆ ಟಿಕೆಟ್‌ ಕೊಡುವುದಿಲ್ಲ ಎಂಬ ಹುಯಿಲು ಅಮಿತ್‌ ಭಾಯಿ ಅವರ ಆಪ್ತರಿಂದಲೇ ಕೇಳಿ ಬರುತ್ತಿದೆ. ಆಡಳಿತ ವಿರೋಧಿ ಅಲೆಯ ಕಾರಣದಿಂದ ಏಕಾಂಗಿಯಾಗಿ ಅಧಿಕಾರ ಹಿಡಿಯುವ ಬಗ್ಗೆ ಮೋದಿ ಮತ್ತು ಶಾ ಇಬ್ಬರಿಗೂ ಸಂದೇಹವಿದೆ. ಹೀಗಾಗಿ ಆದಷ್ಟುಹೆಚ್ಚು ಕಾಂಗ್ರೆಸ್‌ ನಾಯಕರಿಗೆ ಗಾಳ ಹಾಕಿ ಕರೆದುಕೊಂಡು ಬರಬೇಕು ಎಂದು ತೀರ್ಮಾನಿಸಲಾಗಿದೆಯಂತೆ. ಹೀಗಾಗಿಯೇ ವಿರೋಧ ಪಕ್ಷದ ನಾಯಕ ಶಂಕರ ಸಿಂಘ್‌ ವಘೇಲಾ ಜೊತೆಗೆ ಶಾ ನಡೆಸಿರುವ ಚಾಯ್ ಪೇ ಚರ್ಚಾ ಬಹಳ ಸುದ್ದಿಯಾಗಿದ್ದು, ವಘೇಲಾರನ್ನು ಮರಳಿ ಪಕ್ಷಕ್ಕೆ ಕರೆತಂದರೂ ಆಶ್ಚರ್ಯವಿಲ್ಲ ಎನ್ನುತ್ತಿವೆ ಬಿಜೆಪಿ ಮೂಲ​ಗಳು. ಅವರಿಬ್ಬರೂ ಒಂದೇ ಸ್ಕೂಟರ್‌ ಮೇಲೆ ದಶಕಗಳ ಕಾಲ ಓಡಾಡಿ​ದವರಲ್ಲವೇ? ರಾಜಕೀಯದಲ್ಲಿ ಯಾವುದೂ ಅಸಂಭವವಲ್ಲ ಬಿಡಿ. 

ಮಾ-ಮು ದೋಸ್ತಿ:
20 ವರ್ಷ ಒಬ್ಬರನ್ನೊಬ್ಬರು ಮಾತನಾಡಿಸದ ಮಾಯಾವತಿ ಮತ್ತು ಮುಲಾಯಂ ಸಿಂಗ್‌ ಯಾದವ್‌ ಅತ್ಯಂತ ಹೀನಾಯವಾಗಿ ಉತ್ತರ ಪ್ರದೇಶದಲ್ಲಿ ಸೋತ ನಂತರ ಮೊದಲ ಬಾರಿ ದೂರವಾಣಿಯಲ್ಲಿ ಅರ್ಧ ಗಂಟೆ ಮಾತನಾಡಿದ್ದಾರೆ. ಸ್ವತಃ ಮಾಯಾವತಿ ಅವರೇ ಮುಲಾಯಂಗೆ ಕರೆ ಮಾಡಿ, 2019ರ ಲೋಕಸಭೆ ಚುನಾವಣೆಗೆ ಮಹಾ​ಒಕ್ಕೂಟ ಮಾಡಿಕೊಳ್ಳೋಣ. ಇಲ್ಲವಾದಲ್ಲಿ ಮೋದಿ ನಮ್ಮನ್ನು ರಾಜ​ಕೀಯ​​ವಾಗಿ ಅಪ್ರಸ್ತುತ ಮಾಡುತ್ತಾರೆ ಎಂದು ಹೇಳಿದ್ದಾರಂತೆ. ನಂತರ ತಮ್ಮ ಆಪ್ತ ಸತೀಶ್‌ ಚಂದ್ರ ಮಿಶ್ರಾ ಅವರನ್ನು ಮುಲಾಯಂ ಮನೆಗೆ ಕೂಡ ಕಳುಹಿಸಿದ್ದರಂತೆ ಮಾಯಾವತಿ. ಅಂದ ಹಾಗೆ ಮುಂದಿನ ವರ್ಷ ಮಾಯಾವತಿ ಅವರ ರಾಜ್ಯಸಭಾ ಅವಧಿ ಮುಗಿ​ಯ​​​ಲಿದ್ದು, ಮರಳಿ ಸಂಸತ್ತಿಗೆ ಬರಬೇಕಾದರೆ ಮಾಯಾವತಿಗೆ ಮುಲಾಯಂ ಬೆಂಬಲ ಬೇಕೇಬೇಕು. ಹೀಗಾಗಿಯೇ ಮಾಯಾವತಿ ಅವರು ಮುಲಾಯಂ ಜೊತೆಗೆ ಚಾನಲ್ ಓಪನ್‌ ಮಾಡಿಕೊಂಡಿದ್ದಾರೆ. 

ಡಿಎಂಕೆ ಸಿಟ್ಟಿನ ಗುಟ್ಟೇನು?
ಡಿಎಂಕೆ ನಾಯಕ ಕರುಣಾನಿಧಿ ಕಾಂಗ್ರೆಸ್‌ ನಾಯಕರ ಮೇಲೆ ಸಿಟ್ಟಾಗಿ​ದ್ದಾರೆ. ಇದಕ್ಕೆ ಕಾರಣ ಕರ್ನಾಟಕದ ಕಾಂಗ್ರೆಸ್‌ ನಾಯಕ ವೀರಪ್ಪ ಮೊಯ್ಲಿ. ಜಯಲಲಿತಾ ಪಕ್ಷದ ಚಿಹ್ನೆ ಎರಡೆಲೆ ಬಗ್ಗೆ ಕೇಂದ್ರ ಚುನಾ​ವಣಾ ಆಯೋಗದ ಎದುರು ಶಶಿಕಲಾ ನಟರಾಜನ್‌ ಪರವಾಗಿ ಹಾಜ​ರಾಗಿದ್ದು ವೀರಪ್ಪ ಮೊಯ್ಲಿ, ಸಲ್ಮಾನ್‌ ಖುರ್ಷಿದ್‌. ಆದರೆ ಇಬ್ಬರು ಘಟಾನುಘಟಿ ಮಾಜಿ ಕಾನೂನು ಸಚಿವರು ಬಂದು ವಾದ ಮಂಡಿ​ಸಿ​ದರೂ ಕೂಡ ಕೇಂದ್ರ ಚುನಾವಣಾ ಆಯೋಗ ಎರಡೆಲೆ ಚಿಹ್ನೆ​​​ಯನ್ನೇ ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಆದರೆ ನಮ್ಮ ಮಿತ್ರ ಪಕ್ಷ​​​ವಾಗಿ ಕಾಂಗ್ರೆಸ್‌ ನಾಯಕರು ನಮ್ಮ ವಿರೋಧಿಯಾದ ಶಶಿಕಲಾ ಪರ​​​ವಾಗಿ ಹೇಗೆ ವಾದಿಸಿದರು ಎಂದು ಕರುಣಾನಿಧಿ ಸಿಟ್ಟಾಗಿದ್ದು, ರಾಹುಲ್‌ ಜೊತೆ ಮಾತನಾಡು ಎಂದು ಪುತ್ರ ಸ್ಟಾಲಿನ್‌ಗೆ ಹೇಳಿದ್ದಾರಂತೆ. 

ರಾಬರ್ಟ್‌ ಇನ್‌ ಮುರಾದಾಬಾದ್‌:
ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕಾ ಗಾಂಧಿಯವರ ಗಂಡ ರಾಬರ್ಟ್‌ ವಾದ್ರಾ 2019ರಲ್ಲಿ ಉತ್ತರಪ್ರದೇಶದ ಮುರಾದಾಬಾದ್‌ ಲೋಕ​​ಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ರಾಬರ್ಟ್‌ ಶಿಷ್ಯಗಣ ದೆಹಲಿಯಲ್ಲಿ ಹೇಳುತ್ತಾ ತಿರುಗುತ್ತಿದೆ. 2014ರಲ್ಲಿಯೇ ಸ್ಪರ್ಧಿಸಲು ತಯಾರಾಗಿದ್ದ ರಾಬರ್ಟ್‌'ಗೆ ಪ್ರಿಯಾಂಕಾ ತಿಳಿಸಿ ಹೇಳಿದ್ದರಿಂದ ಸುಮ್ಮನಾಗಿದ್ದರಂತೆ. ಕುಟುಂಬದ ಆಪ್ತರು ಹೇಳುವ ಪ್ರಕಾರ ರಾಹುಲ್‌ ಗಾಂಧಿಗೂ ವಾದ್ರಾರಿಗೂ ಅಷ್ಟಕ್ಕಷ್ಟೇ ಸಂಬಂಧವಂತೆ. 

ಮೋದಿ ಭಯ:
ಬಿಜೆಪಿ ಸಂಸದರಿಗೆ ಮೋದಿ ಭಯ ವಿಪರೀತ ಎನ್ನುವಷ್ಟಿದೆ ಎನ್ನುವುದು ಗೊತ್ತಾಗಿದ್ದು ಶುಕ್ರವಾರ ನಡೆದ ಕರ್ನಾಟಕದ ಬಿಜೆಪಿ ಸಂಸದರ ಮೋದಿ ಜೊತೆಗಿನ ಸಭೆಯ ನಂತರ. ಸಭೆಯಲ್ಲಿ ಏನಾಯಿತು ಎಂದು ಕನ್ನಡದ ಪತ್ರಕರ್ತರು ಎಷ್ಟೇ ಕೇಳಿಕೊಂಡರೂ ಕೂಡ ಸಂಸದರು ಕ್ಯಾಮೆರಾ ಎದುರು ಹೇಳಲು ತಯಾರಾಗಲೇ ಇಲ್ಲ. ‘ಬೇಡ ರೀ, ಸಾಹೇಬರು ಮೀಡಿಯಾ ಜೊತೆ ಮಾತನಾಡಬೇಡಿ ಎಂದು ಹೇಳಿಯೇ ಕಳುಹಿಸಿ​ದ್ದಾರೆ. ಕ್ಯಾಮೆರಾ ತರಬೇಡ್ರಿ' ಎಂದು ಕೆಲ ಸಂಸದರು ಹೇಳಿ​ದರೆ ಇನ್ನು ಕೆಲವರು ಶುಕ್ರವಾರ ಇಡೀ ದಿನ ಪತ್ರಕರ್ತರ ಫೋನ್‌ ಕೂಡ ರಿಸೀವ್‌ ಮಾಡಲಿಲ್ಲ. ಅಂದ ಹಾಗೆ ಮೋದಿ ಎದುರು ಹೋದಾಗಲೂ ಬಹುತೇಕ ಸಂಸದರು ಪೆನ್ನು ಡೈರಿ ತೆಗೆದುಕೊಂಡು ಹೋಗಿ ಪ್ರಧಾನಿ ಹೇಳಿದ್ದನೆಲ್ಲವನ್ನೂ ವಿಧೇಯ ವಿದ್ಯಾರ್ಥಿಯಂತೆ ಬರೆದುಕೊಳ್ಳುತ್ತಿದ್ದರಂತೆ. 

ಸ್ಮೋಕಿಂಗ್‌ ಗೆಳೆತನ:
ಧೂಮಪಾನ ಬಿಡಲಿಕ್ಕಾಗದ ಸಂಸದರ ಒತ್ತಾಯಕ್ಕೆ ಕಟ್ಟುಬಿದ್ದು ಸಂಸತ್ತಿನ ಸೆಂಟ್ರಲ್‌ ಹಾಲ್‌ನ ಪಕ್ಕದ ಕೋಣೆಯನ್ನೇ ಸ್ಮೋಕಿಂಗ್‌ ಜೋನ್‌ ಮಾಡಲಾಗಿದೆ. ಸದನದಲ್ಲಿ ಬಾಯಿಗೆ ಬಂದಂತೆ ಮಾತನಾಡಿ​ಕೊಳ್ಳುವ ಕೆಲ ಆಡಳಿತ ಪಕ್ಷದ ಮಂತ್ರಿಗಳು ಮತ್ತು ವಿಪಕ್ಷಗಳ ಸಂಸದರು ಸ್ಮೋಕಿಂಗ್‌ ರೂಮ್‌ನಲ್ಲಿ ಮಾತ್ರ ಜನ್ಮಾಂತರದ ಮಿತ್ರರು ಎಂಬಂತೆ ಜೊತೆಯಾಗಿ ಹೊಗೆ ಬಿಡುತ್ತಾರೆ. 

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್‌ 

click me!