
ಮೋದಿ ಮತ್ತು ಅಮಿತ್ ಶಾ ಒಂದೊಂದೇ ರಾಜ್ಯವನ್ನು ಬಿಜೆಪಿ ತೆಕ್ಕೆಗೆ ತರುತ್ತಿದ್ದಾರಾದರೂ ಅವರು ನೇಮಿಸಿದ ಮುಖ್ಯಮಂತ್ರಿಗಳು ಸ್ವಲ್ಪ ಮಟ್ಟಿಗೆ ವಿಫಲರಾಗುತ್ತಿದ್ದಾರೇನೋ ಎಂದು ಬಿಜೆಪಿ ನಾಯಕರಿಗೆ ಅನ್ನಿಸಲು ಶುರುವಾಗಿದೆ. ಹರಿಯಾಣದ ಸಿಎಂ ಖಟ್ಟರ್ ಅಂತೂ ಪೂರ್ತಿ ವಿಫಲವಾಗಿದ್ದು, ಮುಂದಿನ ಚುನಾವಣೆಗೆ ಮುಂಚೆ ಇವರನ್ನು ಬದಲಿಸದೆ ಹೋದರೆ ಬಿಜೆಪಿಗೆ ಕಷ್ಟವಾಗಲಿದೆ. ಇನ್ನು ಜಾರ್ಖಂಡ್'ನಲ್ಲಿ ಮೋದಿಯೇ ನೇಮಿಸಿರುವ ಮುಖ್ಯಮಂತ್ರಿ ರಘುವರದಾಸ್ ಬಗ್ಗೆಯೂ ಆ ರಾಜ್ಯದಿಂದ ಕೆಟ್ಟ ವರದಿಗಳು ಬರುತ್ತಿವೆ. ಗುಜರಾತ್'ನಲ್ಲಿ ಮೊದಲಿಗೆ ನೇಮಕಗೊಂಡ ಆನಂದಿ ಬೆನ್ ಮತ್ತು ಈಗ ಮುಖ್ಯಮಂತ್ರಿಯಾಗಿರುವ ವಿಜಯ ರೂಪಾಣಿ ಇಬ್ಬರೂ ಕೂಡ ಬಹುತೇಕ ಡಮ್ಮಿಗಳಾಗಿದ್ದು, ಅಧಿಕಾರ ಏನಿದ್ದರೂ ಮೋದಿ ಮತ್ತು ಅಮಿತ್ ಭಾಯಿ ಬಳಿಯಿದೆ. ಅಸ್ಸಾಂ ಸಿಎಂ ಸರಬಾನಂದ್ ಸೋನವಾಲ್ ಕೂಡ ಅಷ್ಟೇನೂ ಒಳ್ಳೆಯ ಕೆಲಸ ಮಾಡುತ್ತಿಲ್ಲ. ಅಲ್ಲಿ ಸರಬಾನಂದ್ ಮತ್ತು ಮಂತ್ರಿ ಹಿಮಂತ ಶರ್ಮ ನಡುವಿನ ಪೈಪೋಟಿಯಿಂದ ಹೊಸ ಹೊಸ ಸಮಸ್ಯೆಗಳು ಉದ್ಭವವಾಗಿವೆ. ಹೀಗಿರುವಾಗ ಮೋದಿ ನೇಮಿಸಿರುವ ಪೈಕಿ ಸ್ವಲ್ಪ ಮಟ್ಟಿಗೆ ಒಳ್ಳೆಯ ಹೆಸರು ಇರುವುದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್'ರಿಗೆ. ಅದರಲ್ಲಿಯೂ ದೇವೇಂದ್ರ ಬ್ರಾಹ್ಮಣ ಎನ್ನುವ ಕಾರಣಕ್ಕೆ ಸ್ವಲ್ಪ ವಿರೋಧವಿದ್ದು, ಯೋಗಿ ಪ್ರಾಮಾಣಿಕ ಹೌದಾದರೂ ಆಡಳಿತದ ಅನುಭವ ಕಡಿಮೆ. ಹೀಗಿರುವಾಗ ಮೋದಿ ಜನಪ್ರಿಯತೆ ಎಷ್ಟೇ ಜಾಸ್ತಿ ಇದ್ದರೂ ಮುಖ್ಯಮಂತ್ರಿಗಳ ಜನಪ್ರಿಯತೆ ಇಳಿಮುಖವಾದರೆ 2019ರಲ್ಲಿ ಸಮಸ್ಯೆ ತಪ್ಪಿದ್ದಲ್ಲ.
- ಪ್ರಶಾಂತ್ ನಾತು, ಸುವರ್ಣನ್ಯೂಸ್, ದೆಹಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.