
ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದ ಐವರು ನ್ಯಾಯಮೂರ್ತಿಗಳ ತೀರ್ಪು ಏನು ಎಂಬುದನ್ನು ಪೂರ್ತಿಯಾಗಿ ಕೇಳುವ ತಾಳ್ಮೆಯಿಲ್ಲದೆ, ಮೊದಲು ಬ್ರೇಕಿಂಗ್ ನ್ಯೂಸ್ ನೀಡುವ ಭರದಲ್ಲಿ ದೇಶದ ಮಾಧ್ಯಮಗಳು (ನಾನು ಕೂಡ ಇದರ ಭಾಗವೇ) ಆರಂಭದಲ್ಲಿ ತಪ್ಪು ಸುದ್ದಿಯನ್ನು ಬಿತ್ತರಿಸಿಬಿಟ್ಟವು. ಆವತ್ತು ಮಂಗಳವಾರ ಬೆಳಗ್ಗೆ 10:30ಕ್ಕೆ ತ್ರಿವಳಿ ತಲಾಖ್ ಕುರಿತ ತೀರ್ಪನ್ನು ಮೊದಲಿಗೆ ಓದಿದವರು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್. ಅವರ ತೀರ್ಪಿನ ಮೂರ್ನಾಲ್ಕು ವಾಕ್ಯ ಕೇಳಿಸಿಕೊಂಡ ಇಂಗ್ಲಿಷ್ ಟೀವಿ ಪತ್ರಕರ್ತೆ ಒಬ್ಬರು ಕೋರ್ಟ್ ಹಾಲ್'ನಿಂದ ಹೊರಗೆ ಬಂದು ಸುದ್ದಿ ನೀಡಲು ಮುಂದಾದರು. ಸಿಜೆಐ ತ್ರಿವಳಿ ತಲಾಖನ್ನು ಸಾಂವಿಧಾನಿಕ ಎಂದು ಹೇಳಿದ್ದಾರೆ ಎಂದ ಆಕೆಯ ಮಾತನ್ನು ಕೇಳಿದ ಸುತ್ತಮುತ್ತಲಿದ್ದ ಟೀವಿ ಪತ್ರಕರ್ತರೂ ಸಂವಿಧಾನ ಪೀಠ ತ್ರಿವಳಿ ತಲಾಖನ್ನು ಎತ್ತಿಹಿಡಿದಿದೆ ಎಂದೇ ಸುದ್ದಿ ನೀಡಿದರು. ಅಂದರೆ ಮುಖ್ಯ ನ್ಯಾಯಮೂರ್ತಿಗಳ ತೀರ್ಪು ಅಂತಿಮ ಎಂಬರ್ಥದಲ್ಲಿ ಸುದ್ದಿ ಹರಿದಾಡಿತು. 10-15 ನಿಮಿಷಗಳ ಬಳಿಕ ಹೊರಗೆ ಬಂದ ವೆಬ್'ಸೈಟ್ ಒಂದರ ಪತ್ರಕರ್ತೆ, 3 ಮಂದಿ ನ್ಯಾಯಮೂರ್ತಿಗಳು ತ್ರಿವಳಿ ತಲಾಖನ್ನು ಅಸಂವಿಧಾನಿಕ ಎಂದು ಘೋಷಿಸಿದ್ದಾರೆ ಎಂದರು. ಇದನ್ನು ಕೇಳಿದ ಸುತ್ತಮುತ್ತಲಿದ್ದ ಪತ್ರಕರ್ತರು ತಬ್ಬಿಬ್ಬು. ಪೂರ್ಣ ತೀರ್ಪನ್ನು ಕೇಳಿದ ದ ಹಿಂದೂ ಪತ್ರಿಕೆಯ ಹಿರಿಯ ವರದಿಗಾರರು ಹೊರಬಂದು 3:2 ಅನುಪಾತದಲ್ಲಿ ತ್ರಿವಳಿ ತಲಾಖ್ ರದ್ದಾಗಿದೆ ಎಂದು ಹೇಳಿದರು. ಮತ್ತೆ ಪುನಃ ತಮ್ಮ ಸುದ್ದಿಗಳನ್ನು ಬದಲಿಸಿದ ಟೀವಿ ಪತ್ರಕರ್ತರು, ತ್ರಿವಳಿ ತಲಾಖ್ ಬ್ಯಾನ್ ಬ್ಯಾನ್ ಎಂದು ಸರಿಪಡಿಸಿಕೊಂಡು ಸುದ್ದಿ ನೀಡಿದರು. ಇಂಥದ್ದೊಂದು ಸನ್ನಿವೇಶ ನಿರ್ಮಾಣವಾಗಿದ್ದು ಇದೇನು ಮೊದಲಲ್ಲ. ಹಿಂದೆಯೂ ಜಯಲಲಿತಾ ಪ್ರಕರಣದಲ್ಲಿ ಇಂಥದ್ದೇ ತಪ್ಪುಗಳಾಗಿದ್ದಿದೆ.
- ಪ್ರಶಾಂತ್ ನಾತು, ಸುವರ್ಣನ್ಯೂಸ್, ದೆಹಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.