ಶೋಭಾ ಮಂತ್ರಿಗಿರಿಗೆ ಯಡಿಯೂರಪ್ಪ ಹರಸಾಹಸ: ಇಂಡಿಯಾ ಗೇಟ್

By Suvarna Web DeskFirst Published Aug 1, 2017, 11:40 AM IST
Highlights

ಸಂಪುಟ ವಿಸ್ತರಣೆ ಸುದ್ದಿ ಹರಿದಾಡುತ್ತಿದ್ದಂತೆ ರಾಜ್ಯದ ಸಂಸದರಾದ ಸುರೇಶ್ ಅಂಗಡಿ, ಪ್ರಭಾಕರ ಕೋರೆ ಕೂಡ ಒಮ್ಮೆಯಾ ದರೂ ನಮ್ಮನ್ನು ಮಂತ್ರಿ ಮಾಡಿ ಎಂದು ಕೇಂದ್ರದ ನಾಯಕರ ಮನೆಗಳಿಗೆ ಎಡತಾಕುತ್ತಿದ್ದಾರೆ. ಸಿ.ಎಂ. ಉದಾಸಿ ಕೂಡ ತನ್ನ ಮಗ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರನ್ನು ಮಂತ್ರಿ ಮಾಡಲು ಪ್ರಯತ್ನಿಸುತ್ತಿದ್ದು, ಬೀದರ್ ಸಂಸದ ಭಗವಂತ್ ಖೂಬಾ ಕೂಡ ಬಾಬಾ ರಾಮದೇವ್ ಜೊತೆಗಿರುವ ಸಂಪರ್ಕ ಬಳಸಿಕೊಂಡು ತಾವೂ ಒಂದು ಕೈ ನೋಡೋಣ ಎಂದು ಓಡಾಡುತ್ತಿದ್ದಾರೆ.

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

ಆಗಸ್ಟ್ 11ರಂದು ಸಂಸತ್ತಿನ ಅಧಿವೇಶನ ಮುಗಿದ ಬಳಿಕ ಪ್ರಧಾನಿ ಮೋದಿ ಸಂಪುಟ ವಿಸ್ತರಣೆ ಮಾಡಲಿದ್ದು ಕರ್ನಾಟಕದಿಂದ ಬಹುತೇಕ ಇಬ್ಬರಿಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನ ಸಿಗಲಿದೆಯಂತೆ. ಒಂದು ಸ್ಥಾನ ಉತ್ತರ ಕರ್ನಾಟಕದ ಲಿಂಗಾಯತರಿಗೆ, ಇನ್ನೊಂದು ಸ್ಥಾನ ಕರಾವಳಿಗೆ ಕೊಡಬಹುದು. ಕರಾವಳಿ ಕೋಟಾದಲ್ಲಿ ಪರಮಾಪ್ತ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದು ದಿಲ್ಲಿ ನಾಯಕರ ಮೇಲೆ ಬಿಎಸ್‌'ವೈ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿಯೇ ಇತ್ತೀಚೆಗೆ ಮಂಗಳೂರಿನ ಶರತ್ ಮಡಿವಾಳ ಕೊಲೆ ಪ್ರಕರಣದ ನಂತರ ಶೋಭಾ ಹಿಂದುತ್ವದ ವಿಷಯದ ಮೇಲೆ ಜಾಸ್ತಿಯೇ ಅಗ್ರೆಸಿವ್ ಆಗಿ ಕಾಣುತ್ತಿದ್ದು ದಿನವೂ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ. ಮೊದಲಿಗೆ ಶೋಭಾ ಕರ್ನಾಟಕದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂಬ ಯೋಚನೆ ಇಟ್ಟುಕೊಂಡಿದ್ದರು. ಆದರೆ ಯಾವಾಗ ಯಡಿಯೂರಪ್ಪ ಒಬ್ಬರು ಬಿಟ್ಟರೆ ಉಳಿದ ಯಾವ ಸಂಸದರಿಗೂ ಟಿಕೆಟ್ ಕೊಡಲ್ಲ ಎಂದು ಅಮಿತ್ ಶಾ ಹೇಳಿದರೋ ಆಗಿನಿಂದಲೇ ಶೋಭಾರನ್ನು ಮಂತ್ರಿ ಮಾಡಬೇಕು ಎಂದು ಬಿಎಸ್‌'ವೈ ಓಡಾಡುತ್ತಿದ್ದಾರೆ. ಈ ಪ್ರಯತ್ನದ ಕಾರಣದಿಂದಲೇ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಪಕ್ಷ ಸಂಘಟನೆಗೆ ರಾಜ್ಯಕ್ಕೆ ಮರಳುತ್ತಾರೆ ಎಂಬ ಸುದ್ದಿಗಳು ಹರಿದಾಡತೊಡಗಿವೆ. ಯಡಿಯೂರಪ್ಪನವರು ಇದುವರೆಗೂ ಮೋದಿ, ಶಾ ಅವರ ಬಳಿ ಈ ಬಗ್ಗೆ ಮಾತನಾಡಿಲ್ಲವಾದ ರೂ ಜೇಟ್ಲಿ, ರಾಮಲಾಲ್, ಮುರಳೀಧರರಾವ್ ಜೊತೆಗೆ ವಿಷಯ ಪ್ರಸ್ತಾಪ ಮಾಡಿದ್ದಾರಂತೆ. ಅಂದಹಾಗೆ ಬಿಎಸ್‌ವೈ ಬೆಂಬಲ ಇದ್ದರೂ ಶೋಭಾ ಅವರನ್ನು ಸಮರ್ಥಿಸಿಕೊಳ್ಳಲು ರಾಜ್ಯದ ಒಬ್ಬ ಬಿಜೆಪಿ ಸಂಸದರೂ ತಯಾರಾಗೊಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ.

ಒಮ್ಮೆ ಮಂತ್ರಿ ಮಾಡಿ ಸಾರ್:
ಸಂಪುಟ ವಿಸ್ತರಣೆ ಸುದ್ದಿ ಹರಿದಾಡುತ್ತಿದ್ದಂತೆ ರಾಜ್ಯದ ಹಿರಿಯ ಸಂಸದರಾದ ಸುರೇಶ್ ಅಂಗಡಿ ಮತ್ತು ಪ್ರಭಾಕರ ಕೋರೆ ಕೂಡ ಒಮ್ಮೆಯಾದರೂ ನಮ್ಮನ್ನು ಮಂತ್ರಿ ಮಾಡಿ ಎಂದು ಕೇಂದ್ರದ ಹಿರಿಯ ನಾಯಕರ ಮನೆಗಳಿಗೆ ಎಡತಾಕುತ್ತಿದ್ದಾರೆ. ಸುರೇಶ್ ಅಂಗಡಿ ತನಗಿರುವ ಯಡಿಯೂರಪ್ಪನವರ ಸಾಮೀಪ್ಯ ಮತ್ತು ಜಗದೀಶ್ ಶೆಟ್ಟರ್ ಜೊತೆಗಿನ ನೆಂಟಸ್ತಿಕೆ ಉಪಯೋಗಿಸಿಕೊಂಡು ಮಂತ್ರಿ ಸ್ಥಾನಕ್ಕಾಗಿ ಪ್ರಯತ್ನ ಮಾಡುತ್ತಿದ್ದು, ಪ್ರಭಾಕರ ಕೋರೆ ಜೇಟ್ಲಿ ಜೊತೆಗಿನ ಮಿತ್ರತ್ವ ಉಪಯೋಗಿಸಿಕೊಂಡು ಬೆನ್ನುಹತ್ತಿದ್ದಾರೆ. ಆದರೆ ಲಿಂಗಾಯತರಲ್ಲಿ ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂದು ಅಮಿತ್ ಶಾ ಕೇಳಿದರೆ ಯಡಿಯೂರಪ್ಪ ಯಾರ ಹೆಸರು ಹೇಳುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಯಡಿಯೂರಪ್ಪ ಜೊತೆ ಚೆನ್ನಾಗಿರುವ ಮಾಜಿ ಸಚಿವ ಸಿ.ಎಂ. ಉದಾಸಿ ಕೂಡ ತನ್ನ ಮಗ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರನ್ನು ಮಂತ್ರಿ ಮಾಡಲು ಪ್ರಯತ್ನ ಹಾಕುತ್ತಿದ್ದು ಬೀದರ್ ಸಂಸದ ಭಗವಂತ್ ಖೂಬಾ ಕೂಡ ಬಾಬಾ ರಾಮದೇವ್ ಜೊತೆಗಿರುವ ಸಂಪರ್ಕ ಬಳಸಿಕೊಂಡು ತಾವೂ ಒಂದು ಕೈ ನೋಡೋಣ ಎಂದು ಓಡಾಡುತ್ತಿದ್ದಾರೆ. ಕರ್ನಾಟಕದ ಬಿಜೆಪಿ ಸಂಸದರು ಸಚಿವ ಸ್ಥಾನಕ್ಕಾಗಿ ಎಷ್ಟು ಕಾತರರಾಗಿ ಓಡಾಡುತ್ತಿದ್ದಾರೆ ಎಂದರೆ ದಿಲ್ಲಿ ಪತ್ರಕರ್ತರು ಸಿಕ್ಕರೆ ಸಾಕು ಪಕ್ಕಕ್ಕೆ ಕರೆದುಕೊಂಡು ‘ಏನ್ ಸುದ್ದಿ ನಮ್ಮ ಹೆಸರು ಇದೆಯಾ ಇಲ್ಲವಾ’ ಎಂದು ಕೇಳುತ್ತಿರುತ್ತಾರೆ.

ಶೋಭಾ ಬಗ್ಗೆ ಕಟೀಲು ಬೇಸರ:
ಮಂಗಳೂರಿನ ವಿಷಯದಲ್ಲಿ ‘ಷಂಡ’ ಎಂಬ ಪದ ಬಳಕೆ ಮತ್ತು ಜೀವಂತ ಇರುವವರನ್ನು ಸತ್ತವರ ಪಟ್ಟಿಗೆ ಸೇರಿಸಿದ ಶೋಭಾ ಕರಂದ್ಲಾಜೆ ಬಗ್ಗೆ ಮಂಗಳೂರಿನ ಸಂಸದ ನಳಿನ್ ಕುಮಾರ ಕಟೀಲು ಬೇಸರಗೊಂಡಿದ್ದಾರೆ. 2014ರ ನಂತರ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಒಂದು ಕಾಲದ ಶಿಷ್ಯ ನಳಿನ್ ಕಟೀಲು ನಡುವೆ ಸಂಬಂಧ ಅಷ್ಟಕಷ್ಟೇ ಎನ್ನುವಂತೆ ಇತ್ತು. ಆದರೆ ಮಂಗಳೂರಿನ ಕೊಲೆಗಳ ನಂತರ ಕಲ್ಲಡ್ಕ ಭಟ್ಟರು ಮತ್ತೊಮ್ಮೆ ಸಂಘ ಪರಿವಾರದಲ್ಲಿ ಪ್ರಬಲರಾಗಿ ಹೊರ ಹೊಮ್ಮಿರುವುದು ನಳಿನ್ ಚಿಂತೆಗೆ ಮೊದಲ ಕಾರಣವಾದರೆ ಶೋಭಕ್ಕ ಎಲ್ಲರನ್ನು ಬದಿಗೆ ಸರಿಸಿ ತಾನೇ ಮಂಗಳೂರಿನ ನಾಯಕಿ ಎಂಬಂತೆ ಮಾಧ್ಯಮಗಳ ಎದುರು ಕಾಣಿಸಿಕೊಳ್ಳುತ್ತಿರುವುದು ನಳಿನ್‌ಗೆ ತಲೆ ನೋವು ಹೆಚ್ಚಿಸಿದೆಯಂತೆ. ಆದರೆ ಪತ್ರಕರ್ತರು ನಳಿನ್ ಅವರಿಗೆ ಎಷ್ಟೇ ಬಾಯಿ ಬಿಡಿಸಲು ಪ್ರಯತ್ನಿಸಿದರೂ ಕೂಡ ಎಲ್ಲವೂ ನಿಮ್ಮ ಕಲ್ಪನೆಯಷ್ಟೇ ಎಂದು ನಕ್ಕು ಸುಮ್ಮನಾಗುತ್ತಾರೆ. ಸಂಘ ಪ್ರಚಾರಕ ಸಂತೋಷ್ ಅವರ ಆಪ್ತರಾಗಿರುವ ನಳಿನ್ ಕೂಡ ಕರಾವಳಿ ಕೋಟಾದಲ್ಲಿ ಮಂತ್ರಿಯಾದರೂ ಆಶ್ಚರ್ಯವಿಲ್ಲ. ಅಂದ ಹಾಗೆ ಬಿಜೆಪಿ ಪದಾಧಿಕಾರಿ ಮಾಡುವಾಗಲೂ ಶೋಭಾ ಕರಂದ್ಲಾಜೆ ಮಂಗಳೂರಿನಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ನಳಿನ್ ಸಂಘಕ್ಕೆ ದೂರು ಹೇಳಿದ್ದರು.

ಸಿದ್ದು ದಾಳಕ್ಕೆ ಚಿಂತಾಕ್ರಾಂತರಾದ ಬಿಎಸ್‌ವೈ:
ಕಳೆದ 15 ದಿನಗಳಿಂದ ಯಡಿಯೂರಪ್ಪನವರು ಬಹಳ ಚಿಂತೆಯಲ್ಲಿರುವಂತೆ ಕಾಣುತ್ತಿದೆ. ಸಿದ್ದರಾಮಯ್ಯ ಹಾಕಿದ ಧ್ವಜ ದಾಳದ ಬಗ್ಗೆ ಯಡಿಯೂರಪ್ಪನವರು ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಯಾವಾಗ ಲಿಂಗಾಯತ ವೀರಶೈವ ವಿವಾದ ಆರಂಭವಾಯಿತೋ ತಾನು ನಂಬಿಕೊಂಡಿರುವ ವೋಟ್ ಬ್ಯಾಂಕ್ ಒಡೆಯಲು ಹೊರಟಿರುವ ಸಿದ್ದು ದಾಳಗಳಿಂದ ದ್ವಂದ್ವಕ್ಕೆ ಸಿಲುಕಿರುವ ಯಡಿಯೂರಪ್ಪನವರು ತಮ್ಮ ಮನೆಗೆ ಊಟಕ್ಕೆ ಬಂದಿದ್ದ ಬಿಜೆಪಿ ಸಂಸದರ ಎದುರು ಮನದ ದುಗುಡವನ್ನು ಮುಕ್ತವಾಗಿ ಹೊರಹಾಕಿದ್ದಾರೆ. ಕೇವಲ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಹೊರಟರೆ ನೇರವಾಗಿ ಕಾಂಗ್ರೆಸ್‌'ಗೆ ಲಾಭ ಬಿಜೆಪಿಗೆ ನಷ್ಟ ಎಂದು ಹೇಳಿದ ಯಡಿಯೂರಪ್ಪನವರು ವೀರಶೈವ ಲಿಂಗಾಯತ ಜೊತೆಗೂಡಿದ ಪ್ರತ್ಯೇಕ ಧರ್ಮಕ್ಕಾಗಿ ಮಾತ್ರ ಸಮಾಜದಲ್ಲಿ ಬಹುಜನರ ಅಭಿಪ್ರಾಯವಿದೆ ಎಂದು ಹೇಳಿದ್ದಾರೆ. ಆಗ ಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಬಸವ ರಾಜಪಾಟೀಲ ಸೇಡಂ ‘ಯಡಿಯೂರಪ್ಪನವರೇ ನೀವು ಪಕ್ಷದ ಯಾವೊಬ್ಬ ನಾಯಕನೂ ಮಾಧ್ಯಮಗಳಿಗೆ ಮಾತನಾಡದಂತೆ ನೋಡಿಕೊಳ್ಳಿ. ಇಂಥ ಒಡಕು ಹುಟ್ಟಿಸುವ ವಿವಾದ ತನ್ನಿಂದ ತಾನೇ ಸಾಯುತ್ತದೆ ಮತ್ತು ಕಾಂಗ್ರೆಸ್ ಸಚಿವರು ಎಷ್ಟು ಹೆಚ್ಚು ಮಾತನಾಡುತ್ತಾರೋ ಅಷ್ಟೇ ಅವರಿಗೆ ತಿರುಗು ಬಾಣವಾಗುತ್ತದೆ’ ಎಂದು ಹೇಳಿದರೆ ಶೋಭಾ ಕರಂದ್ಲಾಜೆ ‘ನಾವು ಸಿದ್ಧಗಂಗಾ ಸುತ್ತೂರು ಮತ್ತು ಸಿರಿಗೆರೆ ಸೇರಿದಂತೆ ಪ್ರಮುಖ ಮಠಾಧಿಪತಿಗಳನ್ನು ಭೇಟಿಯಾಗಿ ಹಿಂದೂ ಧರ್ಮದಿಂದ ದೂರ ಹೋದರೆ ಆಗುವ ನಷ್ಟದ ಬಗ್ಗೆ ತಿಳಿ ಹೇಳೋಣ’ ಎಂದು ಹೇಳಿದ್ದಾರೆ. ಯಡಿಯೂರಪ್ಪನವರ ಆಪ್ತ ಬಿಜೆಪಿ ಸಂಸದರೊಬ್ಬರ ಪ್ರಕಾರ ಈಗ ಕೆಜೆಪಿಯಲ್ಲಿದ್ದರೆ ಯಡಿಯೂರಪ್ಪನವರು ಪ್ರತ್ಯೇಕ ಧರ್ಮಕ್ಕಾಗಿ ಧ್ವನಿಗೂಡಿಸುತ್ತಿದ್ದರೇನೋ ಆದರೆ ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿಯಲ್ಲಿರುವಾಗ ಪ್ರತ್ಯೇಕ ಧರ್ಮ ಅಂದರೆ ಗೆಲುವನ್ನು ಕಾಂಗ್ರೆಸ್‌'ಗೆ ತಟ್ಟೆಯಲ್ಲಿಟ್ಟು ಕೊಟ್ಟಂತೆ.

ಮೌನ ಪ್ರತಾಪ:
ಮೈಸೂರು ಸಂಸದ ಪ್ರತಾಪ್ ಸಿಂಹ ಮುಂದಿನ 4 ತಿಂಗಳು ಟಿ.ವಿ. ಚರ್ಚೆಗಳಲ್ಲಿ ಭಾಗವಹಿಸೋಲ್ಲವಂತೆ. ಗೀತಾ ಮಹಾದೇವ್ ಪ್ರಸಾದ್ ಬಗೆಗಿನ ಹೇಳಿಕೆ ವಿವಾದವಾದ ಬಳಿಕ ಪ್ರತಾಪ ಸ್ವಲ್ಪ ದಿನ ಚರ್ಚೆಯಿಂದ ದೂರ ಇರಲು ತೀರ್ಮಾನಿಸಿದ್ದು, ಯಾವುದೇ ಚಾನೆಲ್‌'ನವರು ಕರೆದರೂ ಪ್ರತಾಪ್ ‘ಇಲ್ಲಾರಿ ನಾನು ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ’ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಪತ್ರಕರ್ತರಾಗಿದ್ದಾಗ ಮಾತನಾಡಿ ಅರಗಿಸಿಕೊಂಡಂತೆ ರಾಜಕಾರಣಿಯಾಗಿ ಏನು ಬೇಕಾದರೂ ಮಾತನಾಡಿ ಅರಗಿಸಿಕೊಳ್ಳೋದು ಸ್ವಲ್ಪ ಕಷ್ಟ ಬಿಡಿ. ಒಬ್ಬ ಟಿ.ವಿ. ಪತ್ರಕರ್ತನಾಗಿ ಹೇಳೋದಾದರೆ ಪ್ರತಾಪ್ ಮೌನ ಚಾತುರ್ಮಾಸ ಬೇಗನೆ ಮುಗಿಯಲಿ.

ಹೌ ಆರ್ ಯು ಯಡ್ಡಿ:
ಕೆಲವು ರಾಷ್ಟ್ರೀಯ ಪತ್ರಕರ್ತರು ಎನಿಸಿಕೊಂಡವರಿಗೆ ತಮಗಿಂತ 50 ವರ್ಷ ದೊಡ್ಡವನಾಗಿರುವ ಒಬ್ಬ ನಾಯಕನನ್ನು ಹೇಗೆ ಸಂಬೋಧಿಸಬೇಕು ಎಂದು ಕನಿಷ್ಠ ಸೌಜನ್ಯವೂ ಇಲ್ಲ ಎನಿಸುತ್ತದೆ. ಕಳೆದ ವಾರ ಯಡಿಯೂರಪ್ಪನವರು ಶೋಭಾ ಕರಂದ್ಲಾಜೆ ಜೊತೆಗೆ ಪಾರ್ಲಿಮೆಂಟ್‌'ನ ಗೇಟ್ ನಂಬರ್ 4ರಿಂದ ಹೊರಬಿರುತ್ತಿದ್ದಾಗ ಇಂಗ್ಲಿಷ್ ಚಾನೆಲ್‌'ನ 27 ವರ್ಷದ ಪತ್ರಕರ್ತ ‘ವಾಟ್ ಯಡ್ಡಿ, ಹೌ ಆರ್ ಯು’ ಎಂದು ಕೈ ಕುಲುಕುತ್ತಾನೆ. ಸಂಯಮದಿಂದ ಯಡಿಯೂರಪ್ಪನವರು ‘ಹೌ ಆರ್ ಯು’ ಎಂದು ಕೈ ಕುಲುಕಿ ನಗುತ್ತ ಮಾತನಾಡಿಸುತ್ತಾರೆ. ಕೆಲ ವರ್ಷಗಳ ಹಿಂದೆ ಅಂದಾಜು 25 ವರ್ಷ ವಯಸ್ಸಿನ ಆಂಗ್ಲ ಪತ್ರಕರ್ತೆ ಪರಮಾಣು ಕರಾರು ಸಭೆಗೆ ಬಂದಿದ್ದ ಪ್ರಕಾಶ್ ಕಾರಟ್ ಅವರಿಗೆ ‘ಹಾಯ್ ಮಿಸ್ಟರ್ ಯೆಚೂರಿ’ ಎಂದು ಮೈಕ್ ಹಿಡಿದಿದ್ದಳು. ಸಿಡಿಮಿಡಿಗೊಂಡ ಕಾರಟ್ ಮೈಕ್ ಪಕ್ಕಕ್ಕೆ ಸರಿಸಿ ಕಾರ್ ಹತ್ತಿದ್ದರು.

ದೇವೇಗೌಡರೆಂದರೆ ಹೀಗೆ!
ಕೆಲ ದಿನಗಳ ಹಿಂದೆ ದೇವೇಗೌಡರು ಮಹದಾಯಿ ವಿಷಯವಾಗಿ ಪ್ರಧಾನಿ ಮೋದಿ ಭೇಟಿಗೆಂದು ಪಾರ್ಲಿಮೆಂಟ್‌'ಗೆ ಹೊರಟಿದ್ದರು. ಆಗ ಒಳ ಬಂದ ಉ-ಕರ್ನಾಟಕದ ಸ್ವಾಮೀಜಿ ಒಬ್ಬರು ‘ದೇವೇಗೌಡರೇ ನಾನೂ ನಿಮ್ಮ ಜೊತೆ ಬರಬಹುದೇ’ ಎಂದು ಕೇಳುತ್ತಾರೆ. ಕೂಡಲೇ ತಲೆ ಅಲ್ಲಾಡಿಸಿದ ದೇವೇಗೌಡರು ‘ಹಾಲಿ ಮತ್ತು ಮಾಜಿ ಪ್ರಧಾನಿಗಳು ಭೇಟಿ ಆಗುವಾಗ ನಿಮ್ಮನ್ನು ಬಿಡಲ್ಲ’ಎಂದು ಶಾಂತರಾಗಿ ಹೇಳುತ್ತಾರೆ. ಸ್ವಲ್ಪ ಹೊತ್ತು ಸುಮ್ಮನಿದ್ದ ಸ್ವಾಮೀಜಿ ‘ಸರಿ ಗೌಡರೇ ನಿಮ್ಮ ಗಾರ್ಡನ್'ನಲ್ಲಿ ನಾನು ಪತ್ರಿಕಾಗೋಷ್ಠಿ ಮಾಡಬೇಕು ಎಂದುಕೊಂಡಿದ್ದೇನೆ’ ಎಂದು ಹೇಳುತ್ತಾರೆ. ಆಗ ಥಟಕ್ಕನೆ ಉತ್ತರಿಸಿದ ದೇವೇಗೌಡರು ‘ಇದು ಸರ್ಕಾರಿ ನಿವಾಸ. ನಾನು ಬಿಟ್ಟರೆ ಉಳಿದವರು ಇಲ್ಲಿ ಚಟುವಟಿಕೆ ನಡೆಸುವಂತಿಲ್ಲ. ನೀವು ಬೇರೆ ಕಡೆ ಮಾತನಾಡಿ’ ಎಂದು ಹೇಳಿ ಕೈ ಮುಗಿದು ಹೊರಗೆ ಹೋಗುತ್ತಾರೆ. ಅಷ್ಟೇ ಅಲ್ಲ ನಾನು ಪಾರ್ಲಿಮೆಂಟ್'ಗೆ ಹೋಗುತ್ತಿದ್ದೇನೆ ನಿಮ್ಮ ಕಾರಿನಲ್ಲಿ ಬರುತ್ತೇನೆ ಎಂದು ಜಬರದಸ್ತಿ ವಾಹನ ಹತ್ತಿದ ಯುವ ಪತ್ರಕರ್ತ ಒಬ್ಬರನ್ನು ದೇವೇಗೌಡರು ‘ನೋಡ್ರಿ, ನೀವು ಯಂಗ್ ಪತ್ರಕರ್ತರು ಹೀಗೆಲ್ಲ ನನ್ನ ಕಾರಿನಲ್ಲಿ ಓಡಾಡಬಾರದು, ಇದು ಸರಿಯಲ್ಲ’ ಎಂದು ಹೇಳಿ ಕೆಳಗಿಳಿಸಿದರು.

- ಪ್ರಶಾಂತ್ ನಾತು, ಸುವರ್ಣನ್ಯೂಸ್, ದೆಹಲಿ
epaperkannadaprabha.com

click me!