
ಬೆಂಗಳೂರು(ಆ. 01): ಸ್ಯಾಂಡಲ್ವುಡ್ ಹೀರೋ ಮತ್ತು ಸಿಸಿಎಲ್ ಆಟಗಾರ ಧ್ರುವ ಶರ್ಮಾ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಧ್ರುವ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಸುದ್ದಿಯೊಂದು ಕೇಳಿಬರುತ್ತಿದೆ. ಜುಲೈ 29ರಂದು ಧ್ರುವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ. ಆ ಘಟನೆಯ ಬಳಿಕ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆಂಬ ಮಾತು ಕೇಳಿಬರುತ್ತಿದೆ.
ಧ್ರುವ ಶರ್ಮಾ ಅವರ ತಂದೆ ಸುರೇಶ್ ಶರ್ಮಾ ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿರುವ ಬಗ್ಗೆ ಮಾಹಿತಿ ಬಂದಿದೆ. ಇತ್ತೀಚೆಗೆ ಧ್ರುವ ಶರ್ಮಾ ತಾನು ಆರಂಭಿಸಿದ್ದ ಕಂಪನಿಯಿಂದ ತೀವ್ರ ನಷ್ಟ ಅನುಭವಿಸಿದ್ದರು. ವಿಪರೀತ ಸಾಲವು ಅವರನ್ನು ಬಾಧಿಸುತ್ತಿತ್ತು. ಕೆಲವಾರು ದಿನಗಳಿಂದ ಅವರು ಖಿನ್ನತೆಗೊಳಗಾಗಿದ್ದರು. ಕಂಪನಿ ನಷ್ಟವಾಗಿದ್ದು ಇದಕ್ಕೆ ಪ್ರಮುಖ ಕಾರಣವೆನ್ನಲಾಗಿದೆ. ಇದೇ ವಿಚಾರವಾಗಿ ಧ್ರುವ ಆತ್ಮಹತ್ಯೆಗೆ ಯತ್ನಿಸಿದರೆಂದು ಧ್ರುವ ತಂದೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ತಿಳಿದುಬಂದಿದೆ. ಕಂಪನಿಯನ್ನು ನಡೆಸುವ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ಜಗಳ ಕೂಡ ಆಗಿತ್ತೆಂಬ ಮಾಹಿತಿ ಮಾಧ್ಯಮಗಳಿಗೆ ಸಿಕ್ಕಿದೆ.
ಇದೇ ವೇಳೆ, ಧ್ರುವ ಶರ್ಮಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ಕರೆತರಲಾಗಿದೆ.
ಕಿವುಡ ಮತ್ತು ಮೂಕರಾಗಿದ್ದ ಧ್ರುವ ಶರ್ಮಾ ಕೆಲವು ಕನ್ನಡ ಚಿತ್ರಗಳಲ್ಲಿ ನಾಯಕನಟನಾಗಿ ನಟಿಸಿದ್ದಾರೆ. ಸೆಲಬ್ರಿಟಿ ಕ್ರಿಕೆಟ್ ಲೀಗ್'ನಲ್ಲಿ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್'ಡೋಜರ್ಸ್ ತಂಡದ ಆಧಾರಸ್ತಂಭವಾಗಿದ್ದರು ಇವರು. ಸಿನಿಮಾಗಿಂತ ಹೆಚ್ಚಾಗಿ ಸಿಸಿಎಲ್ ಕ್ರಿಕೆಟ್ ಮೂಲಕವೇ ರಾಜ್ಯದ ಜನತೆಗೆ ಇವರು ಹೆಚ್ಚು ಚಿರಪರಿಚಿತರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.