
ಮುಂದಿನ ರಾಷ್ಟ್ರಪತಿ ಯಾರು?
ಸಂಸತ್ತಿನ ಮೊಗಸಾಲೆಯಲ್ಲಿ ಈಗ ಮುಂದಿನ ರಾಷ್ಟ್ರಪತಿ ಯಾರು ಎಂಬುದೇ ಚರ್ಚೆಯ ವಿಷಯ. ಬಿಜೆಪಿ ಹಿರಿಯ ನಾಯಕರಿಗೂ ಯಾರು ಭವಿಷ್ಯದ ಮೊದಲ ಪ್ರಜೆ ಎಂಬ ವಿಷಯ ಗೊತ್ತಿರುವಂತಿಲ್ಲ. ಖಾಸಗಿಯಾಗಿ ಹಿರಿಯ ಪತ್ರಕರ್ತರು ಸಿಕ್ಕಾಗ ಬಿಜೆಪಿ ಹಿರಿಯರೇ, ಏನಾದರೂ ಸುಳಿವು ಸಿಕ್ತಾ ಎಂದು ಕೇಳುತ್ತಾರೆ. ಆದರೆ ಪತ್ರಕರ್ತರಿರಾಗಲೀ, ಸಚಿವರಿಗಾಗಲೀ ಇದುವರೆಗೂ ನಿಶ್ಚಿತವಾಗಿ ಯಾರು ರಾಷ್ಟ್ರಪತಿ ಎಂದು ಗೊತ್ತಾಗಿಲ್ಲ. ನಿನ್ನೆ ಸಂಜೆ ನಡೆದ ಬಿಜೆಪಿಯ 35 ಮಿತ್ರ ಪಕ್ಷಗಳ ಸಭೆಯಲ್ಲಿ ಎಲ್ಲರೂ ಒಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಹೇಳಲಾಯಿತೇ ಹೊರತು ಅಭ್ಯರ್ಥಿ ಯಾರೆಂಬ ಬಗ್ಗೆ ಪ್ರಧಾನಿ ಮೋದಿ ಸುಳಿವು ಬಿಟ್ಟು ಕೊಟ್ಟಿಲ್ಲ. ಎಲ್.ಕೆ.ಅಡ್ವಾಣಿ, ಸ್ಪೀಕರ್ ಸುಮಿತ್ರಾ ಮಹಾಜನ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಹೆಸರು ಕೇಳಿ ಬರುತ್ತಿವೆಯಾದರೂ ಮೋದಿಯಾಗಲೀ, ಸಂಘವಾಗಲೀ ಯಾರೂ ಕೂಡ ಅವರೊಂದಿಗೆ ಈವರೆಗೂ ಮಾತನಾಡಿಲ್ಲವಂತೆ. ಇನ್ನು ದಲಿತ ರಾಷ್ಟ್ರಪತಿ ಎಂಬ ಚರ್ಚೆಯೊಂದು ನಡೆಯುತ್ತಿದ್ದು, ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್, ಪುಣೆ ವಿವಿ ಮಾಜಿ ವಿಸಿ ಪ್ರೊ.ನರೇಂದ್ರ ಜಾಧವ್ ಹೆಸರುಗಳು ಓಡಾಡುತ್ತಿವೆ. ಆದಿವಾಸಿಯನ್ನು ರಾಷ್ಟ್ರಪತಿ ಮಾಡುವುದಾದರೆ ಜಾರ್ಖಂಡ್ ರಾಜ್ಯಪಾಲ ದ್ರೌಪದಿ ಮುಮುರ್ ಹೆಸರು ಕೂಡ ಸೆಂಟ್ರಲ್ ಹಾಲ್'ನಿಂದಲೇ ಬರುತ್ತಿದೆ. ಮೋದಿ ಸಾಹೇಬರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ಸದ್ಯದ ಸ್ಥಿತಿಯಲ್ಲಿ ಅತ್ಯಂತ ಪ್ರಯಾಸದ ಕೆಲಸ ಬಿಡಿ. ವಾಜಪೇಯಿ ಅವರು ಅಬ್ದುಲ್ ಕಲಾಂ ಹೆಸರನ್ನು ಮುಂದೆ ತಂದಂತೆ ಮೋದಿ ಕೂಡ ಕಡೆಯ ಗಳಿಗೆಯಲ್ಲಿ ಹೊಸ ತಲೆಮಾರಿಗೆ ಇಷ್ಟವಾಗುವ ರಾಜಕೀಯೇತರ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದರೂ ಆಶ್ಚರ್ಯವಿಲ್ಲ.
ಮುಗಿಯದ ಕಾಂಗ್ರೆಸ್ ಒಳಜಗಳ
ಶಿಥಿಲಾವಸ್ಥೆಯಲ್ಲಿದ್ದರೂ ಕೂಡ ಕಾಂಗ್ರೆಸ್ಸಿಗರ ಒಳಜಗಳ ಮಾತ್ರ ಮುಗಿಯುವಂತೆ ಕಾಣುತ್ತಿಲ್ಲ. ಕಳೆದ ವಾರ ರಾಜ್ಯಸಭೆಯಲ್ಲಿ ಜಿಎಸ್‌ಟಿ ವಿಧೇಯಕದ ಬಗ್ಗೆ ಚರ್ಚೆ ಆರಂಭಿಸುವುದಾಗಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕೋರಿದಾಗ ನಿರಾಕರಿಸಿದ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ ಅವರಿಗೆ ಚರ್ಚೆ ಆರಂಭಿಸುವಂತೆ ಹೇಳಿದರಂತೆ. ಆರ್ಥಿಕ ವಿಷಯಗಳನ್ನು ಬಲ್ಲ ಚಿದಂಬರಂ, ಮನಮೋಹನ್ ಸಿಂಗ್, ಕಪಿಲ್ ಸಿಬಲ್ ಅವರಿಗೆ ಮಾತನಾಡಲು ಕೊಡದೆ ಗುಲಾಂ ನಬಿ ಆಜಾದ್, ಆನಂದ್ ಶರ್ಮ ಮತ್ತು ಜೈರಾಮ್ ರಮೇಶ್ ಜಿಎಸ್‌ಟಿ ಮೇಲೆ ಮಾತನಾಡಿದ್ದು ರಾಜ್ಯಸಭೆಯ ಕಾಂಗ್ರೆಸ್ ಸಂಸದರ ಅಸಮಾಧಾನಕ್ಕೆ ಕಾರಣವಾಗಿದೆ. ಕೊನೇ ಗಳಿಗೆಯಲ್ಲಿ ಮಧ್ಯಸ್ಥಿಕೆ ವಹಿಸಿ ಅಹ್ಮದ್ ಪಟೇಲ್ ಅವರು ಚಿದಂಬರಂರನ್ನು ಮಾತನಾಡುವಂತೆ ಕೇಳಿಕೊಂಡರಾದರೂ ‘ನಾನು ಮಾತನಾಡೋಲ್ಲ' ಎಂದು ಸಿಟ್ಟಿನಿಂದ ಹೇಳಿ ಚಿದಂಬರಂ ಹೊರಹೋದರಂತೆ.
ವಿಚಿತ್ರ ವೀರಪ್ಪ
ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರು ಕನ್ನಡದಲ್ಲಿ ಬರೆದಿದ್ದ ದ್ರೌಪದಿ ಕುರಿತಾದ ಪುಸ್ತಕದ ಆಂಗ್ಲ ಅನುವಾದದ ಕೃತಿ ಕಳೆದ ವಾರ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆಗೊಂಡಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದ 45 ನಿಮಿಷದ ಕಾರ್ಯಕ್ರಮದಲ್ಲಿ ಸೌಜನ್ಯಕ್ಕಾದರೂ ಕೃತಿಯ ಅನುವಾದಕ ಮೈಸೂರಿನ ಡಿ.ಎ.ಶಂಕರ ಅವರನ್ನು ಪರಿಚಯ ಮಾಡಿಸದ ವೀರಪ್ಪ ಮೊಯ್ಲಿ ಅವರು ಭಾಷಣದಲ್ಲೂ ಕೂಡ ತಮ್ಮ ಬಗ್ಗೆಯೇ ಹೇಳಿಕೊಂಡರೇ ಹೊರತು ಶಂಕರ ಅವರಿಗೆ ಧನ್ಯವಾದ ಕೂಡ ಹೇಳಲಿಲ್ಲ.
ಅಗಾಧ ನೆನಪಿನ ಶಕ್ತಿಯ ಪ್ರಣಬ್:
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ನೆನಪಿನ ಶಕ್ತಿ ಅಗಾಧ. ಇವತ್ತಿಗೂ 1952ರ ಚುನಾವಣೆಯಿಂದ ಹಿಡಿದು 2014ರ ಚುನಾವಣೆಯ ಅಂಕಿ-ಸಂಖ್ಯೆಗಳನ್ನು ನಿರರ್ಗಳವಾಗಿ ಪ್ರಣಬ್ ದಾ ಹೇಳುತ್ತಾರಂತೆ. ಇತ್ತೀಚೆಗೆ ರಾಷ್ಟ್ರಪತಿ ಭವನಕ್ಕೆ ಹೋಗಿದ್ದ ಸಂಸದ ಆಸ್ಕರ್ ಫರ್ನಾಂಡಿಸ್, ‘1975ರಲ್ಲಿ ನೀವು ಉಡುಪಿಗೆ ಬಂದಿದ್ರಿ' ಎಂದು ಹೇಳಿದಾಗ ‘ಹೌದು, ನೆನಪಿದೆ. ನೀವು ಸೈಕಲ್ ಮೇಲೆ ಬಂದು ನನ್ನನ್ನು ಭೇಟಿಯಾಗಿದ್ರಿ' ಎಂದು ಪ್ರಣಬ್ ಹೇಳಿದಾಗ ಆಸ್ಕರ್ ಅವಾಕ್ಕಾದರಂತೆ. ಅಷ್ಟೇ ಅಲ್ಲ, 1980ರಲ್ಲಿ ಪ್ರಣಬ್ ಮುಖರ್ಜಿ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾಗ ಆಸ್ಕರ್ ವಿಧಾನಪರಿಷತ್ ಸದಸ್ಯ ಸ್ಥಾನವನ್ನು ನಿರಾಕರಿಸಿದ ಬಗ್ಗೆಯೂ ಕೂಡ ನೆನಪಿಟ್ಟು ಹೇಳಿದರಂತೆ.
ಗಡಿಬಿಡಿ ಪ್ರಭು, ಫಾಸ್ಟ್ ಪ್ರಕಾಶ್
ರೈಲ್ವೆ ಸಚಿವ ಸುರೇಶ್ ಪ್ರಭು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಯಾರೇ ಭೇಟಿಯಾಗಲು ಹೋದರೂ ಸರಿಯಾಗಿ ಮಾತನಾಡಿಸೋದಿಲ್ಲ ಎಂದು ಬಿಜೆಪಿಯ ಹಿರಿಯ ಸಂಸದರು ಪ್ರಧಾನಿ ಮೋದಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಸುರೇಶ್ ಪ್ರಭು ಅವರು ಕ್ಷೇತ್ರದ ಯಾವುದೇ ಕೆಲಸ ತೆಗೆದುಕೊಂಡು ಹೋದರೂ ಮಾಡಿಕೊಡುವುದಿಲ್ಲ ಮತ್ತು ಸಮಾಧಾನವಾಗಿ ಕೇಳುವುದಿಲ್ಲ. ಸಭೆ ಮುಗಿಸಲು ಗಡಿಬಿಡಿ ಮಾಡುತ್ತಾರೆ ಎಂಬುದು ಸಂಸದರ ದೂರಾದರೆ, ಪ್ರಕಾಶ್ ಜಾವಡೇಕರ್ ಅವರು ಎಷ್ಟೇ ಹಿರಿಯ ಸಂಸದರು ಹೋದರೂ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿಸದೆ ‘ಫಾಸ್ಟ್ ಫಾಸ್ಟ್' ಎನ್ನುತ್ತಾರೆ ಎಂದು ಸಂಸದರು ಬೇಸರಿಸಿಕೊಂಡಿದ್ದಾರೆ. ಕರ್ನಾಟಕದ ಒಬ್ಬ ಬಿಜೆಪಿ ಹಿರಿಯ ಸಂಸದರಂತೂ ಸುರೇಶ್ ಪ್ರಭು ಅವರಿಗೆ, ‘ನಿಮ್ಮ ವಿರುದ್ಧ ನಾನೇ ಪ್ರಧಾನಿಗೆ ದೂರು ನೀಡುತ್ತೇನೆ' ಎಂದು ಖಡಕ್ಕಾಗಿ ಹೇಳಿದ್ದಾರಂತೆ.
ಕರ್ನಾಟಕಕ್ಕೆ ಬೇಕು ವಕೀಲರು:
ನೀರಿನ ವಿವಾದದಲ್ಲಿ ದಶಕಗಳಿಂದ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲ ಅನಿಲ್ ದಿವಾನ್ ನಿಧನರಾಗಿದ್ದು, 88 ವರ್ಷದ ಫಾಲಿ ನಾರಿಮನ್ ವರ್ಟಿಗೊ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾವೇರಿ, ಮಹದಾಯಿ ಪ್ರಕರಣ ವಿಚಾರಣೆಗೆ ಬಂದಾಗ ವಾದ ಮಂಡಿಸಲು ಹೊಸ ಸಮರ್ಥ ವಕೀಲರ ಹುಡುಕಾಟ ಕರ್ನಾಟಕ ಸರ್ಕಾರಕ್ಕೆ ಅನಿವಾರ್ಯ ಆಗಬಹುದು. ಹಾಗೆ ಕರ್ನಾಟಕದ ವಕೀಲರ ತಂಡದಲ್ಲಿ 15 ಮಂದಿ ಕರಿ ಕೋಟುಧಾರಿಗಳು ಇದ್ದಾರಾದರೂ ಅವರಲ್ಲಿ ಮೋಹನ್ ಕಾತರಕಿ ಒಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ಸುಪ್ರೀಂಕೋರ್ಟ್‌ನಲ್ಲಿ ಗಟ್ಟಿದನಿಯಲ್ಲಿ ವಾದ ಮಾಡಿದ್ದು ಅಪರೂಪ. ಹೀಗಾಗಿ ಮುಂದಿನ ಒಂದೆರಡು ತಿಂಗಳಲ್ಲಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ತನ್ನ ಮಾತಿನಿಂದ ನ್ಯಾಯಮೂರ್ತಿಗಳ ಗಮನ ಸೆಳೆಯಬಲ್ಲ, ನ್ಯಾಯಪೀಠದ ಮನವೊಲಿಸಬಲ್ಲ ವಕೀಲರನ್ನು ನೇಮಿಸುವ ಸಾಧ್ಯತೆ ಇದೆ.
ಸಿಂಗರ್ ಸಂಸದ ಆಸ್ಕರ್:
ಶುಕ್ರವಾರ ಸಂಜೆ ರಾಜ್ಯಸಭೆಯಲ್ಲಿ ತುಳು ಭಾಷೆ ಕುರಿತಾದ ಖಾಸಗಿ ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ಆಸ್ಕರ್ ಫರ್ನಾಂಡಿಸ್ ಗಟ್ಟಿಧ್ವನಿಯಲ್ಲಿ ತುಳು ಹಾಡೊಂದನ್ನು ಹಾಡಲು ಆರಂಭಿಸಿದಾಗ ಸಭಾಪತಿ ಸೇರಿ ಸದನದಲ್ಲಿದ್ದವರೆಲ್ಲರೂ ತಲೆದೂಗುತ್ತಿದ್ದರು. "ನಮ್ಮ ಉಡುಪಿ ಕಡೆ ಎಮ್ಮೆಗಳಿಗೆ ಕನ್ನಡ ಹಾಡು ಅರ್ಥವಾಗಲ್ಲ. ಹೀಗಾಗಿ ನಾವು ತುಳು ಹಾಡು ಹಾಡುತ್ತಿದ್ದೆವು" ಎಂದೇಳಿ ‘ಓ ಮಗಾ' ಎಂದು ಕೊಂಕಣಿ ಧಾಟಿಯಲ್ಲಿ ಹಾಡು ಆರಂಭಿಸಿದರು. ಸಭಾಪತಿಗಳು ‘ನೀವು ಬಹಳ ಚೆನ್ನಾಗಿ ಹಾಡುತ್ತೀರಿ' ಎಂದು ಹೇಳಿದರೆ,
‘ಓ ಮಗಾ ಕೊರಗ ಒರಬರಯನಾ
ಎರು ಬತ್ತಂಡ ಬಲ್ಪು ಮಗಾ ಬೆರಿಬುಡೋಡಾ
ಓ ಮಗಾ ಕೊರಗ ಒಂರ್ಬರಯನಾ'
ಅಡುಗೆ ಭಟ್ಟ ಇಂದು ಶಾ ಆಪ್ತ ಕಾರ್ಯದರ್ಶಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮಯ ಬೇಕೆಂದರೆ ಘಟಾನುಘಟಿ ಬಿಜೆಪಿ ನಾಯಕರು ಮೊದಲು ಕರೆ ಮಾಡುವುದು ಅವರ ಆಪ್ತ ಕಾರ್ಯದರ್ಶಿ ನೇಪಾಳಿ ಸಂದೀಪ್ ರಾಣಾ ಅವರಿಗೆ. 2004ರಲ್ಲಿ ದೆಹಲಿಗೆ ಅಡುಗೆ ಕೆಲಸಕ್ಕೆಂದು ಬಂದ ಸಂದೀಪ್ ಸಂಸದರ ಮನೆಗಳಲ್ಲಿ ಅಡುಗೆ ಮಾಡುತ್ತಾ, ದೆಹಲಿಯ ಎಬಿವಿಪಿ ಕಾರ್ಯಾಲಯದಲ್ಲಿ ಅಡುಗೆ ಆರಂಭಿಸಿದರು. ನಂತರ ದೆಹಲಿ ವಿವಿಯಲ್ಲಿ ಡಿಗ್ರಿ ಮುಗಿಸಿಕೊಂಡು ಎಬಿವಿಪಿ ಫುಲ್'ಟೈಮ್ ವರ್ಕರ್ ಆದರಂತೆ. ನಂತರ 2014ರಲ್ಲಿ ಅಮಿತ್ ಶಾ ಒಬ್ಬ ಸಮರ್ಥ ನಿಷ್ಠಾವಂತ ಆಪ್ತ ಕಾರ್ಯದರ್ಶಿ ಕೊಡಿ ಎಂದು ಕೇಳಿದಾಗ ಸಿಕ್ಕಿದವರೇ ಸಂದೀಪ್. ಇವತ್ತು ಅಮಿತ್ ಶಾ ಅಪಾಯಿಂಟ್ಮೆಂಟ್'ಗಳು, ಸೋಷಿಯಲ್ ಮೀಡಿಯಾ ಪ್ರಚಾರವನ್ನು ನೋಡಿಕೊಳ್ಳುವ ಸಂದೀಪ್ ದೇಶದ ಪ್ರಭಾವಶಾಲಿಗಳ ಮೊಬೈಲ್ ಸ್ಪೀಡ್ ಡಯಲ್'ನಲ್ಲಿದ್ದಾರೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.