ವಿದೇಶಿ ವಿನಿಮಯದಲ್ಲಿ ದಾಖಲೆಯ ಸಂಗ್ರಹ

By Suvarna Web DeskFirst Published Sep 17, 2017, 9:12 AM IST
Highlights

ಅತ್ಯಂತ ಹೆಚ್ಚು ವಿದೇಶಿ ಕರೆನ್ಸಿ ಹೊಂದಿರುವ ವಿಶ್ವದ ರಾಷ್ಟ್ರಗಳ ಪೈಕಿ ಹಾಲಿ ಭಾರತ 400 ಶತಕೋಟಿ ಡಾಲರ್‌'ನೊಂದಿಗೆ 8ನೇ ಸ್ಥಾನ ಪಡೆದುಕೊಂಡಿದೆ.

ಮುಂಬೈ(ಸೆ.17): ಡಾಲರ್ ವಿರುದ್ಧ ರುಪಾಯಿ ಮೌಲ್ಯ ಶೇ.6ರಷ್ಟು ಜಿಗಿತ ಹಾಗೂ ವಿದೇಶಿ ಹೂಡಿಕೆ ಹೆಚ್ಚಳ ಹಿನ್ನೆಲೆಯಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 25 ಲಕ್ಷ ಕೋಟಿ ರು. (400 ಶತಕೋಟಿ ಡಾಲರ್) ಗಡಿಯನ್ನು ದಾಟಿ ಹೊಸ ದಾಖಲೆ ಬರೆದಿದೆ.

26 ವರ್ಷಗಳ ಹಿಂದೆ ವಿದೇಶಿ ವಿನಿಮಯ ಬರಿದಾಗಿ ಚಿನ್ನ ಒತ್ತೆ ಇಟ್ಟು ದೇಶ ನಡೆಸಬೇಕಾದ ದುಸ್ಥಿತಿಗೆ ತಲುಪಿದ್ದ ದೇಶದಲ್ಲಿ ನಡೆದಿರುವ ಈ ಬೆಳವಣಿಗೆ ಭಾರತದ ಆರ್ಥಿಕ ಪ್ರಗತಿಗೆ ಅತ್ಯುತ್ತಮ ನಿದರ್ಶನವಾಗಿದೆ ಎಂದು ಹೇಳಲಾಗಿದೆ. ವರ್ಷಾಂತ್ಯಕ್ಕೆ ಅಮೆರಿಕದ ಕೇಂದ್ರೀಯ ಬ್ಯಾಂಕು ತನ್ನ ಉತ್ತೇಜನಾ ಪ್ಯಾಕೇಜ್ ಕಡಿತಗೊಳಿಸುವ ಸಾಧ್ಯತೆ ಇರುವುದರಿಂದ ಆ ನಂತರ ಉಂಟಾಗಬಹುದಾದ ಆರ್ಥಿಕ ಸ್ಥಿತ್ಯಂತರಗಳನ್ನು ತಡೆದುಕೊಳ್ಳುವ ಆಶಾಭಾವನೆಯನ್ನು ಈ ಬೆಳವಣಿಗೆ ಬಲಪಡಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

2017ರ ಸೆ.8ಕ್ಕೆ ಮುಕ್ತಾಯಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹ 16 ಸಾವಿರ ಕೋಟಿ ರು.ನಷ್ಟು ಹೆಚ್ಚಳ ಕಂಡು 25 ಲಕ್ಷ ಕೋಟಿ ರು. (400 ಬಿಲಿಯನ್ ಅಮೆರಿಕನ್ ಡಾಲರ್)ಗೆ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ. ವಿದೇಶ ವಿನಿಮಯ ಹೆಚ್ಚಳವಾಗಿರುವುದರಿಂದ ಭಾರತದ ಸಾಲ ಹಾಗೂ ಷೇರು ಪೇಟೆಯಿಂದ ವಿದೇಶಿ ಹೂಡಿಕೆ ವಾಪಸಾದರೂ ಯಾವುದೇ ರೀತಿಯ ಹೊಯ್ದಾಟವನ್ನು ತಡೆದುಕೊಳ್ಳುವ ಶಕ್ತಿ ರುಪಾಯಿಗೆ ಲಭಿಸಿದೆ ಎಂದು ಹೇಳಲಾಗುತ್ತಿದೆ.

ಕಳೆದ 12 ತಿಂಗಳಿನಿಂದ ಭಾರತೀಯ ಬಾಂಡ್ ಹಾಗೂ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1 ಲಕ್ಷ ಕೋಟಿ ರು.ಗೂ ಅಧಿಕ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ.

8ನೇ ದೇಶ: ಅತ್ಯಂತ ಹೆಚ್ಚು ವಿದೇಶಿ ಕರೆನ್ಸಿ ಹೊಂದಿರುವ ವಿಶ್ವದ ರಾಷ್ಟ್ರಗಳ ಪೈಕಿ ಹಾಲಿ ಭಾರತ 400 ಶತಕೋಟಿ ಡಾಲರ್‌'ನೊಂದಿಗೆ 8ನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ 3,056 ಶತಕೋಟಿ ಡಾಲರ್‌'ನೊಂದಿಗೆ ಚೀನಾ ನಂ.1, 1249 ಶತಕೋಟಿ ಡಾಲರ್‌'ನೊಂದಿಗೆ ಜಪಾನ್ ನಂ.2 ಮತ್ತು 786 ಶತಕೋಟಿ ಡಾಲರ್‌'ನೊಂದಿಗೆ ಸ್ವಿಜರ್ಲೆಂಡ್ 3ನೇ ಸ್ಥಾನದಲ್ಲಿದೆ.

click me!