
ನವದೆಹಲಿ(ಸೆ.17):ಮಕ್ಕಳನ್ನು ಆತ್ಮಹತ್ಯೆಗೆ ದೂಡುವ ಅಪಾಯಕಾರಿ ಆನ್‌ಲೈನ್ ಆಟ ‘ಬ್ಲೂವೇಲ್ ಚಾಲೆಂಜ್ ಗೇಮ್’ ನಗರ ಪ್ರದೇಶಗಳಷ್ಟೇ ಅಲ್ಲ, ಗ್ರಾಮೀಣ, ಅರಣ್ಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ ಎಂಬುದಕ್ಕೆ ತಾಜಾ ನಿದರ್ಶನವೊಂದು ಸಿಕ್ಕಿದೆ.
ದೇಶದಲ್ಲೇ ಅತಿ ಹೆಚ್ಚು ಬಡತನ ತಾಂಡವವಾಡುತ್ತಿರುವ ವಲಯಗಳಲ್ಲಿ ಒಂದಾಗಿರುವ, ನಕ್ಸಲರ ಭದ್ರಕೋಟೆಯಾಗಿ ಪರಿವರ್ತನೆಯಾಗಿರುವ ಛತ್ತೀಸ್'ಗಢದ ದಾಂತೇವಾಡ ಜಿಲ್ಲೆಯಲ್ಲಿ 30 ಆದಿವಾಸಿ ಮಕ್ಕಳು ಬ್ಲೂವೇಲ್ ಗೇಮ್ ಆಡುತ್ತಿರುವುದು ಪತ್ತೆಯಾಗಿದೆ.
ಹರಿತವಾದ ಬ್ಲೇಡ್'ನಿಂದ ಕೈ ಮೇ ಮೇಲೆ ತಿಮಿಂಗಿಲದ ಚಿತ್ರಗಳನ್ನು ಕೆತ್ತಿದ್ದ ಈ ಮಕ್ಕಳನ್ನು ಸರ್ಕಾರಿ ಪ್ರೌಢಶಾಲೆಯೊಂದರಿಂದ ಪೊಲೀಸರು ರಕ್ಷಣೆ ಮಾಡಿದ್ದಾರೆ. ದಿನಪತ್ರಿಕೆಗಳು ಹಾಗೂ ಇಂಟರ್ನೆಟ್ ಮೂಲಕ ಈ ಗೇಮ್ ಬಗ್ಗೆ ಮಕ್ಕಳು ತಿಳಿದುಕೊಂಡಿದ್ದಾರೆ ಎಂದು ಹೇಳಲಾಗಿದೆ. ವಿಶೇಷ ಎಂದರೆ, ಆದಿವಾಸಿ ಮಕ್ಕಳು ಬ್ಲೂವೇಲ್ ಗೇಮ್'ಗೆ ದಾಸರಾಗುತ್ತಿರುವುದಕ್ಕೆ ಕುತೂಹಲ ಕಾರಣವಲ್ಲ. ಬದಲಿಗೆ ಈ ಗೇಮ್'ನಿಂದ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ನಂಬಿಕೆ. ತಂದೆ ಕುಡಿತ ಬಿಡುತ್ತಾರೆ ಎಂಬ ಕಾರಣಕ್ಕೆ ಬ್ಲೂವೇಲ್ ಆಡಲು ಆರಂಭಿಸಿದೆ ಎಂದು ಒಂದು ಮಗು ಹೇಳಿದ್ದರೆ, ಬಲವಂತದ ಮದುವೆ ಮಾಡಲು ತಂದೆ ಮುಂದಾಗಿದ್ದಾರೆ. ಗೇಮ್ ಆಡಿದರೆ ಆ ಮದುವೆ ನಿಲ್ಲುತ್ತದೆ ಎಂಬ ಕಾರಣಕ್ಕೆ ಗೇಮ್ ಆಡಿದ್ದಾಗಿ ಬಾಲಕಿಯೊಬ್ಬಳು ತಿಳಿಸಿದ್ದಾಳೆ.
ಅತ್ಯಂತ ಹಿಂದುಳಿದ ಜಿಲ್ಲೆಯ ಮಕ್ಕಳಿಗೆ ಮೊಬೈಲ್ ಸಿಕ್ಕಿದ್ದು ಮತ್ತು ಅವರು ಇಂಟರ್ನೆಟ್ ಬಳಸಿ ಆಟ ಆಡುತ್ತಿರುವುದು ಸಾಕಷ್ಟು ಅಚ್ಚರಿಗೂ ಕಾರಣವಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.