ಭಾರತದ ಮೇಲೇ ಆರೋಪ ಹೊರಿಸಿದ ವಿಜಯ್ ಮಲ್ಯ!

By Web DeskFirst Published Dec 16, 2018, 10:07 AM IST
Highlights

ನನ್ನ ಗಡೀಪಾರಿಗೆ ಮುತುವರ್ಜಿ ವಹಿಸಿದಷ್ಟುಸಾಲ ವಸೂಲಿಗೆ ಭಾರತ ಮುಂದಾಗಲಿಲ್ಲ: ಮಲ್ಯ

ಲಂಡನ್‌[ಡಿ.16]: ಭಾರತೀಯ ಬ್ಯಾಂಕ್‌ಗಳಲ್ಲಿ ನಾನು ಮಾಡಿದ ಸಾಲ ವಸೂಲಿ ಮಾಡುವುದಕ್ಕಿಂತಲೂ ಹೆಚ್ಚಾಗಿ ಭಾರತ ಸರ್ಕಾರ ನನ್ನ ಗಡೀಪಾರು ವಿಚಾರದ ಬಗ್ಗೆಯೇ ದೃಷ್ಟಿ ನೆಟ್ಟಿತ್ತು ಎಂದು ಬ್ರಿಟನ್‌ ಕೋರ್ಟ್‌ನಿಂದ ಗಡೀಪಾರು ಆದೇಶಕ್ಕೆ ಗುರಿಯಾದ ಮದ್ಯದೊರೆ ವಿಜಯ್‌ ಮಲ್ಯ ಅವರು ಹೇಳಿದ್ದಾರೆ.

ಇ-ಮೇಲ್‌ ಮೂಲಕ ಎನ್‌ಡಿಟಿವಿ ನಡೆಸಿದ ಸಂದರ್ಶನಕ್ಕೆ ಉತ್ತರಿಸಿರುವ ವಿಜಯ್‌ ಮಲ್ಯ ಅವರು, ತಮ್ಮನ್ನು ಬ್ರಿಟನ್‌ನಿಂದ ಗಡೀಪಾರು ಮಾಡಿದ ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿಗೆ ಹೋಗಲು ಮುಕ್ತವಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ, 2016ಕ್ಕಿಂತ ಮುಂಚಿನಿಂದಲೂ ಸಾಲ ಮರುಪಾವತಿ ಮಾಡುವುದಾಗಿ ಸುಪ್ರೀಂ ಕೋರ್ಟ್‌ ಬಳಿಯೂ ಹೇಳಿಕೊಂಡೇ ಬಂದಿದ್ದೇನೆ. ಜೊತೆಗೆ, ನನ್ನ ಆಸ್ತಿಯನ್ನು ಮಾರಾಟ ಮಾಡಿ, ನೌಕರರಿಗೆ ವೇತನ, ಬ್ಯಾಂಕ್‌ಗಳ ಸಾಲ ಹಾಗೂ ಇತರ ಸಾಲ ತೀರಿಸುವುದಾಗಿಯೂ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ನನ್ನ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಆರೋಪ ಹೊರಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ, ನನ್ನ ಆಫರ್‌ಗಳನ್ನು ತಿರಸ್ಕರಿಸುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿತ್ತು ಎಂದು ಭಾರತ ಸರ್ಕಾರದ ವಿರುದ್ಧ ಮಲ್ಯ ಪರೋಕ್ಷ ಆರೋಪ ಮಾಡಿದ್ದಾರೆ.

ಈ ಹೇಳಿಕೆ ನೀಡುವ ಮೂಲಕ ವಿಜಯ್ ಮಲ್ಯ ಭಾರತದ ಮೇಲೇ ಗೂಬೆ ಕೂರಿಸಿದ್ದಾರೆ.

click me!