ಮುಸ್ಲಿಮರ ಹತ್ಯಾಕಾಂಡ : 16 ಪೊಲೀಸರಿಗೆ ಜೀವಾವಧಿ ಶಿಕ್ಷೆ

Published : Nov 01, 2018, 08:24 AM IST
ಮುಸ್ಲಿಮರ ಹತ್ಯಾಕಾಂಡ : 16 ಪೊಲೀಸರಿಗೆ ಜೀವಾವಧಿ ಶಿಕ್ಷೆ

ಸಾರಾಂಶ

ಉತ್ತರಪ್ರದೇಶದ ಮೇರಠ್‌ ಸಮೀಪದ ಹಶೀಂಪುರ ಎಂಬಲ್ಲಿ 1987 ರಲ್ಲಿ ನಡೆದಿದ್ದ 42 ಮುಸ್ಲಿಮರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈಗಾಗಲೇ ಹುದ್ದೆಯಿಂದ ನಿವೃತ್ತಿಗೊಂಡಿರುವ 16 ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 

ನವದೆಹಲಿ: 1987ರಲ್ಲಿ ಉತ್ತರಪ್ರದೇಶದ ಮೇರಠ್‌ ಸಮೀಪದ ಹಶೀಂಪುರ ಎಂಬಲ್ಲಿ ನಡೆದಿದ್ದ 42 ಮುಸ್ಲಿಮರ ಹತ್ಯಾಕಾಂಡ ಪ್ರಕರಣ ಸಂಬಂಧ, ಈಗಾಗಲೇ ಹುದ್ದೆಯಿಂದ ನಿವೃತ್ತಿಗೊಂಡಿರುವ 16 ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿ ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಈ ಮೂಲಕ 16 ಜನರಿಗೆ ಕ್ಲೀನ್‌ಚಿಟ್‌ ನೀಡಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿದೆ.

31 ವರ್ಷಗಳ ಹಿಂದೆ ನಡೆದ ಈ ಘಟನೆ, ಯಾವುದೇ ರಕ್ಷಣೆ ಇಲ್ಲದ, ನಿಶ್ಯಸ್ತ್ರರಾಗಿದ್ದ ಜನರನ್ನು ಗುರಿಯಾಗಿಸಿ ನಡೆಸಿದ ಹತ್ಯೆ. ಸಂತ್ರಸ್ತ ಕುಟುಂಬಗಳು ನ್ಯಾಯಕ್ಕಾಗಿ 31 ವರ್ಷ ಕಾಯಬೇಕಾಗಿ ಬಂತು. ಅವರು ಅನುಭವಿಸಿದ ನೋವನ್ನು ಕೇವಲ ಹಣಕಾಸಿನ ನೆರವಿನಿಂದ ತುಂಬಲಾಗದು ಎಂದು ನ್ಯಾ. ಎಸ್‌.ಮುರಳೀಧರ್‌ ಮತ್ತು ನ್ಯಾ.ವಿನೋದ್‌ ಗೋಯೆಲ್‌ ಅವರನ್ನೊಳಗೊಂಡ ಪೀಠ ಹೇಳಿತು. ಜೊತೆಗೆ ಎಲ್ಲಾ ದೋಷಿಗಳು ನ.22ರೊಳಗೆ ಶರಣಾಗಬೇಕು ಎಂದು ಸೂಚಿಸಿತು.

2015ರಲ್ಲಿ ದೆಹಲಿಯ ಅಧೀನ ನ್ಯಾಯಾಲಯ ಹತ್ಯೆ ಆರೋಪಿಗಳಿಗೆ ಕ್ಲೀನ್‌ಚಿಟ್‌ ನೀಡಿದ್ದನ್ನು ಪ್ರಶ್ನಿಸಿ ಉತ್ತರಪ್ರದೇಶ ಸರ್ಕಾರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಕೆಲ ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಈ ತೀರ್ಪು ನೀಡಿದೆ. ಎಲ್ಲಾ ಆರೋಪಿಗಳ ವಿರುದ್ಧ ಅತ್ಯಂತ ಪ್ರಬಲ ಸಾಕ್ಷ್ಯ ಲಭ್ಯವಿದ್ದು, ಅವು, ಹತ್ಯೆಯನ್ನು ಸಾಬೀತುಪಡಿಸುತ್ತಿವೆ ಎಂದು ಕೋರ್ಟ್‌ ತನ್ನ ಆದೇಶದಲ್ಲಿ ಹೇಳಿತು.

ಪ್ರಕರಣ ಹಿನ್ನೆಲೆ: ಉತ್ತರಪ್ರದೇಶ ಮೇರಠ್‌ನಲ್ಲಿ 1987ರಲ್ಲಿ ಕೋಮುಗಲಭೆ ಸಂಭವಿಸಿತ್ತು. ಈ ವೇಳೆ ಗಲಭೆ ನಿಯಂತ್ರಿಸಲು ಸ್ಥಳಕ್ಕೆ ಪ್ರಾದೇಶಿಕ ಪೊಲೀಸ್‌ ಪಡೆ (ಪಿಎಸಿ)ಯನ್ನು ನಿಯೋಜಿಸಲಾಗಿತ್ತು. ಕೆಲ ದಿನಗಳಲ್ಲಿ ಗಲಭೆ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಪಿಎಸಿಯನ್ನು ಮರಳಿ ಕರೆಸಿಕೊಳ್ಳಲಾಗಿತ್ತು. ಆದರೆ ಕೆಲ ದಿನಗಳಲ್ಲಿ ಮತ್ತೆ ಮೇರಠ್‌ನಲ್ಲಿ ಭಾರೀ ಹಿಂಸಾಚಾರ ಸಂಭವಿಸಿ ಹಲವಾರು ಜನ ಸಾವನ್ನಪ್ಪಿದರು. ಈ ವೇಳೆ ಸ್ಥಳಕ್ಕೆ ಮತ್ತೆ ಪಿಎಸಿ ಜೊತೆಗೆ ಸೇನೆಯನ್ನೂ ನಿಯೋಜಿಸಲಾಯಿತು.

ಈ ನಡುವೆ 1987ರ ಮೇ 22ರ ಸುಮಾರಿಗೆ ಪಿಎಸಿ ನೂರಾರು ಸಿಬ್ಬಂದಿ ಹಶೀಂಪುರ ಕಾಲೋನಿ ಮೇಲೆ ದಾಳಿ ನಡೆಸಿ ಇಡೀ ಪ್ರದೇಶವನ್ನು ವಶಕ್ಕೆ ಪಡೆದರು. ಬಳಿಕ ಕಾಲೋನಿಯ ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ಬೇರ್ಪಡಿಸಿ ಹಿಂಸಾಚಾರ ನಡೆಸಿದ ಆರೋಪದ ಮೇಲೆ 40-50 ಯುವಕರನ್ನು ತಮ್ಮೊಂದಿಗೆ ಠಾಣೆಗೆಂದು ಕರೆದೊಯ್ದರು. ಆದರೆ ಅವರೆನ್ನೆಲ್ಲಾ ಠಾಣೆಯ ಬದಲು ಸಮೀಪದ ಗಂಗಾ ಮೇಲ್ದಂಡೆ ಕಾಲುವೆ ಬಳಿ ಕರೆದೊಯ್ದು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಹತ್ಯೆಗೈದು, ಶವಗಳನ್ನು ಕಾಲುವೆಗೆ ಎಸೆಯಲಾಯಿತು. 

ಹೀಗೆ 40ಕ್ಕೂ ಹೆಚ್ಚು ಜನರನ್ನು ಹತ್ಯೆಗೈಯುವ ವೇಳೆ ಆಸುಪಾಸಲ್ಲೇ ವಾಹನಗಳ ಸದ್ದು ಕೇಳಿ ಪಿಎಸಿ ಸಿಬ್ಬಂದಿ ಸ್ಥಳದಿಂದ ಪಲಾಯನಗೈದರು. ಜೊತೆಗೆ ಗುಂಡಿನ ದಾಳಿ ಎದುರಿಸಲು ಅಣಿಯಾಗಿದ್ದ ಕೆಲ ಯುವಕರೂ, ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದರು. ಈ ನಡುವೆ ಪೊಲೀಸರ ಗುಂಡೇಟಿನಿಂದ ಸತ್ತೆವೆಂದು ನಟಿಸಿ ನದಿಗೆ ಎಸೆಯಲ್ಪಟ್ಟಿದ್ದ ನಾಲ್ವರು, ಕಾಲುವೆಯಲ್ಲಿ ಈಜಿ ಪಾರಾಗಿ ಬಂದು, ಪೊಲೀಸರಿಗೆ ದೂರು ನೀಡಿದ್ದರು. ಇದಾದ ಕೆಲ ದಿನಗಳಲ್ಲಿ ಗುಂಡೇಟು ತಿಂದು ಕಾಲುವೆಗೆ ಎಸೆಯಲ್ಪಟ್ಟಿದ್ದ ಯುವಕರ ಶವಗಳು ತೇಲಿಬಂದವು.

ತನಿಖೆಗೆ ಆದೇಶ: 42 ಜನರ ಹತ್ಯೆ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ 1988ರಲ್ಲಿ ಸಿಬಿ- ಸಿಐಡಿ ತನಿಖೆಗೆ ಆದೇಶಿಸಿತು. ಘಟನೆ ಕುರಿತು 1994ರಲ್ಲಿ ವರದಿ ಸಲ್ಲಿಸಿದ ಸಿಐಡಿ 60 ಪೊಲೀಸರನ್ನು ಹೆಸರಿಸಿತು. 1996ರಲ್ಲಿ ನ್ಯಾಯಾಲಯ 19 ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಿತು. ಈ ನಡುವೆ ಸಂತ್ರಸ್ತ ಕುಟುಂಬದ ಕೋರಿಕೆ ಮೇರೆಗೆ ಪ್ರಕರಣವನ್ನು ಸುಪ್ರೀಂಕೋರ್ಟ್‌ ದೆಹಲಿಗೆ ವರ್ಗಾಯಿಸಿತು. ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ಅಧೀನ ನ್ಯಾಯಾಲಯ ಸೂಕ್ತ ಸಾಕ್ಷ್ಯಾಧಾರದ ಕೊರತೆ ಇದೆ ಎಂದು ಹೇಳಿ ಎಲ್ಲಾ 16 ಆರೋಪಿಗಳನ್ನು ದೋಷ ಮುಕ್ತಗೊಳಿಸಿತ್ತು. ಇದನ್ನು ಬಳಿಕ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ