ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ

Published : Sep 07, 2017, 10:14 PM ISTUpdated : Apr 11, 2018, 12:59 PM IST
ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ

ಸಾರಾಂಶ

ಮಾಸಿಕ ಆರು ಸಾವಿರ ರು. ವೇತನ ನಿಗದಿ ಮಾಡಬೇಕು. ಜತೆಗೆ ಸೇವೆ ಕಾಯಂಗೊಳಿಸಬೇಕು.‘ಆಶಾ ಸಾಫ್ಟ್’ ವೇತನ ನೀಡಿಕೆ ಮಾದರಿ ರದ್ದುಪಡಿಸಿ ಪ್ರತಿ ತಿಂಗಳು ಸೇವೆಗೆ ತಕ್ಕ ಪ್ರೋತ್ಸಾಹಧನ ನೀಡಬೇಕು ಎಂಬುದು ಸೇರಿದಂತೆ ಎಂಟು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಎಲ್ಲೆಡೆಯಿಂದ ಆಗಮಿಸಿದ ಸುಮಾರು ೨೦ ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರದಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಮುಷ್ಕರ ಆರಂಭಿಸಿದ್ದಾರೆ. 

ಬೆಂಗಳೂರು (ಸೆ.07): ಮಾಸಿಕ ಆರು ಸಾವಿರ ರು. ವೇತನ ನಿಗದಿ ಮಾಡಬೇಕು. ಜತೆಗೆ ಸೇವೆ ಕಾಯಂಗೊಳಿಸಬೇಕು.‘ಆಶಾ ಸಾಫ್ಟ್’ ವೇತನ ನೀಡಿಕೆ ಮಾದರಿ ರದ್ದುಪಡಿಸಿ ಪ್ರತಿ ತಿಂಗಳು ಸೇವೆಗೆ ತಕ್ಕ ಪ್ರೋತ್ಸಾಹಧನ ನೀಡಬೇಕು ಎಂಬುದು ಸೇರಿದಂತೆ ಎಂಟು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಎಲ್ಲೆಡೆಯಿಂದ ಆಗಮಿಸಿದ ಸುಮಾರು 30 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರದಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಮುಷ್ಕರ ಆರಂಭಿಸಿದ್ದಾರೆ. 

ಎಐಟಿಯುಸಿ ಮತ್ತು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರದಲ್ಲಿ ಮೊದಲ ದಿನವೇ ಮಕ್ಕಳೊಂದಿಗೆ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶಗೊಂಡು ಬೃಹತ್ ಶಕ್ತಿ ಪ್ರದರ್ಶನದ ಮೂಲಕ ಪ್ರತಿಭಟನೆ ಆರಂಭಿಸಿದರು. ಭಾರಿ ಸಂಖ್ಯೆಯೊಂದಿಗೆ ಆಗಮಿಸಿದ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಲು ಮುಂದಾದ ರಾಜ್ಯ ಸರ್ಕಾರ ಇಡುಗಂಟಾಗಿ ಐದು ಸಾವಿರ ರು. ಗೌರವ ಧನ ನೀಡುವ ಷರತ್ತುಬದ್ಧ ಆದೇಶ ಹೊರಡಿಸಿತು. ಈ ಆದೇಶದ ಪ್ರತಿಯೊಂದಿಗೆ ಖುದ್ದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಇತರೆ ಅಧಿಕಾರಿಗಳು ಫ್ರೀಡಂ ಪಾರ್ಕ್‌ಗೆ ದೌಡಾಯಿಸಿ ಪ್ರತಿಭಟನಾ ನಿರತರಿಗೆ ಮಾಹಿತಿ ನೀಡಿದರು. ಆದರೆ, ಆರು ಸಾವಿರ ವೇತನದ ಪಟ್ಟನ್ನು ಆಶಾ ಕಾರ್ಯಕರ್ತೆಯರು ಬಿಡಲಿಲ್ಲ.

ಮಾಸಿಕ ಕನಿಷ್ಠ 6,000 ರು. ವೇತನ ಜಾರಿಯಾಗಲೇಬೇಕು. ಆಶಾ ಸಾಫ್ಟ್‌ನಿಂದ ಭಾರೀ ಅನ್ಯಾಯವಾಗುತ್ತಿದ್ದು, ನಾವು ಮಾಡಿದ ಕೆಲಸ ಕಾರ್ಯಗಳನ್ನು ಅದರಲ್ಲಿ ಸರಿಯಾಗಿ ದಾಖಲಿಸಲಾಗುತ್ತಿಲ್ಲ. ಮಾಹಿತಿ ನಮೂದಿಗೆ ಸೂಕ್ತ ಸಿಬ್ಬಂದಿಯೂ ಇಲ್ಲ. ಹಾಗಾಗಿ ಇದನ್ನು ರದ್ದುಪಡಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಪಟ್ಟು ಹಿಡಿದರು. ನಗರದಲ್ಲಿ ಸುರಿದ ಮಳೆಯನ್ನೂ ಲೆಕ್ಕಿಸದೆ ರಾತ್ರಿ ಇಡೀ ಫ್ರೀಡಂ ಪಾರ್ಕ್‌ನಲ್ಲೇ ಉಳಿದು ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟಕ್ಕೆ  ಶ್ರೀಕಾರ ಹಾಡಿದರು.

34 ಸೇವೆಗಳಿಗೆ 1000 ರೂ ಸಂಬಳ:

ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ, ಕೇಂದ್ರ ಸರ್ಕಾರದ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಆರೋಗ್ಯಕರ ಸಮಾಜಕ್ಕಾಗಿ ಗರ್ಭಿಣಿ, ಬಾಣಂತಿ ಆರೈಕೆ, ಜನನ, ಮರಣ ಪ್ರಮಾಣ ನೋಂದಣಿ ಸೇರಿದಂತೆ ವಿವಿಧ 34 ಆರೋಗ್ಯ ಸೇವೆಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಕೇವಲ 1ಸಾವಿರ ರೂ ಗೌರವಧನ ನೀಡಲಾಗುತ್ತಿದೆ. ಇದರ ಜತೆಗೆ ಅವರು ನಿರ್ವಹಿಸುವ ಸೇವೆಗಳಿಗೆ ಪ್ರತಿ ಕಾರ್ಯಕ್ಕೆ ಇಂತಿಷ್ಟು ಎಂದು ಕೇಂದ್ರ ಸರ್ಕಾರ ನೀಡುವ ಪ್ರೋತ್ಸಾಹಧನದ ಮೊತ್ತದಷ್ಟೇ ಹಣವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಈ ಮೊತ್ತ ಮಾಸಿಕ ಕೇವಲ ೫೦೦ರಿಂದ ೧೫೦೦ ರು. ದಾಟುತ್ತಿಲ್ಲ. ಇದಕ್ಕೆ, ವೇತನ ನೀಡಿಕೆ ಮಾದರಿ ‘ಆಶಾ ಸಾಫ್ಟ್’ನಲ್ಲಿನ ಲೋಪದೋಷಗಳು ಕಾರಣ. ಆಶಾ ಕಾರ್ಯಕರ್ತೆಯರ ಕಾರ್ಯಗಳನ್ನು ಇದರಲ್ಲಿ ಸರಿಯಾಗಿ ದಾಖಲಿಸಲಾಗುತ್ತಿಲ್ಲ. ಇದರಿಂದ ಅವರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಇದರ ಜತೆಗೆ ಇವರದ್ದಲ್ಲದ ಕಾರ್ಯಗಳಿಗೂ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಕನಿಷ್ಠ ಮಾಸಿಕ ೬ ಸಾವಿರ ರು. ವೇತನ ನಿಗದಿ ಪಡಿಸಿ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

 

ಆಶಾ ಕಾರ್ಯಕರ್ತೆಯರ ಬೇಡಿಗಳೇನು?

* ರಾಜ್ಯ ಸರ್ಕಾರದಿಂದ ಕನಿಷ್ಠ 6,000ರು. ಮಾಸಿಕ ವೇತನ ನಿಗದಿಪಡಿಸಿ ಪ್ರತಿ ತಿಂಗಳು ನಿಯಮಿತವಾಗಿ ನೀಡಬೇಕು.

* ಆಶಾ ಸಾಫ್ಟ್ ತಂತ್ರಾಂಶ ರದ್ದುಪಡಿಸಿ, ಕೇಂದ್ರ ಸರ್ಕಾರ ನೀಡುವ ಪ್ರೋತ್ಸಾಹಧನವನ್ನು ಪ್ರತಿ ತಿಂಗಳು ನೀಡಲು ಕ್ರಮ ಕೈಗೊಳ್ಳಬೇಕು.

* ಆಶಾ ಕಾರ್ಯಕರ್ತೆಯರನ್ನು ಕಾಯಂಗೊಳಿಸಿ ಪಿಎಫ್, ಇಎಸ್‌ಐ, ಪಿಂಚಿಣಿ ಸೌಲಭ್ಯ ನೀಡಬೇಕು.

* ಎಲ್ಲಾ ಕಾರ್ಮಿಕರಿಗೆ 18,000 ರು. ಕನಿಷ್ಠ ವೇತನ ನಿಗದಿ ಮಾಡಿ, ಇದನ್ನು ಆಶಾ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವವರಿಗೂ ಜಾರಿಗೊಳಿಸಬೇಕು.

* ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ- ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗೆ, ಮರಣ ಹೊಂದಿದ ಆಶಾ ಕುಟುಂಬಕ್ಕೆ ಪರಿಹಾರ ನೀಡಬೇಕು.

* ಆಶಾಗಳಿಗೆ ಉಚಿತ ವಸತಿ ಸೌಲಭ್ಯ ಒದಗಿಸುವ ಹಳೆಯ ಭರವಸೆ ಜಾರಿಗೊಳಿಸಬೇಕು.

* ಆಶಾ ಮತ್ತು ಆಶಾ ಸುಗಮದಾರರಿಗೆ ಸೇವಾ ನಿಯಮಾವಳಿ ರೂಪಿಸಿ ಸೇವಾ ಭದ್ರತೆ ನೀಡಿ, ೨೦ಕ್ಕೂ ಹೆಚ್ಚು ಆಶಾಗಳಿರುವೆಡೆ ಒಬ್ಬ ಸುಗಮಕಾರರನ್ನು ನೇಮಿಸಬೇಕು.

* ನಗರ ಆಶಾಗಳಿಗೂ ಎಲ್ಲ ಸೌಲಭ್ಯಗಳನ್ನು ನೀಡಿ, ನಗರ ಜೀವನಕ್ಕೆ ತಕ್ಕಂತೆ ಹೆಚ್ಚಿನ ಪ್ರೋತ್ಸಾಹಧನ ನಿಗದಿಪಡಿಸಬೇಕು.

ಸರ್ಕಾರದ ಷರತ್ತುಬದ್ಧ ಆದೇಶವೇನು? 

ಆಶಾ ಕಾರ್ಯಕರ್ತೆಯರಿರು ನಿರ್ವಹಿಸುವ ಸೇವೆಗಳನ್ನು ಆಧರಿಸಿ ಪ್ರತಿ ಸೇವೆಗೆ ಇಂತಿಷ್ಟು ಎಂದು ನೀಡುತ್ತಿದ್ದ ಪ್ರೋತ್ಸಾಹಧನದ ಬದಲು ಸೆ.೭ರಿಂದ ಅನ್ವಯವಾಗುವಂತೆ ಇಡುಗಂಟು ರೂಪದಲ್ಲಿ ಮಾಸಿಕ 5,000 ರು. ಪ್ರೋತ್ಸಾಹಧನ ನೀಡಲಾಗುವುದು ಎಂದು ಸರ್ಕಾರ ಕೆಲ ಷರತ್ತುಬದ್ಧ ಆದೇಶ ಮಾಡಿದೆ. ಅಲ್ಲದೆ, ಆಶಾಗಳ ಸೇವೆಗಳನ್ನು ಎಂಸಿಟಿಎಸ್ ಮತ್ತು ಆಶಾ ಸಾಫ್ಟ್ ತಂತ್ರಾಂಶದಲ್ಲಿ ನಮೂದಿಸಲು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಓರ್ವ ಗಣಕಯಂತ್ರ ಸಹಾಯಕರನ್ನು ನಿಯೋಜಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ಕಾರ್ಯದರ್ಶಿ ಜೆ.ಆರ್.ಅನ್ನಪೂರ್ಣ ಗುರುವಾರ ಆದೇಶ ಮಾಡಿದ್ದಾರೆ. ಅಲ್ಲದೆ, ಆದೇಶದಲ್ಲಿ ಐದು ಪ್ರಮುಖ ಷರತ್ತುಗಳನ್ನು ವಿಧಿಸಲಾಗಿದೆ. ಈ ಷರತ್ತುಗಳ ಪಾಲನೆ ಆಗದಿದ್ದರೆ ಪ್ರತಿ ಸೇವೆ ಅಥವಾ ಚಟುವಟಿಕೆಗೆ 20 ರೂ ದಂಡ ವಿಧಿಸಿ ಮುಂದಿನ ತಿಂಗಳ ಪ್ರೋತ್ಸಾಹಧನದಲ್ಲಿ ಕಡಿತಗೊಳಿಸುವುದಾಗಿ ತಿಳಿಸಲಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮ ವಿವಾದ, ತಮ್ಮಣ್ಣ ಶೆಟ್ಟಿ ಎತ್ತಿದ ಹಲವು ಪ್ರಶ್ನೆಗಳಿವು
ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?