
ಬೆಂಗಳೂರು: ವಿಧಾನಸಭಾ ಚುನಾವಣೆ ಸಮರ ತಾರಕ್ಕೇರಿರುವ ಹೊತ್ತಿನಲ್ಲೇ ರಾಜ್ಯ ಸರ್ಕಾರಕ್ಕೆ ಭರ್ಜರಿ ಏಟು ಕೊಟ್ಟಿರುವ ಆದಾಯ ತೆರಿಗೆ ಇಲಾಖೆಯು, ಚುನಾವಣಾ ಘೋಷಣೆ ಮುನ್ನ ಮೂರು ತಿಂಗಳ ಅವಧಿಯಲ್ಲಿ ಪ್ರಮುಖ ಇಲಾಖೆಗಳ ಗುತ್ತಿಗೆದಾರರಿಗೆ ಬಿಡುಗಡೆಯಾದ ಅನುದಾನದ ಕುರಿತು ಮಾಹಿತಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ. ವಿಶೇಷವಾಗಿ ಮಹತ್ವದ ಖಾತೆ ಹೊಂದಿದ್ದ 6 ಮಂತ್ರಿಗಳಿಗೆ ಸಂಬಂಧಿಸಿದ ಅನುದಾನದ ವಿವರ ಬಯಸಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಶುಕ್ರವಾರ ಆದಾಯ ತೆರಿಗೆ (ಐಟಿ) ಇಲಾಖೆಯ ಬೆಂಗಳೂರು ಮತ್ತು ಗೋವಾ ವಲಯ (ತನಿಖಾ)ದ ಪ್ರಧಾನ ನಿರ್ದೇಶ‡ಕ ಬಾಲಕೃಷ್ಣನ್ ಪತ್ರ ಬರೆದಿದ್ದಾರೆ. ಆ ಪತ್ರದ ಬೆನ್ನಲ್ಲೇ ರತ್ನಪ್ರಭಾ ಅವರು ಶನಿವಾರ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಆದಾಯ ತೆರಿಗೆ ಇಲಾಖೆಯ ಪತ್ರ ಉಲ್ಲೇಖಿಸಿ ಕಾಮಗಾರಿ ಮಾಹಿತಿ ಕೇಳಿದ್ದಾರೆ.
‘ಚುನಾವಣೆಗೆ ಬಳಸುವ ಉದ್ದೇಶದಿಂದಲೇ ದೊಡ್ಡ ಪ್ರಮಾಣದಲ್ಲಿ ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂಬ ಮಾಹಿತಿ ಆಧರಿಸಿ ಮುಖ್ಯಮಂತ್ರಿ ಕಾರ್ಯದರ್ಶಿಗಳಿಂದ ಜನವರಿ 1ರಿಂದ ಮಾಚ್ 31ವರೆಗೆ ಗುತ್ತಿಗೆದಾರರ ಮಂಜೂರಾದ ಅನುದಾನದ ವಿವರ ಕೇಳಿದ್ದೇವೆ’ ಎಂದು ಪತ್ರದಲ್ಲಿ ಐಟಿ ಪ್ರಧಾನ ನಿರ್ದೇಶಕರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಹತ್ವದ ಖಾತೆಯ ಸಚಿವರಿಗೆ ಬಿಸಿ:
ವಿಶೇಷವೆಂದರೆ ಈ ಪತ್ರದಲ್ಲಿ ಐಟಿ ಪ್ರಧಾನ ನಿರ್ದೇಶಕರು ರಾಜ್ಯ ಕಾಂಗ್ರೆಸ್ ಪಕ್ಷದ ವಿಧಾನಸಭಾ ಚುನಾವಣೆಯ ಪ್ರಮುಖ ‘ಸೇನಾನಿಗಳು’ ಎಂದೇ ಬಿಂಬಿತವಾಗಿರುವ ಪ್ರಭಾವಿ ಮಂತ್ರಿಗಳಾದ ಎಚ್.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್, ಕಾಗೋಡು ತಿಮ್ಮಪ್ಪ, ಎ.ಮಂಜು, ಪ್ರಮೋದ್ ಮಧ್ವರಾಜ್ ಅವರಿಗೆ ಬಿಸಿ ಮುಟ್ಟಿಸಿದ್ದಾರೆ. ಈ ಆರು ಮಂತ್ರಿಗಳಿಗೆ ಸೇರಿರುವ ಇಲಾಖೆಯ ಗುತ್ತಿಗೆದಾರರ ಕುರಿತೇ ಐಟಿ ವಿವರ ಕೇಳಿದೆ.
ಈ ಪತ್ರವೂ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಚುನಾವಣೆಯ ಘೋಷಣೆ ಭೀತಿಯಲ್ಲಿ ಕೊನೆಗಳಿಗೆಯಲ್ಲಿ ದೊಡ್ಡ ಪ್ರಮಾಣ ಕಾಮಗಾರಿ ಪಡೆದಿರುವ ಗುತ್ತಿಗೆದಾರರ ಎದೆಯಲ್ಲಿ ನಡುಕು ಹುಟ್ಟಿಸಿದೆ. ಇದು ಐಟಿ ಮತ್ತು ಕಾಂಗ್ರೆಸ್ ನಡುವಿನ ಮತ್ತೊಂದು ಹೋರಾಟಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ.
ಪತ್ರದಲ್ಲಿ ಏನಿದೆ?:
‘ವಿಧಾನಸಭಾ ಚುನಾವಣೆಗೆ ಉಪಯೋಗಕ್ಕಾಗಿಯೇ 2017-18ನೇ ಆರ್ಥಿಕ ವರ್ಷದ ಮುಕ್ತಾಯ ದಿನಗಳಲ್ಲಿ ತರಾತುರಿಯಾಗಿ ರಾಜ್ಯ ಸರ್ಕಾರದ ಕೆಲವು ಇಲಾಖೆಗಳು ಗುತ್ತಿಗೆದಾರರಿಗೆ ದೊಡ್ಡ ಮಟ್ಟದ ಹಣ ಬಿಡುಗಡೆಗೊಳಿಸಿರುವ ಕುರಿತು ಗುಪ್ತಚರ ಮಾಹಿತಿ ಸಿಕ್ಕಿದೆ.’
‘ಈ ಹಿನ್ನೆಲೆಯಲ್ಲಿ ಜ.1 ರಿಂದ ಮಾ.31ರವರೆಗೆ ಲೋಕೋಪಯೋಗಿ, ಜಲಸಂಪನ್ಮೂಲ, ಇಂಧನ, ಕಂದಾಯ, ಪಶುಸಂಗೋಪನೆ, ಮೀನುಗಾರಿಕೆ ಗುತ್ತಿಗೆದಾರರಿಗೆ ಬಿಡುಗಡೆಗೊಳಿಸಿರುವ ಅನುದಾನದ ಕುರಿತು ಮಾಹಿತಿ ನೀಡಬೇಕು. ಹಾಗೆಯೇ .25 ಲಕ್ಷಕ್ಕಿಂತ ಅಧಿಕ ಮೊತ್ತದ ಹಣವಾಗಿದ್ದರೆ ಟಿಡಿಎಸ್ ಕಡಿತ ಸೇರಿ ಮಾಹಿತಿ ಕೊಡಬೇಕು’ ಎಂದು ಆದಾಯ ತೆರಿಗೆ ಇಲಾಖೆಯ ಪ್ರಧಾನ ನಿರ್ದೇಶಕ ಬಾಲಕೃಷ್ಣನ್ ಹೇಳಿದ್ದಾರೆ.
ಅಲ್ಲದೆ, 2016-17ನೇ ಸಾಲಿನಲ್ಲಿ ಸದರಿ ಗುತ್ತಿಗೆದಾರರಿಗೆ ಬಿಡುಗಡೆಯಾಗಿರುವ ಹಣದ ಬಗ್ಗೆಯೂ ವಿವರ ನೀಡಬೇಕು ಎಂದಿರುವ ಅವರು, ಈ ಮಾಹಿತಿಯನ್ನು ಆದಷ್ಟುತ್ವರಿತವಾಗಿ ನೀಡುವಂತೆ ಮುಖ್ಯ ಕಾರ್ಯದರ್ಶಿ ರತ್ನಪಭಾ ಅವರಿಗೆ ಮನವಿ ಮಾಡಿದ್ದಾರೆ. ಈ ಪತ್ರ ಬೆನ್ನಲ್ಲೇ ಮುಖ್ಯ ಕಾರ್ಯದರ್ಶಿಗಳು, ಇಲಾಖೆಗಳಿಗೆ ಶನಿವಾರ ಪತ್ರ ಬರೆದು ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಪ್ರತಿಕ್ರಿಯೆ ಕುರಿತು ಮಾಹಿತಿ ಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.