ಬೆಂಗಳೂರಿನ ಅತಿದೊಡ್ಡ ಸ್ಕೈವಾಕ್ ಆರಂಭ

Published : Jan 25, 2017, 07:02 AM ISTUpdated : Apr 11, 2018, 12:55 PM IST
ಬೆಂಗಳೂರಿನ ಅತಿದೊಡ್ಡ ಸ್ಕೈವಾಕ್ ಆರಂಭ

ಸಾರಾಂಶ

ಬೆಂಗಳೂರಿನ ಅತಿದೊಡ್ಡ ಸ್ಕೈವಾಕ್‌ ಹೊರವರ್ತುಲ ರಸ್ತೆಯ ನಾಗವಾರದ ಮಾನ್ಯತಾ ಬಿಸಿನೆಸ್‌ ಪಾರ್ಕ್ ಮುಂಭಾಗ ನಿರ್ಮಾಣವಾಗಿದ್ದು ಮಂಗಳವಾರ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಬೆಂಗಳೂರು: ಬೆಂಗಳೂರಿನ ಅತ್ಯಂತ ವಾಹನ ದಟ್ಟಣೆ ಮಾತ್ರವಲ್ಲ, ಜನದಟ್ಟಣೆಯ ಹೊರವರ್ತುಲ ರಸ್ತೆ (ನಾಗವಾರ ಜಂಕ್ಷನ್‌)ಯಲ್ಲಿ ಬೆಂಗಳೂರು ನಗರದ ಅತಿದೊಡ್ಡ ಪಾದಚಾರಿ ಮೇಲ್ಸೆತುವೆ (ಸ್ಕೈವಾಕ್‌, ಗಾತ್ರ-160 ಮೀ. ಉದ್ದ, 3 ಮೀ.ಅಗಲ ) ಸೋಮವಾರ ಉದ್ಘಾಟನೆಗೊಂಡಿದೆ. ಈ ಮೂಲಕ ಅತ್ಯಂತ ಅಪಾಯಕಾರಿಯೆನಿಸಿದ ಈ ರಸ್ತೆಯನ್ನು ನಿತ್ಯ ದಾಟುತ್ತಿದ್ದ ಸುಮಾರು 20ಸಾವಿರ ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ರೂ.6.8 ಕೋಟಿ(ಪೂರ್ಣ ಮೊತ್ತ ಮಾನ್ಯತಾ ಟೆಕ್‌ಪಾರ್ಕ್ ಭರಿಸಿದೆ) ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಕೈವಾಕ್‌ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೃಷಿ ಸಚಿವರೂ ಆಗಿರುವ ಸ್ಥಳೀಯ ಶಾಸಕ ಕೃಷ್ಣಬೈರೇಗೌಡ ಬೆಂಗಳೂರಿಗರು ಮೂಲಸೌಕರ್ಯ ಕಲ್ಪಿಸುವ ವೇಳೆ ಆಗಬಹುದಾದ ಅನಾನುಕೂಲಗಳನ್ನು ಸಹಿಸಿಕೊಳ್ಳುವ ಜತೆಗೆ ಅಭಿವೃದ್ಧಿಗೆ ಅವಕಾಶ ನೀಡಬೇಕು. ಅತ್ತ ಮೂಲಸೌಕರ್ಯವೂ ಬೇಕು. ಆದರೆ ಸ್ವಲ್ಪವೂ ಅನಾನುಕೂಲವಾಗಬಾರದೆಂಬ ವೈರುದ್ಯ ಮನೋಭಾವ ಬಿಟ್ಟು ಸಹಕರಿಸಬೇಕೆಂದು ಮನವಿ ಮಾಡಿದರು. 

ಬೆಂಗಳೂರಿಗೆ ಬೃಹತ್‌ ಮೂಲ ಸೌಕರ್ಯ ಯೋಜನೆಗಳ ಅಗತ್ಯವಿದೆ. ಸರ್ಕಾರವೂ ಈ ಯೋಜನೆಗಳಿಗೆ ಒತ್ತು ನೀಡಿದೆ. ಬೆಂಗಳೂರು ಅಗಾಧ ಪ್ರಮಾಣದಲ್ಲಿ ಬೆಳವಣಿಗೆ ಆಗುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚಿದೆ. ನಗರದ ಜನರು ಒಂದು ಕಾರಿನಲ್ಲಿ ತಾವು ಒಬ್ಬರೇ ಹೋಗಬೇಕು ಎನ್ನುವ ತಮ್ಮ ಐಷಾರಾಮಿ ಮನೋಭಾವ ಬಿಟ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಿಕೊಳ್ಳಬೇಕು ಮತ್ತು ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಭಾವಿಸದೇ ಯೋಜನೆಗಳ ಅನುಷ್ಟಾನದ ವೇಳೆ ಆಗುವ ಅನಾನುಕೂತೆಗಳನ್ನು ಸಹಿಸಿಕೊಳ್ಳಬೇಕಿದೆ ಎಂದರು. 

ಜನರು ತಮ್ಮ ಧೋರಣೆಗಳನ್ನು ಬದಲಿಸಿಕೊಂಡಲ್ಲಿ ಸಾಮಾಜಿಕ ಜವಾಬ್ಧಾರಿ ಮೆರೆಯುವುದರ ಜತೆಗೆ ಸಕ್ರಿಯವಾಗಿ ನಗರದ ಅಭಿವೃದ್ಧಿಯಲ್ಲಿ ಸಹಭಾಗಿಗಳಾದಲ್ಲಿ ನಗರಕ್ಕೆ ಬೃಹತ್‌ ಮೂಲ ಸೌಕರ್ಯಗಳ ಯೋಜನೆ ಬೇಕಾಗುವುದಿಲ್ಲ. ಇಲ್ಲದೇ ಹೋದಲ್ಲಿ ಜನರು ವಾಹನದಟ್ಟಣೆಯನ್ನು ಸೈರಣೆ ಮಾಡಬೇಕಾದುದು ಅನಿವಾರ್ಯವಾಗುತ್ತದೆ. ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಿದಾಗ ವಿರೋಧವೂ ವ್ಯಕ್ತವಾಗುತ್ತಿದ್ದು ಜನರು ವಿರೋಧಾಭಾಸಗಳನ್ನು ಬಿಟ್ಟು ಮನಸ್ಥಿತಿ ಬದಲಿಸಿದಲ್ಲಿ ಮಾತ್ರ ದೀರ್ಘಕಾಲದವರೆಗೆ ಅನುಕೂಲವಾಗುವ ಬದಲಾವಣೆ ಸಾಧ್ಯವಾಗಲಿದೆ ಎಂದು ಹೇಳಿದರು.

ಉಕ್ಕಿನ ಸೇತುವೆ ನಿರ್ಮಾಣಕ್ಕೆ ಬದ್ಧ: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಮಾತ್ರವಲ್ಲ ಜಗತ್ತಿನ ಕ್ರಿಯಾಶೀಲ ನಗರವೆಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರು ಐಟಿ ಕ್ರಾಂತಿಯ ಕೇಂದ್ರವಾಗಿದೆ. ಕೈಗಾರಿಕಾ ಕ್ರಾಂತಿ ವಂಚಿತ ಭಾರತದ ವೇಗದ ಪ್ರಗತಿಗೆ ತನ್ನದೇ ಆದ ಕಾಣ್ಕೆ ನೀಡಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದ್ದು ರಚನಾತ್ಮಕ ಕೆಲಸ ಮಾಡಲಾಗುವುದು. ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೂ ಉಕ್ಕಿನ ಮೇಲ್ಸೆತುವೆ ನಿರ್ಮಾಣಕ್ಕೆ ಬದ್ಧವಾಗಿದ್ದು ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಸ್ಥಳೀಯರಾರೂ ವಿರೋಧಿಸದ ಈ ಯೋಜನೆ ಕೇವಲ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಮಾತ್ರವಲ್ಲ ಈ ಭಾಗದ ಜನರಿಗೂ ಅನುಕೂಲವಾಗಲಿದೆ ಎಂದರು.

ಬಿಬಿಎಂಪಿ ಮೇಯರ್‌ ಪದ್ಮಾವತಿ, ಆಯುಕ್ತ ಮಂಜುನಾಥಪ್ರಸಾದ್‌, ಎಂಬೆಸ್ಸಿ ಮಾನ್ಯತಾ ಬಿಸಿನೆಸ್‌ ಪಾರ್ಕ್ನ ಅಧ್ಯಕ್ಷ ಜಿತು ವಿರ್ವಾನಿ, ಬಿಬಿಎಂಪಿ ಕಾರ್ಪೋರೇಟರ್‌ಗಳು ಭಾಗವಹಿಸಿದ್ದರು. 

ರಕ್ಷಣಾ ಇಲಾಖೆಯಿಂದ ಎಸ್ಟೀಮ್‌ ಸ್ಕೈವಾಕ್‌ ವಿಳಂಬ 
ಹೆಬ್ಬಾಳ ಕೆಂಪಾಪುರದ ಎಸ್ಟೀಮ್‌ ಮಾಲ್‌'ನ ಮುಂಭಾಗದ ಸ್ಕೈವಾಕ್‌ ವಿಳಂಬಕ್ಕೆ ರಕ್ಷಣಾ ಇಲಾಖೆ ಕಾರಣ. ಸ್ಕೈವಾಕ್‌'ನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡುತ್ತಿದ್ದು ರಕ್ಷಣಾ ಇಲಾಖೆಯ ಭೂಮಿ ಸ್ವಾಧೀನ ಮಾಡಿಕೊಂಡಿರುವುದರಿಂದ ಕಟ್ಟಬೇಕಾಗಿದ್ದ ಹಣವನ್ನು ಕಟ್ಟಿದ್ದರೂ ಅದು ರಕ್ಷಣಾ ಇಲಾಖೆಯ ಸೂಕ್ತ ವಿಭಾಗಕ್ಕೆ ತಲುಪದೇ ಬೇರಾವುದೋ ವಿಭಾಗಕ್ಕೆ ಸಂದಾಯವಾಗಿದ್ದರಿಂದ ವಿಳಂಬವಾಗಿದೆ. ಈ ಕುರಿತು ಹೆದ್ದಾರಿ ಪ್ರಾಧಿಕಾರದೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದು ಕಾಮಗಾರಿ ಆದಷ್ಟುಶೀಘ್ರದಲ್ಲೇ ಮುಗಿಯುವ ವಿಶ್ವಾಸವಿದೆ ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು. 

ಸ್ವಲ್ಪ ಅಡ್ಜಸ್ಟ್‌ ಮಾಡ್ಕೊಳ್ಳಿ!
ಬೆಂಗಳೂರಿನ ಜನರು ಸ್ವಲ್ಪ ಅಡ್ಜಸ್ಟ್‌ ಮಾಡ್ಕೋಬೇಕು ಎಂದು ಕೃಷಿ ಸಚಿವ ಸ್ಥಳೀಯ ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆಗಿರುವ ಕೃಷ್ಣಬೈರೇಗೌಡ ಹೇಳಿದರು. ಬೆಂಗಳೂರು ಉತ್ತಮ ನಗರಿ ಅನ್ನಿಸಿಕೊಳ್ಳಬೇಕಾದರೆ ಈ ಅಡ್ಜಸ್ಟ್‌'ಮೆಂಟ್‌ ಅಗತ್ಯ ಎಂದ ಅವರು, ಜನರ ಚಿಂತನೆಗಳು ಧೋರಣೆಗಳು ಬದಲಾಗದೇ ಹೋದಲ್ಲಿ ಎಷ್ಟೇ ಮೂಲಸೌಕರ್ಯ ಕಲ್ಪಿಸಿದರೂ ನಗರದ ಸುಧಾರಣೆ ಮಾಡಲು ಸಾಧ್ಯ ಆಗದು ಎಂದು ಅಭಿಪ್ರಾಯಪಟ್ಟರು. 

ಫ್ಲೈಓವರ್‌ ಕೊಡುಗೆ:
ನಾಗವಾರದ ಸ್ಕೈವಾಕ್‌ನ ವೆಚ್ಛವನ್ನು(ರೂ.6.8ಕೋಟಿ) ಪೂರ್ಣ ಭರಿಸಿರುವ ಎಂಬೆಸಿ ಮಾನ್ಯತಾ ಬಿಸಿನೆಸ್‌ ಪಾರ್ಕ್ ಇದೀಗ ಹೊರವರ್ತುಲ ರಸ್ತೆಯ ನಾಗವಾರ ಜಂಕ್ಷನ್‌ನಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸುಮಾರು ರೂ.70ಕೋಟಿ ವೆಚ್ಚ ತಗುಲಲಿರುವ ಈ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ಮಾನ್ಯತಾ ಬಿಸಿನೆಸ್‌ ಪಾರ್ಕ್ ಮುಂದಾಗಿದ್ದು ಬಿಬಿಎಂಪಿಯಿಂದ ಅನುಮತಿಗಾಗಿ ಕಾಯುತ್ತಿದೆ. 

ಮಾನ್ಯತಾ ಜಂಕ್ಷನ್'ನಲ್ಲಿ ಜನ, ವಾಹನ ದಟ್ಟನೆ:
* ನಿತ್ಯ ಮಾನ್ಯತಾ ಬಳಿ 15 ರಿಂದ 20 ಸಾವಿರ ಕಾರುಗಳ ಸಂಚಾರ
* ಇದರಲ್ಲಿ ಏಕ ವ್ಯಕ್ತಿ ಪ್ರಯಾಣದ ಕಾರುಗಳ ಪ್ರಮಾಣ ಶೇ. 76
* ಮಾನ್ಯತಾದ ನೌಕರರ ಸಂಖ್ಯೆ 95 ಸಾವಿರ
* ಪ್ರತಿದಿನ ರಸ್ತೆ ದಾಟುವವರು ಸಂಖ್ಯೆ15ಸಾವಿರ ಮಂದಿ. 

ನಗರದ ಎಲ್ಲೆಲ್ಲಿ ಸ್ಕೈವಾಕ್‌?
* ಒಟ್ಟು-ಮೊದಲ ಹಂತದಲ್ಲಿ 12 ಸ್ಕೈವಾಕ್‌
* ಕಾಮಗಾರಿ ಪೂರ್ಣ-7 ಸ್ಕೈವಾಕ್‌
* ಉದ್ದೇಶಿತ-85ಕ್ಕೂ ಹೆಚ್ಚು ಸ್ಕೈವಾಕ್‌'ಗಳು 
* ಖಾಸಗಿ ಸಹಭಾಗಿತ್ವ-30ವರ್ಷ ಜಾಹೀರಾತು ಹಕ್ಕು

(ಕನ್ನಡಪ್ರಭ ವಾರ್ತೆ)
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬ್ಯಾಂಕ್‌ನಿಂದ ರೈತರವರೆಗೆ: ಜನವರಿ 2026ರಿಂದ ಬದಲಾಗುತ್ತಿರುವ ಪ್ರಮುಖ ನಿಯಮಗಳು
ರಾಜ್ಯದಾದ್ಯಂತ ಲೋಕಾಯುಕ್ತ ದಾಳಿ ಸರಣಿ: ವಿಜಯಪುರ, ರಾಯಚೂರು ಸೇರಿ ನಾಲ್ಕು ಜಿಲ್ಲೆಗಳಲ್ಲಿ ಭ್ರಷ್ಟರ ಭೇಟೆ!