ಧಾರವಾಡ ಐಐಟಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ಇಲ್ಲ: ಜಾವಡೇಕರ್

By Suvarna Web DeskFirst Published Aug 18, 2017, 10:20 PM IST
Highlights

ಕೇಂದ್ರ ಸರ್ಕಾರ ಮತ್ತು ಮಾನವ ಸಂಪನ್ಮೂಲ ಸಚಿವಾಲಯವು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಮೇಲೆ ಯಾವುದೇ ಭಾಷೆಯನ್ನು ಹೇರುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ನವದೆಹಲಿ(ಆ.18): ಕೇಂದ್ರ ಸರ್ಕಾರ ಮತ್ತು ಮಾನವ ಸಂಪನ್ಮೂಲ ಸಚಿವಾಲಯವು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಮೇಲೆ ಯಾವುದೇ ಭಾಷೆಯನ್ನು ಹೇರುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ದೆಹಲಿಯಲ್ಲಿ ಆಯ್ದ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಜಾವಡೇಕರ್, ಭಾಷಾ ಹೇರಿಕೆ ಮಾಡಲಾಗುತ್ತಿದೆ ಎಂಬುದು ಆಧಾರ ರಹಿತ ಆರೋಪ. ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ದೇಶದ ೨೨ ಅಧಿಕೃತ ಭಾಷೆ ಮತ್ತು ಆಂಗ್ಲ ಭಾಷೆಯಲ್ಲಿ ಯಾವುದಾದರೂ ಮೂರು ಭಾಷೆಗಳನ್ನು ಅಧ್ಯಯನ ನಡೆಸುವ ಸಂಪೂರ್ಣ ಸ್ವಾತಂತ್ರ್ಯ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ತ್ರಿಭಾಷಾ ಸೂತ್ರವನ್ನು ಪಾಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಐಐಟಿಯಲ್ಲಿ ಮೀಸಲು ಇಲ್ಲ: 

ಧಾರವಾಡ ಐಐಟಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕು ಎಂಬ ಕರ್ನಾಟಕ ಸರ್ಕಾರದ ಬೇಡಿಕೆಯನ್ನು ಜಾವಡೇಕರ್ ತಳ್ಳಿ ಹಾಕಿದ್ದಾರೆ. ಐಐಟಿಗೆ ವಿದ್ಯಾರ್ಥಿಗಳ ಆಯ್ಕೆ ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತದೆ. ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್‌ಐಟಿ) ಯಲ್ಲಿ ಈಗಾಗಲೇ ಪ್ರಾದೇಶಿಕ ಮೀಸಲಾತಿ ಜಾರಿಯಲ್ಲಿದ್ದು, ಅದನ್ನು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇಂಜಿಯರಿಂಗ್‌ಗೆ ನೀಟ್ ಮಾದರಿ ಸದ್ಯಕ್ಕಿಲ್ಲ: ವೈದ್ಯಕೀಯ ಶಿಕ್ಷಣ ಪಡೆಯಲು ರಾಷ್ಟ್ರೀಯ ಆರ್ಹತಾ ಪ್ರವೇಶ ಪರೀಕ್ಷೆ (ನೀಟ್) ಜಾರಿಗೆ ಬಂದಿದೆ. ಈ ಪ್ರವೇಶ ಪರೀಕ್ಷೆಯ ಯಶಸ್ಸನ್ನು ಸೂಕ್ಷ್ಮವಾಗಿ ಗಮನಿಸಿ ಇಂಜಿನಿಯರಿಂಗ್‌ಗೆ ನೀಟ್ ಜಾರಿಗೆ ತರುವ ಬಗ್ಗೆ ತೀರ್ಮಾನ ಮಾಡಲಾಗುವುದು. ಸದ್ಯಕ್ಕೆ ಇಂಜಿನಿಯರಿಂಗ್ ಪ್ರವೇಶಕ್ಕೆ ನೀಟ್ ಮಾದರಿಯಲ್ಲಿ ರಾಷ್ಟ್ರಾದ್ಯಂತ ಏಕ ಪರೀಕ್ಷೆ ನಡೆಸುವ ಪ್ರಸ್ತಾವನೆ ಕೇಂದ್ರದ ಮುಂದೆ ಇಲ್ಲ ಎಂದು ಜಾವಡೇಕರ್ ತಿಳಿಸಿದ್ದಾರೆ.

ಅನರ್ಹ ಶಿಕ್ಷಕರಿಗೆ ಗೇಟ್‌ಪಾಸ್

ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರು ಶೇ.50  ಮೀಸಲು ವರ್ಗಗಳ ಶಿಕ್ಷಕರಾಗಿದ್ದರೆ ಶೇ.೪೫ರಷ್ಟು ಅಂಕ ಪಡೆದು ಪಿಯುಸಿ ಪಾಸ್ ಆಗಿರಬೇಕು. ಇಲ್ಲದೇ ಹೋದಲ್ಲಿ 2019 ರ ಮಾ.31 ರೊಳಗೆ ಡಿ.ಇ.ಎಲ್.ಇಡಿ (ಡಿಪ್ಲೊಮಾ ಇನ್ ಎಲಿಮೆಂಟರಿ ಎಜುಕೇಷನ್) ಪರೀಕ್ಷೆ ಬರೆದು ಉತ್ತೀರ್ಣವಾಗಬೇಕು. ಸರ್ಕಾರದ ಸ್ವಯಂ ಯೋಜನೆಯ ಮೂಲಕ ಆನ್‌ಲೈನ್‌ನಲ್ಲೇ ಈ ಕೋರ್ಸ್ ಮಾಡಬಹುದು. ಪ್ರಸಕ್ತ ಶಿಕ್ಷಕರಾಗಿರುವವರು, ಸರ್ಕಾರ ನಿಗದಿ ಪಡಿಸಿರುವ ಆರ್ಹತೆಯನ್ನು ಹೊಂದಿಲ್ಲದಿದ್ದರೆ ಸೆ.೧೫ರೊಳಗೆ ಕಡ್ಡಾಯವಾಗಿ ಸ್ವಯಂ ಯೋಜನೆಯಲ್ಲಿ ನೋದಾಯಿಸಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಅವರು ಶಿಕ್ಷಕರಾಗಿ ಮುಂದುವರಿಯಲು ಅನರ್ಹರಾಗುತ್ತಾರೆ. 2019 ರ ಮಾರ್ಚ್ ಅಂತ್ಯದೊಳಗೆ ಡಿ.ಇ.ಎಲ್.ಇಡಿ ಪೂರ್ಣಗೊಳಿಸದಿದ್ದರೆ ಅವರು ಆ ಬಳಿಕ ಶಿಕ್ಷಕರಾಗಿ ಮುಂದುವರಿಯುವಂತಿಲ್ಲ ಎಂದು ಜಾವಡೇಕರ್ ಹೇಳಿದ್ದಾರೆ.

ದೇಶದಲ್ಲಿ ಸುಮಾರು 11 ಲಕ್ಷ ಅರ್ಹತೆ ಇಲ್ಲದ ಶಿಕ್ಷಕರಿದ್ದಾರೆ. ಶಿಕ್ಷಕರಲ್ಲಿ ಗುಣಮಟ್ಟ ಇರುವುದು ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಅಂತಿಮ ಸುವರ್ಣ ಅವಕಾಶವನ್ನು ಶಿಕ್ಷಕರಿಗೆ ನೀಡಲಾಗಿದೆ ಎಂದು ಜಾವಡೇಕರ್ ಇದೇ ವೇಳೆ ತಿಳಿಸಿದ್ದಾರೆ.

click me!