ಪಂಜಾಬ್ ಮುಖ್ಯಮಂತ್ರಿ ಅಳಿಯನಿಂದ ಬ್ಯಾಂಕ್’ಗೆ ಭಾರಿ ಧೋಖಾ

By Suvarna Web DeskFirst Published Feb 27, 2018, 8:14 AM IST
Highlights

ಬಿಜೆಪಿ ಆಳ್ವಿಕೆಯಲ್ಲಿ ಶ್ರೀಮಂತರು ಬ್ಯಾಂಕುಗಳಿಗೆ ಟೋಪಿ ಹಾಕಿ ಓಡಿಹೋಗುತ್ತಿದ್ದಾರೆಂದು ಆರೋಪಿಸುತ್ತಿರುವ ಕಾಂಗ್ರೆಸ್‌ಗೆ ಮುಜುಗರ ತರುವಂತಹ ಬೆಳವಣಿಗೆಯೊಂದರಲ್ಲಿ ಪಂಜಾಬ್‌ನ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್‌ ಮುಖಂಡ ಅಮರೀಂದರ್‌ ಸಿಂಗ್‌ ಅವರ ಅಳಿಯನೇ ಇಂತಹ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.

ಹಾಪುರ (ಉತ್ತರ ಪ್ರದೇಶ) : ಬಿಜೆಪಿ ಆಳ್ವಿಕೆಯಲ್ಲಿ ಶ್ರೀಮಂತರು ಬ್ಯಾಂಕುಗಳಿಗೆ ಟೋಪಿ ಹಾಕಿ ಓಡಿಹೋಗುತ್ತಿದ್ದಾರೆಂದು ಆರೋಪಿಸುತ್ತಿರುವ ಕಾಂಗ್ರೆಸ್‌ಗೆ ಮುಜುಗರ ತರುವಂತಹ ಬೆಳವಣಿಗೆಯೊಂದರಲ್ಲಿ ಪಂಜಾಬ್‌ನ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್‌ ಮುಖಂಡ ಅಮರೀಂದರ್‌ ಸಿಂಗ್‌ ಅವರ ಅಳಿಯನೇ ಇಂತಹ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.

ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ಗೆ 260 ಕೋಟಿ ರು. ವಂಚನೆ ಮಾಡಿದ ಪ್ರಕರಣದ ಸಂಬಂಧ ಸಿಬಿಐ ದಾಖಲಿಸಿದ ಎಫ್‌ಐಆರ್‌ನಲ್ಲಿ ಅಮರೀಂದರ್‌ ಸಿಂಗ್‌ ಅವರ ಪುತ್ರಿ ಜೈ ಇಂದರ್‌ ಕೌರ್‌ಳ ಪತಿ ಗುರ್‌ಪಾಲ್‌ ಸಿಂಗ್‌ ಸೇರಿದಂತೆ 11 ಮಂದಿಯ ಹೆಸರಿದೆ. ಗುರ್‌ಪಾಲ್‌ ಸಿಂಗ್‌ ಉಪ ನಿರ್ದೇಶಕರಾಗಿರುವ ಉತ್ತರ ಪ್ರದೇಶದ ಪ್ರಸಿದ್ಧ ಸಿಂಭಾವಲಿ ಸಕ್ಕರೆ ಕಾರ್ಖಾನೆಯ ಹೆಸರಿನಲ್ಲಿ ಬ್ಯಾಂಕಿಗೆ ಈ ವಂಚನೆ ಮಾಡಲಾಗಿದೆ. ಗುರ್‌ಪಾಲ್‌ ಜೊತೆಗೆ ಸಿಂಭಾವಲಿ ಕಾರ್ಖಾನೆಯ ಸಿಎಂಡಿ, ಸಿಎಫ್‌ಒ, ಸಿಇಒ, ನಿರ್ದೇಶಕರು ಹಾಗೂ ಅನಾಮಧೇಯ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇವರೆಲ್ಲರ ವಿರುದ್ಧ ಕ್ರಿಮಿನಲ್‌ ಒಳಸಂಚು ಹಾಗೂ ವಂಚನೆಯ ಪ್ರಕರಣ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ, ಬ್ಯಾಂಕ್‌ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿಯನ್ನು ಟೀಕಿಸುತ್ತಿದ್ದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ತಿರುಗಿಬಿದ್ದಿದ್ದಾರೆ. 

ಬ್ಯಾಂಕಿಗೆ ವಂಚಿಸಿದ್ದು ಹೇಗೆ?:

2011ರಲ್ಲಿ ಸಿಂಭಾವಲಿ ಸಕ್ಕರೆ ಕಾರ್ಖಾನೆಯು ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ನಿಂದ 150 ಕೋಟಿ ರು. ಸಾಲ ಪಡೆದಿತ್ತು. 5700 ಕಬ್ಬು ಬೆಳೆಗಾರರಿಗೆ ಹಣ ಪಾವತಿಸುವುದಕ್ಕಾಗಿ ಈ ಸಾಲ ಪಡೆಯಲಾಗಿತ್ತು. ಆದರೆ, ಆರೋಪಿಗಳು ಈ ಹಣವನ್ನು ರೈತರಿಗೆ ವಿತರಿಸದೆ ಕಂಪನಿಯ ಖಾತೆಗೆ ಜಮೆ ಮಾಡಿಕೊಂಡರು. ನಂತರ 2015ರ ಮಾಚ್‌ರ್‍ನಲ್ಲಿ ಆ ಖಾತೆಯನ್ನು ಸುಸ್ತಿಖಾತೆ ಎಂದು ಬ್ಯಾಂಕ್‌ ಘೋಷಿಸಿತು.

ಈ ಖಾತೆಯು ಸುಸ್ತಿಯಾಗುವ ಮುನ್ನ ಅದೇ ಬ್ಯಾಂಕ್‌ನಿಂದ ಸಿಂಭಾವಲಿ ಸಕ್ಕರೆ ಕಾರ್ಖಾನೆಯು ಮತ್ತೊಮ್ಮೆ 110 ಕೋಟಿ ರು. ಸಾಲ ಪಡೆದಿತ್ತು. ಆ ಸಾಲ ಪಡೆಯುವಾಗ ಹಳೆ ಸಾಲ ತೀರಿಸುವುದಾಗಿ ಹೇಳಿತ್ತು. ಆದರೆ, ಆ ಸಾಲವನ್ನೂ ಸುಸ್ತಿಸಾಲ ಎಂದು 2016ರಲ್ಲಿ ಘೋಷಿಸಲಾಯಿತು. ಈ ಎರಡೂ ಹಗರಣಗಳ ಬಗ್ಗೆ ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಸಿಬಿಐಗೆ ಕಳೆದ ವರ್ಷ ನವೆಂಬರ್‌ನಲ್ಲಿ ದೂರು ನೀಡಿತ್ತು. ಆದರೆ, ಕಳೆದ ಗುರುವಾರವಷ್ಟೇ ಸಿಂಭಾವಲಿ ಶುಗರ್ಸ್‌ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ನಂತರ ಆರೋಪಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

ಟ್ವೀಟ್‌ ಡಿಲೀಟ್‌ ಮಾಡಿ ಕಾಂಗ್ರೆಸ್‌ ಪೇಚು

ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ಗೆ ಸಿಂಭಾವಲಿ ಶುಗರ್ಸ್‌ ಕಂಪನಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಾಗ ಅದರ ಕುರಿತ ದಿನಪತ್ರಿಕೆಯ ವರದಿಯನ್ನು ಕಾಂಗ್ರೆಸ್‌ ಪಕ್ಷ ಟ್ವೀಟ್‌ ಮಾಡಿತ್ತು. ಆದರೆ, ಈ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ, ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಅಳಿಯ ಭಾಗಿಯಾಗಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆಯೇ ಅದನ್ನು ಡಿಲೀಟ್‌ ಮಾಡಿದೆ ಎಂದು ಹೇಳಲಾಗಿದೆ.

ಈ ಡಿಲೀಟ್‌ ಮಾಡಿದ ಟ್ವೀಟಿನ ಸ್ಕ್ರೀನ್‌ಶಾಟ್‌ ಇಟ್ಟುಕೊಂಡು ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ‘ಕಷ್ಟಪಟ್ಟು ದುಡಿಯುವ ರೈತರಿಗೆ ನೀಡಬೇಕಿದ್ದ ಹಣವನ್ನು ಪಂಜಾಬ್‌ ಮುಖ್ಯಮಂತ್ರಿಯ ಅಳಿಯ ತನ್ನ ಜೇಬಿಗಿಳಿಸಿದ್ದಾನೆ ಎಂಬುದು ನಾಚಿಕೆಗೇಡು. ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರ ಅಳಿಯನ ಈ ಲೂಟಿಯ ವರದಿಯನ್ನು ಟ್ವೀಟ್‌ ಮಾಡಿ ಆಮೇಲೆ ಡಿಲೀಟ್‌ ಮಾಡಿದ್ದೇಕೆ? ಎನ್‌ಪಿಎ ಹಗರಣ, ಕೆಟ್ಟಸಾಲ ಮತ್ತು ವಿಜಯ್‌ ಮಲ್ಯ ಹಾಗೂ ನೀರವ್‌ ಮೋದಿಯಂಥವರಿಗೆ ಕೈಎತ್ತಿ ಸಾಲ ಕೊಡುವ ಮೂಲಕ ತಾನು ಮಾಡಿದ ದರೋಡೆಯನ್ನು ತಾನೇ ಬೆಳಕಿಗೆ ತರುವುದರಲ್ಲಿ ಕಾಂಗ್ರೆಸ್‌ ಯಾವತ್ತೂ ಮುಂದಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

click me!