
ಬೆಂಗಳೂರು : ಸೌದಿ ಅರೇಬಿಯಾ ಹಾಗೂ ವಿವಿಧ ಕೊಲ್ಲಿ ರಾಷ್ಟ್ರಗಳ ನೂತನ ಕಾನೂನುಗಳಿಂದಾಗಿ ಕರ್ನಾಟಕ ಮೂಲದ ಎಂಟು ಸಾವಿರಕ್ಕೂ ಹೆಚ್ಚು ಕನ್ನಡಿಗ ಕಾರ್ಮಿಕರು ಕೆಲಸ ಕಳೆದುಕೊಂಡು ನಾಡಿಗೆ ವಾಪಸಾಗುತ್ತಿದ್ದಾರೆ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಹೇಳಿದ್ದಾರೆ.
ಸೌದಿ ಅರೇಬಿಯಾ ಹಾಗೂ ಇತರೆ ಕೊಲ್ಲಿ ರಾಷ್ಟ್ರಗಳಿಂದ ಕರ್ನಾಟಕ ಮೂಲದವರು ವಾಪಸಾಗುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಅವರು ವಿಕಾಸಸೌಧದಲ್ಲಿ ಸೋಮವಾರ ಸಭೆ ನಡೆಸಿದರು.
ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಆರತಿ ಕೃಷ್ಣ, ಅರಬ್ ರಾಷ್ಟ್ರಗಳಲ್ಲಿ ಅದರಲ್ಲೂ ಮುಖ್ಯವಾಗಿ ಸೌದಿ ಅರೇಬಿಯಾದಲ್ಲಿ ಉಂಟಾಗುತ್ತಿರುವ ‘ಸೌದೀಕರಣ’ದಿಂದಾಗಿ ಅನಿವಾಸಿ ಭಾರತೀಯರಿಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಭದ್ರತೆ ಉಂಟಾಗಿದೆ. ಉದ್ಯಮಿಗಳೂ ಸಹ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಎರಡು ದಿನ ಸೌದಿ ಸೇರಿದಂತೆ ಅರಬ್ ದೇಶಗಳಲ್ಲಿ ಪ್ರವಾಸ ಮಾಡಿ ಅವರ ಸಮಸ್ಯೆಗಳನ್ನು ಕೇಳಿಕೊಂಡು ಬಂದಿದ್ದೇನೆ. ಕಳೆದ ಎರಡು ದಿನಗಳಿಂದ ಸುಮಾರು 120ಕ್ಕೂ ಹೆಚ್ಚು ಅನಿವಾಸಿ ಭಾರತೀಯ ಉದ್ಯಮಿಗಳೊಂದಿಗೆ ಸಭೆ ಮಾಡಿದ್ದೇನೆ ಎಂದು ಹೇಳಿದರು.
ಭಾರತಕ್ಕೆ ವಾಪಸ್ ಆಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಯಭಾರ ಕಚೇರಿ ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ ವಾಪಸ್ ಆಗಿರುವ ಒಟ್ಟು 93 ಸಾವಿರ ಜನರಲ್ಲಿ 20 ಸಾವಿರ ಕರ್ನಾಟಕದವರಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಮಾರ್ಚ್’ಗೆ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಸ್ ಬರುವುದಕ್ಕೆ ಎಂಟು ಸಾವಿರಕ್ಕೂ ಅಧಿಕ ಮಂದಿ ಅನುಮತಿ ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ ವೇಳೆಗೆ ಮತ್ತಷ್ಟುಮಂದಿ ವಾಪಸಾಗುವ ಸಾಧ್ಯತೆ ಇದೆ. ಅಲ್ಪಸಂಖ್ಯಾತ ಇಲಾಖೆಯಲ್ಲಿ ಅನಿವಾಸಿ ಭಾರತೀಯರಿಗೆ ಕ್ಷೇಮಾಭಿವೃದ್ಧಿ ಅನುದಾನ ನೀಡಲಾಗಿದೆ. ಅದನ್ನು ಬಳಕೆ ಮಾಡಿಕೊಂಡು ತಕ್ಷಣ ಆಗಮಿಸುವ ಅನಿವಾಸಿ ಭಾರತೀಯರಿಗೆ ನೆರವು ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಪ್ರಮುಖವಾಗಿ ಭಾರತಕ್ಕೆ ವಾಪಸ್ ಆಗುವ ಕರ್ನಾಟಕ ಮೂಲದ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು ಹಾಗೂ ಪುನರ್‌ವಸತಿ ಕಲ್ಪಿಸುವ ಬಗ್ಗೆ ಚರ್ಚಿಸಲಾಗಿದೆ. ಎನ್‌ಆರ್‌ಐ ಉದ್ಯಮಿಗಳು ಸರ್ಕಾರದಿಂದ ಬಡ್ಡಿ ರಹಿತ ಸಾಲ, ಕೈಗಾರಿಕೆ ಸ್ಥಾಪನೆಗೆ ಭೂಮಿ, ಕಾರ್ಮಿಕರಿಗೆ ವಸತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸೌದಿಯ ಹೊಸ ಕಾನೂನಿನಿಂದ ಬಟ್ಟೆ, ಮಹಿಳೆಯರ ಅಲಂಕಾರಿಕ ಉತ್ಪನ್ನದ ಉದ್ಯಮ, ಚಾಲಕರು, ಭದ್ರತಾ ಸಿಬ್ಬಂದಿ, ಸ್ವಾಗತಕಾರರು ಸೇರಿದಂತೆ ಒಟ್ಟು 12 ಉದ್ಯಮ ಹಾಗೂ ಇದನ್ನು ನೆಚ್ಚಿಕೊಂಡವರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.