
ನವದೆಹಲಿ(ಸೆ. 04): ಭಯೋತ್ಪಾದನೆ ವಿಚಾರದಲ್ಲಿ ಚೀನಾ ದೇಶದ ಭಾರತದ ದಾರಿಗೆ ಬಂದಿದೆ. ಚೀನಾ ಆತಿಥ್ಯದಲ್ಲಿ ಇಂದು ಮುಕ್ತಾಯಗೊಂಡ ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ. ಪಾಕ್ ಮೂಲದ ಲಷ್ಕರೆ ತೊಯ್ಬಾ ಮತ್ತು ಜೇಷೇ ಮೊಹಮ್ಮದ್ ಸೇರಿದಂತೆ ವಿವಿಧ ಭಯೋತ್ಪಾದಕ ಸಂಘಟನೆಗಳ ಕೃತ್ಯವನ್ನು ಖಂಡಿಸಿ ನಿರ್ಣಯ ಹೊರಡಿಸಲಾಗಿದೆ. ಅಷ್ಟೇ ಅಲ್ಲ, ಉಗ್ರ ಸಂಘಟನೆಗಳನ್ನು ಪೋಷಿಸಿ ಸಲಹುತ್ತಿರುವವರನ್ನೂ ಉಗ್ರ ಕೃತ್ಯಗಳಿಗೆ ಹೊಣೆಗಾರಿಕೆಯನ್ನಾಗಿ ಮಾಡಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಲಾಗಿದೆ. ಪಾಕಿಸ್ತಾನದ ಉಗ್ರ ಸಂಘಟನೆಗಳತ್ತ ದೃತರಾಷ್ಟ್ರ ಪ್ರೇಮ ತೋರುತ್ತಾ ಬಂದಿದ್ದ ಚೀನಾ ದೇಶ ಇದೀಗ ಆ ಸಂಘಟನೆಗಳ ಕೃತ್ಯವನ್ನು ಖಂಡಿಸುವ ಮಟ್ಟಕ್ಕೆ ಬಂದಿರುವುದು ಭಾರತಕ್ಕೆ ಗೆಲುವಿನ ಸೂಚನೆಯಾಗಿದೆ.
ಭಾರತ, ಚೀನಾ, ರಷ್ಯಾ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಗುಂಪಾಗಿರುವ ಈ ಬ್ರಿಕ್ಸ್'ನ ಶೃಂಗ ಸಭೆಯಲ್ಲಿ 43 ಪುಟಗಳ "ಕ್ಸಿಯಾಮೆನ್ ಡಿಕ್ಲೆರೇಶನ್" ಹೊರಡಿಸಲಾಗಿದೆ. ಈ ನಿರ್ಣಯದಲ್ಲಿ ಉಗ್ರ ಸಂಘಟನೆಗಳನ್ನ ಖಂಡಿಸುವುದಲ್ಲದೇ, ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತತ್'ಕ್ಷಣವೇ ಕೊನೆಗಾಣಿಸಬೇಕೆಂದು ಕಳಕಳಿ ತೋರಿಸಲಾಗಿದೆ. ತಾಲಿಬಾನ್, ಐಸಿಸ್, ಅಲ್-ಖೈದಾ, ಈಸ್ಟರ್ನ್ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್ಮೆಂಟ್, ಉಜ್ಬೆಕಿಸ್ತಾನ್ ಇಸ್ಲಾಮಿಕ್ ಮೂವ್ಮೆಂಟ್, ಹಖ್ಖಾನಿ ನೆಟ್ವರ್ಕ್, ಲಷ್ಕರೆ ತೈಬಾ, ಜೈಷೆ ಮೊಹಮ್ಮದ್, ತೆಹ್ರೀಕ್ ಇ ತಾಲಿಬಾನ್, ಹಿಜಬ್ ಉತ್ ತಹ್ರೀರ್ ಸಂಘಟನೆಗಳಿಂದ ಪ್ರದೇಶದಲ್ಲಿ ಶಾಂತಿಗೆ ಭಂಗವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಲಾಗಿದೆ. ಈ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಕಠೋರ ಶಬ್ದಗಳಲ್ಲಿ ಭಯೋತ್ಪಾದನೆಯನ್ನು ಖಂಡಿಸಿದರು. ಇತರ ದೇಶಗಳ ಮುಖಂಡರು ಮೋದಿ ಮಾತಿಗೆ ಬೆಂಬಲ ನೀಡಿದರು.
ಬ್ರಿಕ್ಸ್ ಸಭೆಯ ಇತಿಹಾಸದಲ್ಲಿ ಯಾವತ್ತೂ ಉಗ್ರ ಸಂಘಟನೆಗಳನ್ನು ಪಟ್ಟಿ ಮಾಡಿರಲಿಲ್ಲ. ಚೀನಾದ ಕ್ಸಿಯಾಮೆನ್'ನಲ್ಲಿ ನಡೆದ ಈ ಬಾರಿಯ ಸಭೆಯಲ್ಲಿ ಮೊದಲ ಬಾರಿಗೆ ಈ ಬೆಳವಣಿಗೆಯಾಗಿದೆ. ಪಾಕಿಸ್ತಾನೀ ಉಗ್ರ ಸಂಘಟನೆಗಳ ವಿಚಾರದಲ್ಲಿ ಕುರುಡಾಗಿದ್ದ ಚೀನಾ ಇದೀಗ ಕಣ್ತೆರೆದಂತೆ ತೋರುತ್ತಿದೆ. ಈ ಶೃಂಗ ಸಭೆಯ ನಿರ್ಣಯವನ್ನು ಮುಂದಿಟ್ಟುಕೊಂಡು ಭಾರತಕ್ಕೆ ಇನ್ಮುಂದೆ ಬೇರೆ ಪ್ರಮುಖ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನೀ ಉಗ್ರ ಸಂಘಟನೆಗಳನ್ನು ಹಣಿಯಲು ಸಾಧ್ಯವಾಗಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.