
[ವೈರಲ್ ಚೆಕ್]
ನವದೆಹಲಿ : ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯವರೆಂದು ಹೇಳಲಾದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಹೀಗೆ ಹರಿದಾಡುತ್ತಿರುವ ಫೋಟೋದೊಂದಿಗೆ ಕಾಂಗ್ರೆಸ್ ಬೆಂಬಲಿಗರೇ ನಿಮ್ಮ ನಾಯಕಿ ಆಂಟಾನಿಯಾ ಸೋನಿಯಾ ಗಾಂಧಿಯವರನ್ನು ಒಮ್ಮೆ ನೋಡಿ. ಈಗೇನು ಹೇಳ್ತಿರಾ? ಈಗಲೂ ಈ ಫೋಟೋ ಸುಳ್ಳು ಎಂದು ಆರೋಪಿಸುತ್ತೀರಾ? ಎಂಬ ಒಕ್ಕಣೆಯನ್ನು ಬರೆಯಲಾಗಿದೆ. ಫೇಸ್‌ಬುಕ್ ಪೇಜ್ ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಈ ಫೋಟೋವನ್ನು ಶೇರ್ ಮಾಡಿದ್ದು, 24 ಗಂಟೆಯೊಳಗಾಗಿ 10 ಸಾವಿರ ಜನರು ಇದನ್ನು ಶೇರ್ ಮಾಡಿದ್ದಾರೆ.
ಆದರೆ ನಿಜಕ್ಕೂ ಫೋಟೋದಲ್ಲಿರುವುದು ಸೋನಿಯಾ ಗಾಂಧಿಯೇ, ಹಾಗಾದರೆ ಜೊತೆಯಲ್ಲಿರುವವರು ಯಾರು? ಎಂದು ಆಲ್ಟ್ ನ್ಯೂಸ್ ತನಿಖೆಗೆ ಮುಂದಾದಾಗ ಈ ಫೋಟೋ ಅಸಲಿ ಕತೆ ಬಯಲಾಗಿದೆ. ಆಲ್ಟ್ ನ್ಯೂಸ್ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪತ್ತೆ ಹಚ್ಚಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸೋನಿಯಾ ಗಾಂಧಿ ಎಂದು ಹರಿದಾಡುತ್ತಿರುವ ಈ ಫೋಟೋಗಳು ಮೊದಲ ಜೇಮ್ಸ್‌ಬಾಂಡ್ ಚಲನಚಿತ್ರ ಡಾ. ನಂ. ನಲ್ಲಿ ನಟಿಸಿದ್ದ ನಟಿ ಉರ್ಸುಲಾ ಆ್ಯಂಡ್ರೆಸ್ ಅವರ ಫೋಟೋಗಳು. ಆ್ಯಂಡ್ರೆಸ್ ಜೊತೆಗಿರುವ ವ್ಯಕ್ತಿ ಸ್ಕಾಟಿಷ್ ಮೂಲದ ನಟ ಶಾನ್ ಕ್ಯಾನೆರಿ.
ಬ್ರಿಟಿಷ್ ಪತ್ತೇದಾರಿ ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಕಾಲ್ಪನಿಕ ಪಾತ್ರದಲ್ಲಿ ನಟಿಸಿದ ಮೊದಲ ನಟ. ಸೋನಿಯಾ ಗಾಂಧಿ ಕುರಿತ ಈ ರೀತಿಯ ಮಾರ್ಪಡಿಸಿದ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿ ಅವರ ಗೌರವಕ್ಕೆ ಕುಂದುಂಟುಮಾಡಲು ಯತ್ನಿ ಸಿರುವುದು ಇದೇ ಮೊದಲಲ್ಲ.
ಈ ಹಿಂದೆ ಸಹ ಮಾಲ್ಡೀವ್ಸ್ ಅಧ್ಯಕ್ಷರ ಕಾಲ ಮೇಲೆ ಸೋನಿಯಾ ಗಾಂಧಿ ಕುಳಿತಿರುವಂತೆ ಫೋಟೋವನ್ನು ಮಾರ್ಪಡಿಸಿ ವದಂತಿ ಸೃಷ್ಟಿಸಲಾಗಿತ್ತು. ಅನಂತರ ಹಾಲಿವುಡ್ ನಟಿಯೊಬ್ಬರ ಫೋಟೋವನ್ನು ಸೋನಿಯಾ ಗಾಂಧಿ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.