
ಬೆಂಗಳೂರು [ಜೂ.14] : ಐಎಂಎ ಸಮೂಹ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ನಡೆಸುತ್ತಿದ್ದ ಶಿವಾಜಿನಗರದ ಸರ್ಕಾರಿ ‘ವಿಕೆಒ’ ಶಾಲೆಗೆ ನೂತನವಾಗಿ 21 ಮಂದಿ ಶಿಕ್ಷಕರನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿಯೋಜಿಸಿದ್ದು, ಜೂ.14ರ ಶುಕ್ರವಾರದಿಂದ ಎಂದಿನಂತೆ ಶಾಲೆ ಕಾರ್ಯಾರಂಭಿಸಲಿದೆ.
ಐಎಂಎ ಸಂಸ್ಥೆಯಿಂದ ಸಾವಿರಾರು ಮಂದಿಗೆ ವಂಚನೆಆಗಿರುವ ಪ್ರಕರಣದಿಂದ ನೂರಾರು ಮಕ್ಕಳು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಚ್ಚೆತ್ತ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಅಂತೋಣಿ ಸೆಬಾಸ್ಟಿಯನ್ ಅವರು, ಶಾಲೆಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಲೆ ಮುಚ್ಚದಿರುವ ಬಗ್ಗೆ ಹಾಗೂ ಪೂರ್ವ ಪ್ರಾಥಮಿಕ ಸೇರಿದಂತೆ ಈ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳ ಹಿತದೃಷ್ಟಿಯಿಂದ ಅಗತ್ಯ ಸಿಬ್ಬಂದಿ ಯನ್ನು ಕೂಡಲೇ ನೇಮಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಬೆಂಗಳೂರು ಉತ್ತರ ವಲಯದ ಉಪನಿರ್ದೇಶಕರು (ಆಡಳಿತ), ಉತ್ತರ ವಲಯ- 3 ರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.
ಐಎಂಎ ಸಮೂಹ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಸರ್ಕಾರದ ವಿಕೆಒ ಶಾಲೆಯನ್ನು ದತ್ತು ಪಡೆದು ನಿರ್ವಹಣಾ ಜವಾಬ್ದಾರಿಯನ್ನು ಹೊತ್ತಿತ್ತು. ಜತೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿದ್ದ ಶಿಕ್ಷಕರಿಗೆ ಕಂಪನಿಯೇ ವೇತನ ಪಾವತಿಸುತ್ತಿತ್ತು. ಐಎಂಎ ಹಗರಣದ ನಂತರ ಆ ಶಾಲೆಗೆ ತಾತ್ಕಾಲಿಕವಾಗಿ ರಜೆ ನೀಡಲಾಗಿತ್ತು. ಕಂಪನಿ ಬಂದ್ ಆಗಿದ್ದರಿಂದ ಶಿಕ್ಷಕರ ವೇತನ ನೀಡುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿತ್ತು.
ಅದೇ ಕಾರಣಕ್ಕೆ ಗುತ್ತಿಗೆ ಶಿಕ್ಷಕರು ಸಹ ಶಾಲೆಗೆ ಬಂದಿರಲಿಲ್ಲ. ಆಯೋಗದ ಮಾಜಿ ಅಧ್ಯಕ್ಷ ವೈ.ಮರಿಸ್ವಾಮಿ, ಬೆಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾ ಅಲೆಕ್ಸಾಂಡರ್, ಡಿಡಿಪಿಐ ಜಯರಂಗ ಮತ್ತಿತರರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.