ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಶಿವರಾಜ್‌ ಚೌಹಾಣ್‌ ಬಾಸ್‌

By Kannadaprabha NewsFirst Published Jun 14, 2019, 9:03 AM IST
Highlights

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಶಿವರಾಜ್‌ ಚೌಹಾಣ್‌ ಬಾಸ್‌| ಅಮಿತ್‌ ಶಾ ಉತ್ತರಾಧಿಕಾರಿ ಆಯ್ಕೆಗೆ ಪ್ರಕ್ರಿಯೆ ಶುರು

ನವದೆಹಲಿ[ಜೂ.14]: 11 ಕೋಟಿ ಸದಸ್ಯರನ್ನು ಹೊಂದುವ ಮೂಲಕ ವಿಶ್ವದ ಅತಿದೊಡ್ಡ ಪಕ್ಷ ಎಂಬ ದಾಖಲೆಗೆ ಪಾತ್ರವಾಗಿರುವ ಬಿಜೆಪಿ, ಆಂತರಿಕ ಚುನಾವಣೆಗಳಿಗೆ ಪೂರ್ವಭಾವಿಯಾಗಿ ಸದಸ್ಯತ್ವ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿದೆ. ಈ ಅಭಿಯಾನಕ್ಕೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಇದರೊಂದಿಗೆ ಬಿಜೆಪಿಯ ಆಂತರಿಕ ಚುನಾವಣೆ ತನ್ಮೂಲಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾದಂತಾಗಿದೆ.

ಬಿಜೆಪಿಯಲ್ಲಿ 11 ಕೋಟಿ ಸದಸ್ಯರಿದ್ದು, ಆ ಸಂಖ್ಯೆಯನ್ನು ಈ ಬಾರಿ ಶೇ.20ರಷ್ಟುಹೆಚ್ಚಳ ಮಾಡುವ ಗುರಿಯೊಂದಿಗೆ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ. ಶಿವರಾಜ್‌ ಸಿಂಗ್‌ ತಂಡದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ದುಷ್ಯಂತ್‌ ಗೌತಮ್‌, ಒಡಿಶಾ ಸಂಸದ ಸುರೇಶ್‌ ಪೂಜಾರಿ, ರಾಜಸ್ಥಾನ ಬಿಜೆಪಿ ಮಾಜಿ ಮುಖ್ಯಸ್ಥ ಅರುಣ್‌ ಚತುರ್ವೇದಿ, ಕೇರಳದ ಶೋಭಾ ಸುರೇಂದ್ರನ್‌ ಅವರು ಇದ್ದಾರೆ.

ಸದಸ್ಯತ್ವ ಅಭಿಯಾನ ಮುಗಿಯುತ್ತಿದ್ದಂತೆ, ಪಕ್ಷದ ಎಲ್ಲ ಹಂತಗಳಲ್ಲೂ ಚುನಾವಣೆ ನಡೆಯಲಿದೆ. ನಂತರ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಬೇಕಾಗಿದೆ. ಗೃಹ ಸಚಿವ ಅಮಿತ್‌ ಶಾ ಅವರಿಂದ ತೆರವಾಗಲಿರುವ ಆ ಹುದ್ದೆಗೆ ಜೆ.ಪಿ. ನಡ್ಡಾ ಹಾಗೂ ಭೂಪೇಂದ್ರ ಯಾದವ್‌ ಹೆಸರು ಮುಂಚೂಣಿಯಲ್ಲಿದೆ.

click me!