
ಬೆಂಗಳೂರು: ಕೆಲ ತಿಂಗಳ ಹಿಂದೆ ಅಕ್ರಮವಾಗಿ ನೆಲೆಸಿದ ಆರೋಪದಡಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್’ನಲ್ಲಿ ಸೆರೆಯಾದ ಪಾಕಿಸ್ತಾನ ಮೂಲದ ಸಮೀರಾ ರೆಹಮಾನ್ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಈ ಹಿನ್ನೆಲೆಯಲ್ಲಿ ಮಗುವಿನ ಬಾಣಂತನಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮಹಿಳಾ ವಿಭಾಗದ ಪ್ರತ್ಯೇಕ ಕೊಠಡಿಯನ್ನು ಅಧಿಕಾರಿಗಳು ನಿಗದಿಪಡಿಸಿದ್ದಾರೆ.
ಇನ್ನೊಂದೆಡೆ ಮಗುವಿನ ರಾಷ್ಟ್ರೀಯತೆ ಬಗ್ಗೆ ಮೂಡಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಅಕ್ರಮ ಪಾಕ್ ವಲಸಿಗ ಮಹಿಳೆ ಮಗುವಿಗೆ ಭಾರತದ ಪೌರತ್ವ ಸಿಗಲಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.
ಕಾನೂನುಬಾಹಿರವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಸಮೀರಾ ರೆಹಮಾನ್, ಆಕೆಯ ಸಂಬಂಧಿಕರಾದ ಕಿರಣ್ ಗುಲಾಂ ಅಲಿ ಹಾಗೂ ಖಾಸಿಂ ಶಂಶುದ್ದೀನ್ ಅವರನ್ನು ಮೇ.24 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಅಲ್ಲದೆ ಈ ಪ್ರಜೆಗಳಿಗೆ ಸಹಕರಿಸಿದ ಆರೋಪದಡಿ ಸಮೀರಾ ಪತಿ ಕೇರಳ ಮೂಲದ ರೆಹಮಾನ್ ಸಹ ಜೈಲು ಸೇರಿದ್ದ. ಈ ಬಂಧನ ವೇಳೆ ಮೂರು ತಿಂಗಳ ಗಭಿರ್ಣಿಯಾಗಿದ್ದ ಸಮೀರಾ, ಏಳು ದಿನಗಳ ಹಿಂದೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಹೆಣ್ಣು ಹಡೆದಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾಯಿ ಅಕ್ರಮ ಪಾಕ್ ವಲಸಿಗಳಾಗಿದ್ದರಿಂದ ಆ ಮಗುವಿನ ರಾಷ್ಟ್ರೀಯತೆ ಬಗ್ಗೆ ಪ್ರಶ್ನೆಗಳು ಮೂಡಿದ್ದವು. ಈ ಸಂಬಂಧ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ನ್ಯಾಯವಾದಿ ರವಿ ಬಿ.
ನಾಯಕ್, ‘ಪೋಷಕರು ಯಾವುದೇ ದೇಶದವರಾಗಿದ್ದರೂ ಅವರಿಗೆ ಹುಟ್ಟಿದ ಮಗು ತಾನು ಜನಿಸಿದ ದೇಶದ ಪ್ರಜೆಯಾಗುತ್ತದೆ. ಇಲ್ಲಿನ ಹೆತ್ತವರ ರಾಷ್ಟ್ರೀಯತೆ ಪ್ರಶ್ನೆ ಬರುವುದಿಲ್ಲ. ಹಾಗಾಗಿ ಪಾಕಿಸ್ತಾನ ಮಹಿಳೆಗೆ ಜನಿಸಿರುವ ಹೆಣ್ಣು ಮಗು ಕೂಡ ಭಾರತೀಯಳೇ ಆಗುತ್ತಾಳೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.