ಕಾಂಗ್ರೆಸ್ ಗೆ ಗುಡ್ ಬೈ ಹೇಳ್ತಾರಾ ಸಚಿವ.?

Published : Sep 20, 2018, 07:42 AM IST
ಕಾಂಗ್ರೆಸ್ ಗೆ  ಗುಡ್ ಬೈ ಹೇಳ್ತಾರಾ ಸಚಿವ.?

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗುತ್ತಿದ್ದು ಇದೇ ವೇಳೆ ಸಚಿಚ ರಮೇಶ್ ಜಾರಕಿಹೊಳಿ ಅವರು ತಾವು ಯಾವುದೇ ಕಾರಣಕ್ಕೂ ಕೂಡ ಪಕ್ಷವನ್ನು ತ್ಯಜಿಸುವುದಿಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರು :  ನಾನು ಪಕ್ಷ ತೊರೆಯುವುದಿಲ್ಲ. ನಮ್ಮದು ಸ್ಥಳೀಯ ಹಾಗೂ ಪ್ರತಿಷ್ಠೆಗೆ ಸಂಬಂಧಿಸಿದ ವಿಚಾರಗಳು. ಅವುಗಳನ್ನು ಪರಿಹರಿಸಿಕೊಳ್ಳುತ್ತೇವೆ. ನಾಯಕರಿಂದಲೂ ಭರವಸೆ ದೊರಕಿದೆ. ನನಗೆ ಪಕ್ಷ ತ್ಯಜಿಸುವ ಯಾವುದೇ ಆಲೋಚನೆ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಹೀಗೆ ಹೇಳುವ ಮೂಲಕ ಬೆಳಗಾವಿಯ ಜಾರಕಿಹೊಳಿ ಸಹೋದರರ ಬಂಡಾಯದ ವಿಚಾರಕ್ಕೆ ಅಂತ್ಯಹಾಡುವ ಪ್ರಯತ್ನವನ್ನು ಸಚಿವ ರಮೇಶ್‌ ಜಾರಕಿಹೊಳಿ ನಡೆಸಿದ್ದಾರೆ.

ಗುರುವಾರವೂ ತಮ್ಮ ಬೆಂಬಲಿಗ ಶಾಸಕರು ಹಾಗೂ ಸಮಾಜದ ಸ್ವಾಮೀಜಿಗಳೊಂದಿಗೆ ಸತತ ಮಾತುಕತೆ ನಡೆಸಿದ ರಮೇಶ್‌ ಜಾರಕಿಹೊಳಿ ಅವರು ಸಂಜೆ ಕನ್ನಡಪ್ರಭದೊಂದಿಗೆ ಮಾತನಾಡಿ, ನಾನು ಪಕ್ಷ ತ್ಯಜಿಸುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಪಕ್ಷ ತೊರೆಯುವಂತಹ ಸಮಸ್ಯೆಯೂ ಇರಲಿಲ್ಲ. ಸ್ಥಳೀಯವಾಗಿ ನಮ್ಮ ಪ್ರತಿಷ್ಠೆಗೆ ಸಂಬಂಧಿಸಿದ ಕೆಲ ಸಮಸ್ಯೆಗಳಿದ್ದವು. ಅವುಗಳನ್ನು ಬಗೆಹರಿಸುವ ಭರವಸೆ ದೊರಕಿದೆ ಎಂದು ಹೇಳಿದರು.

ಕುತೂಹಲಕಾರಿ ಸಂಗತಿಯೆಂದರೆ, ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್‌ ಅವರ ಮೂಗುತೂರಿಸುವಿಕೆ ಬಗ್ಗೆ ಕ್ರುದ್ಧರಾಗಿ ಬೆಂಬಲಿಗ ಶಾಸಕರೊಂದಿಗೆ ಪಕ್ಷ ತ್ಯಜಿಸುವ ತೀವ್ರ ಬೆದರಿಕೆಯೊಡ್ಡಿದ್ದ ರಮೇಶ್‌ ಜಾರಕಿಹೊಳಿ ಅವರು ತಾವು ಕಾಂಗ್ರೆಸ್‌ ನಾಯಕರ ಮುಂದೆ ಪರಿಶಿಷ್ಟಪಂಗಡ ಹಾಗೂ ಅಹಿಂದ ಸಮುದಾಯದ ಹಿತ ಕಾಯುವ ಕೆಲ ಬೇಡಿಕೆಗಳನ್ನು ಇಟ್ಟಿರುವುದಾಗಿ ಬಿಂಬಿಸತೊಡಗಿದ್ದಾರೆ.

ರಮೇಶ್‌ ಈಗ ಅಹಿಂದ ನಾಯಕ!:

ರಮೇಶ್‌ ಅವರ ಆಪ್ತರ ಪ್ರಕಾರ, ಸಿದ್ದರಾಮಯ್ಯ ಹಾಗೂ ಪಕ್ಷದ ನಾಯಕರ ಮುಂದೆ ಪರಿಶಿಷ್ಟಪಂಗಡಕ್ಕೆ ಮತ್ತಷ್ಟುರಾಜಕೀಯ ಆದ್ಯತೆ ದೊರೆಯಬೇಕು ಎಂದು ರಮೇಶ್‌ ಜಾರಕಿಹೊಳಿ ಆಗ್ರಹಿಸಿದ್ದಾರೆ. ಮುಖ್ಯವಾಗಿ ಅಹಿಂದ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಉತ್ತಮ ಆದ್ಯತೆ ನೀಡಬೇಕು. ಪರಿಶಿಷ್ಟಪಂಗಡಕ್ಕೆ ಕೆಪಿಎಸ್‌ಸಿ ಸದಸ್ಯ ಸ್ಥಾನವೊಂದನ್ನು ನೀಡಬೇಕು. ವಿಧಾನಪರಿಷತ್‌ ನೇಮಕದಲ್ಲಿ ಪರಿಶಿಷ್ಟಪಂಗಡದವರಿಗೆ ಮತ್ತೊಂದು ಸ್ಥಾನ ದೊರಕಬೇಕು ಹಾಗೂ ಪರಿಶಿಷ್ಟರಿಗೆ ಹಾಲಿ ಇರುವ ಮೀಸಲಾತಿಯ ಪ್ರಮಾಣವನ್ನು ಶೇ.5ಕ್ಕೆ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನು ರಮೇಶ್‌ ಜಾರಕಿಹೊಳಿ ಅವರು ಪಕ್ಷ ಹಾಗೂ ಸರ್ಕಾರದ ಮುಂದಿಟ್ಟಿದ್ದಾರೆ ಎಂದು ಬಿಂಬಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಬೇಡಿಕೆಗಳ ಜತೆಗೆ ಪರಿಶಿಷ್ಟಪಂಗಡ ಹಾಗೂ ಅಹಿಂದ ಸಮುದಾಯಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಪಕ್ಷದ ಮುಂದಿಟ್ಟಿರುವುದಕ್ಕೆ ಹಾಗೂ ಈ ಸಮುದಾಯದ ಶಾಸಕರು ತಮ್ಮೊಂದಿಗೆ ಸತತ ಸಂಪರ್ಕದಲ್ಲಿರುವ ಬಗ್ಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ನಾನು ಕೇವಲ ವಾಲ್ಮೀಕಿ ಸಮುದಾಯಕ್ಕೆ ಮಾತ್ರವಲ್ಲ, ಅಹಿಂದ ಸಮುದಾಯದ ಪರವಾಗಿ ಇದ್ದೇನೆ ಮತ್ತು ಹೋರಾಟ ನಡೆಸಿದ್ದೇನೆ. ಈ ಹಿನ್ನೆಲೆಯಲ್ಲಿ ಅಹಿಂದ ಸಮುದಾಯದ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು.

ಬಿಜೆಪಿಯಲ್ಲೂ ಡಿಸಿಎಂ ಪೋಸ್ಟ್‌ ಇಲ್ಲ!

ಪಕ್ಷ ತ್ಯಜಿಸುವ ತೀವ್ರ ಬೆದರಿಕೆಯೊಡ್ಡುತ್ತಿದ್ದ ರಮೇಶ್‌ ಜಾರಕಿಹೊಳಿ ಅವರ ವಾದ ಸರಣಿ ಇದೀಗ ಸಂಪೂರ್ಣ ಬದಲಾಗಲು ಇರುವ ಕಾರಣಗಳ ಪೈಕಿ ಬಿಜೆಪಿಯಲ್ಲಿ ಅವರಿಗೆ ಡಿಸಿಎಂ ಪದವಿ ದೊರೆಯುವ ಸಂಭವನೀಯತೆ ಕುಸಿದಿರುವುದು ಒಂದು ಕಾರಣ ಎಂದು ಹೇಳಲಾಗುತ್ತಿದೆ.

ರಮೇಶ್‌ ಜಾರಕಿಹೊಳಿ ಅವರಿಗೆ ಡಿಸಿಎಂ ಪದವಿ ನೀಡುವ ಸ್ಪಷ್ಟಭರವಸೆ ಬಿಜೆಪಿಯಿಂದ ದೊರಕಿಲ್ಲ. ಉತ್ತಮ ಸಂಖ್ಯೆಯ ಶಾಸಕರೊಂದಿಗೆ ಬಿಜೆಪಿ ಸೇರಿದರೆ ಜಲ ಸಂಪನ್ಮೂಲ ಖಾತೆ ನೀಡುವ ಭರವಸೆ ಮಾತ್ರ ದೊರಕಿದೆ ಎನ್ನಲಾಗಿದೆ. ಇದರ ಜತೆಗೆ, ರಮೇಶ್‌ ಅವರು ನಿರೀಕ್ಷಿಸಿದಷ್ಟುಮಂದಿ ಕಾಂಗ್ರೆಸ್‌ ಶಾಸಕರು ಅವರೊಂದಿಗೆ ಕೈಜೋಡಿಸುತ್ತಿಲ್ಲ. ಹೀಗಾಗಿ ಅವರು ತಾತ್ಕಾಲಿಕವಾಗಿ ಬಿಜೆಪಿ ಸೇರುವ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬರ್ಲಿನ್‌ನಲ್ಲಿ ಟಿವಿಎಸ್‌ ಬೈಕ್ : ರಾಹುಲ್‌ ಗಾಂಧಿ ಭಾರಿ ಮೆಚ್ಚುಗೆ
ಇಂದು ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ