ಶಬರಿಮಲೆ ದೇಗುಲಕ್ಕೆ ಶೀಘ್ರ ಹೋಗುವೆ: ತೃಪ್ತಿ ದೇಸಾಯಿ

By Web DeskFirst Published Oct 14, 2018, 8:45 AM IST
Highlights

ಶಬರಿಮಲೆ ದೇಗುಲಕ್ಕೆ ಶೀಘ್ರ ಹೋಗುವೆ: ತೃಪ್ತಿ ದೇಸಾಯಿ | ತೃಪ್ತಿ ಹೇಳಿಕೆಗೆ ಕೇರಳದಲ್ಲಿ ವ್ಯಾಪಕ ವಿರೋಧ | ಭೇಟಿ ನೀಡದಂತೆ ಅರ್ಚಕರ ಮನೆತನ, ರಾಜಮನೆತನ ಆಗ್ರಹ | ಕೇರಳದ ಅನೇಕ ಕಡೆ ಪ್ರತಿಭಟನೆಗಳು ಮುಂದುವರಿಕೆ
 

ತಿರುವನಂತಪುರಂ (ಅ. 14): ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್‌ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ದೇವಾಲಯ ಪ್ರವೇಶಿಸುವೆ ಎಂದು ಮಹಾರಾಷ್ಟ್ರದ ಮಹಿಳಾಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ಹೇಳಿದ್ದಾರೆ. ಈ ನಡುವೆ, ಮಹಿಳೆಯರ ಪ್ರವೇಶ ವಿರೋಧಿಸಿ ಕೇರಳದ ಅನೇಕ ಕಡೆ ಪ್ರತಿಭಟನೆಗಳು ಮುಂದುವರೆದಿವೆ.

ಈ ಹಿಂದೆ ಮಹಾರಾಷ್ಟ್ರದ ಶನಿ ಶಿಂಗಣಾಪುರ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಮೇಲೆ ಇದ್ದ ನಿಷೇಧ ತೆರವಾದ ಹಿನ್ನೆಲೆಯಲ್ಲಿ ತೃಪ್ತಿ ದೇಸಾಯಿ ಆ ದೇಗುಲ ಪ್ರವೇಶಿಸಿ ಸಂಚಲನ ಮೂಡಿಸಿದ್ದರು. ಈಗ ಅವರು ಶಬರಿಮಲೆಗೂ ಭೇಟಿ ನೀಡಿರುವುದಾಗಿ ಹೇಳಿರುವುದು ಸಂಚಲನ ಮೂಡಿಸಿದೆ.

ದೇಸಾಯಿ, ‘ಮಹಿಳೆಯರ ಗುಂಪಿನೊಂದಿಗೆ ನಾನು ಶಬರಿಮಲೆಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಉದ್ದೇಶ ಹೊಂದಿದ್ದೇನೆ’ ಎಂದರು. ‘ಈಗ ನಡೆದಿರುವ ಪ್ರತಿಭಟನೆಗಳು ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆ. ಎಲ್ಲ ಭಕ್ತರೂ ಮಹಿಳೆಯರನ್ನು ದೇಗುಲಕ್ಕೆ ಸ್ವಾಗತಿಸಬೇಕು’ ಎಂದು ಕೋರಿದರು. ಅಲ್ಲದೆ, ‘ಮಹಿಳೆಯರ ದೇಗುಲ ಪ್ರವೇಶ ವಿರೋಧಿಸುತ್ತಿರುವ ಕಾಂಗ್ರೆಸ್‌ ಹಾಘೂ ಬಿಜೆಪಿಗಳು ಮಹಿಳಾ ಸಮಾನತೆಯ ಕುರಿತಾದ ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ವ್ಯಾಪಕ ವಿರೋಧ:

ಈ ನಡುವೆ, ರಾಜಮನೆತನದ ಶಶಿಕುಮಾರ ವರ್ಮ ಅವರು ದೇಸಾಯಿ ಅವರ ನಡೆಗಳನ್ನು ವಿರೋಧಿಸಿದ್ದು, ‘ಯಾವುದೇ ಅತಿರೇಕದ ಕ್ರಮಕ್ಕೆ ಮುಂದಾಗಬೇಡಿ’ ಎಂದು ಎಚ್ಚರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೈ ಪ್ರತಿಕ್ರಿಯಿಸಿ, ‘ತೃಪ್ತಿ ಭೇಟಿ ನೀಡಕೂಡದು. ಅವರು ಶಬರಿಮಲೆಯನ್ನು ಉದ್ರಿಕ್ತಗೊಳಿಸಬಾರದು’ ಎಂದು ಆಗ್ರಹಿಸಿದ್ದಾರೆ.  ಇನ್ನು ಅರ್ಚಕರ ಮನೆತನದ ರಾಹುಲ್‌ ಈಶ್ವರ್‌ ಅವರು, ‘ತೃಪ್ತಿ ಭೇಟಿಯನ್ನು ನಾವು ತಡೆಯಲಿದ್ದೇವೆ. ರಸ್ತೆಯ ಮೇಲೆ ಮಲಗಿ ಅವರನ್ನು ಶಾಂತ ಸ್ವರೂಪದಿಂದ ತಡೆಗಟ್ಟಲಿದ್ದೇವೆ’ ಎಂದರು.

ಪ್ರತಿಭಟನೆ ಮುಂದುವರಿಕೆ:

ಕೊಚ್ಚಿ, ಕೊಲ್ಲಂ ಹಾಗೂ ಇತರ ಕಡೆಗಳಲ್ಲಿ ಅಯ್ಯಪ್ಪ ದೇವಾಲಯ ಕುರಿತ ಸುಪ್ರೀಂ ಕೋರ್ಟ್‌ ಆದೇಶ ಖಂಡಿಸಿ ಪ್ರತಿಭಟನೆಗಳು ನಡೆದವು. ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಹೋರಾಟದ ಮುಂಚೂಣಿಯಲ್ಲಿ ಇರುವುದು ವಿಶೇಷ. 

click me!