ಪರಪ್ಪನ ಅಗ್ರಹಾರಕ್ಕೆ ಒಯ್ದರೂ ಬೆದರಿಕೆಗೆ ನಾನು ಜಗ್ಗಲ್ಲ: ಡಿಕೆಶಿ

First Published Jun 27, 2018, 9:21 AM IST
Highlights

ಬೆದರಿಕೆ ಹಾಕಿ ನನ್ನ ಹಾಗೂ ನನ್ನ ಕುಟುಂಬವನ್ನು ಗೆಲ್ಲಲು ಸಾಧ್ಯವಿಲ್ಲ. ಬೇಕಾದರೆ ನಮ್ಮನ್ನು ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಲಿ. ಕೇಸು, ಕೋರ್ಟಿಗೆಲ್ಲ ಜಗ್ಗಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಕನಕಪುರ: ಬೆದರಿಕೆ ಹಾಕಿ ನನ್ನ ಹಾಗೂ ನನ್ನ ಕುಟುಂಬವನ್ನು ಗೆಲ್ಲಲು ಸಾಧ್ಯವಿಲ್ಲ. ಬೇಕಾದರೆ ನಮ್ಮನ್ನು ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಲಿ. ಕೇಸು, ಕೋರ್ಟಿಗೆಲ್ಲ ಜಗ್ಗಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ನಗರದ ಹೊರವಲಯದ ಅರಳಾಳು ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾವು ಪ್ರೀತಿ ವಿಶ್ವಾಸಕ್ಕೆ ಬಗ್ಗುತ್ತೇವೆ. ಬೆದರಿಕೆ ಹಾಕಿ ಹೆದರಿಸಿ ನಮ್ಮನ್ನು ಗೆಲ್ಲಲು ಯಾರಿಂದಲೂ ಆಗುವುದಿಲ್ಲ. ನನ್ನ ಹಾಗೂ ನನ್ನ ಸಹೋದರ ಡಿ.ಕೆ.ಸುರೇಶ್‌ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ತನಿಖೆ ನಡೆಸಲಾಗುತ್ತಿದೆ. ನಾವು ಯಾವುದೇ ತಪ್ಪು ಮಾಡಿಲ್ಲ. ಯಾರಿಗೂ ಹೆದರುವುದಿಲ್ಲ ಎಂದು ತಿಳಿಸಿದರು.

ನಾವು ಬ್ಯಾಂಕಿನಿಂದ ಬದುಕಬೇಕಾಗಿಲ್ಲ. ಒಂದು ಚೀಲ ಹಿಡಿದುಕೊಂಡು ಬಂದರೆ ನೀವೇ (ಜನರೇ) ಹಣ ನೀಡುತ್ತೀರಿ. ಬೇರೆ ಪಕ್ಷದಲ್ಲಿರುವ ನಾಯಕರು ಏನೇನೋ ಮಾಡುತ್ತಿದ್ದಾರೆ. ಅವರೆಲ್ಲರನ್ನು ಬಿಟ್ಟು ನಮ್ಮನ್ನೇ ಗುರಿ ಮಾಡಲಾಗುತ್ತಿದೆ ಎಂದರು.

ರೈತರ ಕೃಷಿ ಸಾಲಮನ್ನಾ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಬ್ಯಾಂಕ್‌ ಮ್ಯಾನೇಜರ್‌ಗಳ ಜತೆಯಲ್ಲಿ ಚರ್ಚೆ ನಡೆಸಿದ್ದಾರೆ. ಸೂಕ್ತ ಕಾಲದಲ್ಲಿ ಸಾಲಮನ್ನಾ ನಿರ್ಧಾರ ಕೈಗೊಳ್ಳುತ್ತಾರೆ. ಸಾಲಮನ್ನಾ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧವಿದೆ ಎಂಬುದು ಸುಳ್ಳು ಎಂದರು.

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಒಂದೊಂದು ಸ್ಥಾನವೂ ಮುಖ್ಯವಾಗಿತ್ತು. ಬಿಜೆಪಿಯವರು ಸುಮ್ಮನೆ ಕುಳಿತಿಲ್ಲ. ಅವರು ನಿದ್ದೆಯನ್ನೂ ಮಾಡುತ್ತಿಲ್ಲ ಎಂದರು.

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್‌-ಜೆಡಿಎಸ್‌ ಹೊಂದಾಣಿಕೆ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್‌ ಕಣಕ್ಕಿಳಿಯುತ್ತಾರೆ. ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಪಕ್ಷದ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಗೊತ್ತಿಲ್ಲ ಎಂದರು.

click me!