
ಚಿತ್ರದುರ್ಗ(ಆ.16): ಈ ಮಹಿಳೆಗೆ ಕಳೆದ 10 ವರ್ಷಗಳಿಂದ ನೆಮ್ಮದಿಯೇ ಇಲ್ಲದಂತಾಗಿದೆ. ತನಗರಿವಿಲ್ಲದ ವಯಸ್ಸಿನಲ್ಲೇ ತನಗಿಂತ ಹಿರಿಯ ವಯಸ್ಸಿನ ವ್ಯಕ್ತಿ ಜೊತೆ ಮದುವೆಯಾಗಿದ್ದ ಅಮಾಯಕ ಹೆಣ್ಣು ಮಗಳು ಈಕೆ. ಮದುವೆಯಾದ ಸಂದರ್ಭದಲ್ಲಿ ಕೇವಲ ೧೫ ವರ್ಷದವಳಾಗಿದ್ದ ಈ ಅಮಾಯಕ ಹೆಣ್ಣು ಮಗಳು, ತಂದೆ, ತಾಯಿ ಹಾಗೂ ಅಣ್ಣನನ್ನ ಕಳೆದುಕೊಂಡು ಅಕ್ಷರಸಃ ಅನಾಥಳಾಗಿದ್ದಾಳೆ. ಇದನ್ನೇ ಬಂಡವಾಳ ಮಾಡಿಕೊಂಡ ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದ ತಿಪ್ಪೇಸ್ವಾಮಿ ಎಂಬಾತ, ಈಕೆಯನ್ನ 10ವರ್ಷಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದ.
ತನ್ನ ಗಂಡ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿರುವುದು ತಿಳಿದಾಗ ಆಘಾತಕ್ಕೊಳಗಾಗಿದ್ದ ಈ ಮಹಿಳೆ, ಆತನ ಜೊತೆ ಮದುವೆ ಮಾಡಿಸಿದ ತನ್ನ ಅತ್ತಿಗೆಯ ಬಳಿ ಅಳಲು ತೋಡಿಕೊಂಡರೂ ಏನೂ ಪ್ರಯೋಜನವಾಗಿಲ್ಲವಂತೆ. ಹೇಗೋ ಕಷ್ಟಪಟ್ಟು ಜೀವನ ಸಾಗಿಸೋಣ ಅಂದ್ರೆ, ಪಾಪಿ ಗಂಡ ಹೆಂಡತಿಯನ್ನೂ ವೇಶ್ಯಾವಾಟಿಕೆಗೆ ದೂಡಲು ಒತ್ತಡ ಹಾಕುತ್ತಿದ್ದು, ಇದರಿಂದ ಬೇಸತ್ತ ಪತ್ನಿ ಮನೆಯಿಂದ ಹೊರಬಂದು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾಳೆ. ಆದರೆ ಪೊಲೀಸರು ಮಹಿಳೆಯಿಂದ ದೂರು ಪಡೆಯಲು ನಿರಾಕರಿಸಿದ್ದಾರೆ. ನಂತರ ಮಾಧ್ಯಮದ ಮುಂದೆ ಬಂದು ರಕ್ಷಣೆ ಕೋರಿದ್ದಾಳೆ. ರಕ್ಷಣೆ ಕೋರಿದ ವಿಷಯ ತಿಳಿದ ಪೋಲಿಸರು ಆರೋಪಿಯನ್ನ ಬಂಧಿಸಿದ್ದಾರೆ.
ಇನ್ನು ನೊಂದ ಮಹಿಳೆಯ ಪತಿ ವೇಶ್ಯಾವಾಟಿಕೆ ದಂಧೆಯಲ್ಲಿ ಹಲವಾರು ಮಹಿಳೆಯರು ಹಾಗೂ ಗ್ರಾಹಕರ ಜೊತೆ ಮೊಬೈಲ್ ಸಂಭಾಷಣೆ ನಡೆಸಿರುವ ವಾಯ್ಸ್ ಕ್ಲಿಪ್ಪಿಂಗ್‌ಗಳನ್ನು ಸುವರ್ಣ ನ್ಯೂಸ್‌ಗೆ ನೀಡಿದ್ದಾಳೆ.
ಒಟ್ಟಾರೆ ಏನೂ ಅರಿಯದ ವಯಸ್ಸಿನಲ್ಲಿ ವೇಶ್ಯಾವಾಟಿಕೆ ನಡೆಸುವ ಪಿಂಪ್ ಒಬ್ಬನನ್ನ ಮದುವೆಯಾದ ಅಮಾಯಕ ಮಹಿಳೆ, ತಾನು ಗಂಡನ ಯಾವುದೇ ಒತ್ತಡಕ್ಕೆ ಮಣಿಯದೆ, ಗೌರವಯುತ ಜೀವನ ನಡೆಸಬೇಕು ಎಂಬ ಆಸೆಯಿಂದ ಮನೆಯಿಂದ ಹೊರ ಬಂದಿದ್ದಾಳೆ. ಅಮಾಯಕಳ ಅಸಹಾಯಕತೆ ಕಂಡು ಮಾನವೀಯತೆ ತೋರಿರುವ ಆಕೆಯ ದೂರದ ಸಂಬಂಧಿ ಈಕೆಗೆ ಆಶ್ರಯ ನೀಡಿದ್ದು, ವೇಶ್ಯಾವಾಟಿಕೆ ಜಾಲದವರ ಬೆದರಿಕೆ ಕರೆಗಳಿಂದ ಆತನೂ ಆತಂಕದಲ್ಲಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇನ್ನಾದರೂ ಪೋಲೀಸರು ವೇಶ್ಯಾವಾಟಿಕೆ ಜಾಲವನ್ನು ಬಯಲಿಗೆಳೆಯುವ ಮೂಲಕ, ನೊಂದ ಹೆಣ್ಣು ಮಕ್ಕಳಿಗೆ ಗೌರವಯುತ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.