
ಕೊಚ್ಚಿ[ನ.16]: ಕೇರಳದ ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ವಿವಾದಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಶುಕ್ರವಾರದಂದು ಮತ್ತೆ ದೇಗುಲದ ಬಾಗಿಲು ತೆರೆಯಲಿದೆ. ಹೀಗಿರುವಾಗ ಭೂಮಾತಾ ಬ್ರಿಗೇಡ್ ಸಂಸ್ಥಾಪಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಆರು ಮಹಿಳೆಯರ ತಂಡದೊಂದಿಗೆ ಮತ್ತೆ ಕೇರಳದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ.
ಇಂದಿನಿಂದ ಶಬರಿಮಲೆಯಲ್ಲಿ ಮಂಡಳ ವಿಳಕ್ಕು ಮಹೋತ್ಸವ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಐದು ಗಂಟೆಗೆ ಅಯ್ಯಪ್ಪನ ದೇಗುಲದ ಬಾಗಿಲು ತೆರೆಯಲಿದ್ದು, ಮುಂದಿನ ಎರಡು ತಿಂಗಳವರೆಗೆ ಪೂಜಾ-ಕೖಂಕರ್ಯಗಳು ನಡೆಯಲಿವೆ. ಈ ಮೊದಲೇ ತೃಪ್ತಿ ದೇಸಾಯಿ ತಾನು ಶಬರಿಮಲೆ ದೇಗುಲ ಪ್ರವೇಶಿಸಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವುದಾಗಿ ಘೋಷಿಸಿದ್ದು ಇದೇ ಕಾರಣದಿಂದ ಇಂದು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಆದರೀಗ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿರುವ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸುವ ಮೂಲಕ, ತೃಪ್ತಿ ದೇಸಾಯಿ ಆಗಮನಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತಾಗಿ ಬಿಜೆಪಿ ನಾಯಕ ಎಂ. ಎನ್ ಗೋಪಿ ಪ್ರತಿಕ್ರಿಯಿಸುತ್ತಾ 'ಏನೇ ಆದರೂ ತೃಪ್ತಿ ದೇಸಾಯಿಯನ್ನು ವಿಮಾನ ನಿಲ್ದಾಣದಿಂದ ಹೊರಬರಲು ಬಿಡುವುದಿಲ್ಲ' ಎಂದಿದ್ದಾರೆ.
ಈ ವಿವಾದದ ನಡುವೆಯೇ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರಿಗೆ ಪತ್ರ ಬರೆದಿರುವ ತೃಪ್ತಿ ದೇಸಾಯಿ ತನಗೆ ಭದ್ರತೆ ನೀಡುವಂತೆ ಕೇಳಿಕೊಂಡಿದ್ದಾರೆ. ಅತ್ತ ಟ್ಯಾಕ್ಸಿ ಚಾಲಕರೂ ಇವರನ್ನು ಕರೆದೊಯ್ಯಲು ನಿರಾಕರಿಸುತ್ತಿದ್ದು, ಹೊಟೇಲ್ ಮಾಲಿಕರೂ ಆಕೆಗೆ ರೂಂ ನೀಡಲು ಒಪ್ಪುತ್ತಿಲ್ಲ. ಈಗಾಗಲೇ ಶಬರಿಮಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಇಂದು ಸಂಜೆ ಐದು ಗಂಟೆಗೆ ಅಯ್ಯಪ್ಪನ ದೇಗುಲದ ಬಾಗಿಲು ತೆರೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ