ನರೇಂದ್ರ ಮೋದಿ ಹತ್ಯೆ ಸಂಚು : ಸ್ಫೋಟಕ ಸಂಗತಿ ಖಚಿತ

By Web DeskFirst Published Nov 16, 2018, 7:34 AM IST
Highlights

ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತ ಐವರು ಎಡಪಂಥೀಯ ಮುಖಂಡರು ಹಾಗೂ ಇತರರ ವಿರುದ್ಧ ಪುಣೆ ಪೊಲೀಸರು ಸೆಷನ್ಸ್‌ ಕೋರ್ಟ್‌ನಲ್ಲಿ ಗುರುವಾರ ಆರೋಪಪಟ್ಟಿಸಲ್ಲಿಸಿದ್ದಾರೆ. ಈ ಆರೋಪಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆದಿದ್ದು ನಿಜ ಎಂದು ಉಲ್ಲೇಖಿಸಲಾಗಿದೆ.

ಮುಂಬೈ: ಈ ವರ್ಷದ ಜ.1ರಂದು ನಡೆದ ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತ ಐವರು ಎಡಪಂಥೀಯ ಮುಖಂಡರು ಹಾಗೂ ಇತರರ ವಿರುದ್ಧ ಪುಣೆ ಪೊಲೀಸರು ಸೆಷನ್ಸ್‌ ಕೋರ್ಟ್‌ನಲ್ಲಿ ಗುರುವಾರ ಆರೋಪಪಟ್ಟಿಸಲ್ಲಿಸಿದ್ದಾರೆ. ಈ ಆರೋಪಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆದಿದ್ದು ನಿಜ ಎಂದು ಉಲ್ಲೇಖಿಸಲಾಗಿದೆ.

‘ಭೀಮಾ ಕೋರೆಗಾಂವ್‌ ದಂಗೆಯ ವರ್ಷಾರಚರಣೆ ವೇಳೆ ಎಲ್ಗಾರ್‌ ಪರಿಷದ್‌ ಎಂಬ ಸಂಘಟನೆ ಆಯೋಜಿಸಿದ್ದ ಸಭೆಯಲ್ಲಿ ಆರೋಪಿಗಳು ಪ್ರಚೋದನಕಾರಿ ಭಾಷಣ ಮಾಡಿ ಹಿಂಸಾಚಾರಕ್ಕೆ ಪ್ರೇರೇಪಣೆ ನೀಡಿದ್ದಾರೆ. ಬಳಿಕ ಈ ಪ್ರಕರಣದ ತನಿಖೆಯ ಜಾಡು ಹಿಡಿದು ಹೊರಟಾಗ, ಎಡಪಂಥೀಯ ಕಾರ್ಯಕರ್ತ ರೋನಾ ವಿಲ್ಸನ್‌ ಎಂಬುವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ಪತ್ರಗಳು ಪತ್ತೆಯಾಗಿದ್ದವು. ಇದರಲ್ಲಿ ‘ರಾಜೀವ್‌ ಗಾಂಧಿ ರೀತಿಯ ಹತ್ಯೆ ನಡೆಯಬೇಕು. ರೋಡ್‌ ಶೋಗಳಲ್ಲಿ ಅವರನ್ನು (ಪ್ರಧಾನಿಯನ್ನು) ಹತ್ಯೆ ಮಾಡಬೇಕು. ಮೋದಿ ರಾಜ್‌ಗೆ ಅಂತ್ಯ ಹಾಡಬೇಕು’ ಎಂದು ನಿಷೇಧಿತ ಸಿಪಿಐ (ಮಾವೋವಾದಿ) ಹಾಗೂ ರೋನಾ ವಿಲ್ಸನ್‌, ಮಾವೋವಾದಿ ನಾಯಕ ಕಿಶನ್‌ ದಾ ಇತರರ ನಡುವೆ ಪತ್ರವ್ಯವಹಾರ ನಡೆದಿದ್ದು ಗೊತ್ತಾಗಿತ್ತು. ಇದು ವಿಚಾರಣೆಯಲ್ಲಿ ದೃಢಪಟ್ಟಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ವರದಿಗಳು ಹೇಳಿವೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ 80 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ’ ಎಂದು 5000 ಪುಟಗಳ ಚಾಜ್‌ರ್‍ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಜೂನ್‌ನಲ್ಲಿ ಬಂಧಿತರಾದ ಎಡಪಂಥೀಯ ಕಾರ್ಯಕರ್ತರಾದ ರೋನಾ ವಿಲ್ಸನ್‌, ನಾಗ್ಪುರ ಮೂಲದ ವಕೀಲ ಸುರೇಂದ್ರ ಗ್ಯಾಡ್ಲಿಂಗ್‌, ನಾಗ್ಪುರ ವಿಶ್ವವಿದ್ಯಾಲಯದ ಪ್ರಧ್ಯಾಪಕ ಶೋಮಾ ಸೇನ್‌, ಪ್ರಧಾನಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆಯ ಮಾಜಿ ಸದಸ್ಯ ಮಹೇಶ್‌ ರಾವತ್‌, ಹಾಗೂ ರಿಪಬ್ಲಿಕನ್‌ ಫ್ಯಾಂಥರ್ಸ್‌ನ ಸುಧೀರ್‌ ಧಾವಳೆ ಅವರನ್ನು ಉಲ್ಲೇಖಿಸಲಾಗಿದೆ. ಅಲ್ಲದೇ ಐವರು ಭೂಗತ ನಕ್ಸಲರ ವಿರುದ್ಧವೂ ಆರೋಪಪಟ್ಟಿದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿದಂತೆ ಆ.28ರಂದು ವಿವಿಧೆಡೆ ದಾಳಿ ಕೈಗೊಂಡಿದ್ದ ಪೊಲೀಸರು ಕವಿ ವರ ವರ ರಾವ್‌, ಅರುಣ್‌ ಫೆರೀರಾ, ವರ್ನಾನ್‌ ಗೋನ್ಸಾಲ್ವಿಸ್‌, ಸುಧಾ ಭಾರದ್ವಾಜ್‌, ಗೌತಮ್‌ ನವ್ಲಖಾ ಅವರನ್ನು ಬಂಧಿಸಲಾಗಿತ್ತು. ಬಳಿಕ ಇವರನ್ನು ಗೃಹ ಬಂಧನದಲ್ಲಿ ಇಡಲಾಗಿದೆ.

click me!