'ನಾವಿಬ್ಬರು ನಮಗೆ ಮೂವರು': 3 ಮಕ್ಕಳ ಹೆತ್ತರೆ ಜೈನ ದಂಪತಿಗೆ ಹಣ!

By Web DeskFirst Published Mar 6, 2019, 9:51 AM IST
Highlights

3 ಮಕ್ಕಳ ಹೆತ್ತರೆ ಜೈನ ದಂಪತಿಗೆ ಹಣ!| 3ನೇ ಮಗುವಿಗೆ ಉಚಿತ ಶಿಕ್ಷಣ: ದಿಗಂಬರ ಜೈನ ಸಮುದಾಯ|  ಕುಸಿಯುತ್ತಿರುವ ಜೈನರ ಜನಸಂಖ್ಯೆ ಬಗ್ಗೆ ಸಮುದಾಯದ ಕಳವಳ

ಮುಂಬೈ[ಮಾ.06]: ದೇಶದಲ್ಲಿ ಕುಸಿಯುತ್ತಿರುವ ತಮ್ಮ ಜನಸಂಖ್ಯೆಯ ಬಗ್ಗೆ ಆತಂಕಗೊಂಡಿರುವ ಜೈನ ಸಮುದಾಯ, ತಮ್ಮ ಸಮುದಾಯದ ದಂಪತಿಗಳು ಮೂರನೇ ಮಗು ಹೆತ್ತರೆ ಆರ್ಥಿಕ ನೆರವು ಹಾಗೂ ಮೂರನೇ ಮಗುವಿಗೆ ಉಚಿತ ಶಿಕ್ಷಣ ಕೊಡಿಸುವುದಾಗಿ ಘೋಷಿಸಿದೆ.

ಕಳೆದ ವಾರ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ದಿಗಂಬರ ಜೈನ ಸಮುದಾಯದ ಪರಮೋಚ್ಚ ಸಮಿತಿಯ ಸಮ್ಮೇಳನದಲ್ಲಿ ‘ಹಮ್‌ ದೋ, ಹಮಾರೆ ತೀನ್‌’ ಎಂಬ ಘೋಷಣೆಯನ್ನು ಜೈನರು ಸ್ವೀಕರಿಸುವಂತೆ ಕರೆ ನೀಡಲಾಗಿದೆ. ಜೊತೆಗೆ ಮೂರನೇ ಮಗುವಿಗೆ ಜನ್ಮ ನೀಡುವ ದಂಪತಿಗೆ ಆರ್ಥಿಕ ನೆರವು ನೀಡುವುದು ಮತ್ತು ಆ ಮಗುವಿಗೆ ಸಮುದಾಯದ ವತಿಯಿಂದ ಉಚಿತ ಶಿಕ್ಷಣ ಕೊಡಿಸುವುದಾಗಿಯೂ ಘೋಷಿಸಲಾಗಿದೆ. ಸದ್ಯಕ್ಕೆ ಇದು ದಿಗಂಬರ ಜೈನರಿಗೆ ಮಾತ್ರ ಅನ್ವಯವಾಗಲಿದ್ದು, ಶೀಘ್ರದಲ್ಲೇ ಶ್ವೇತಾಂಬರ ಜೈನರಿಗೂ ಇದನ್ನು ಜಾರಿಗೊಳಿಸುವ ಚಿಂತನೆಯಿದೆ. ಇದಕ್ಕಾಗಿ ಜೈನ ಸಮುದಾಯದ ಜನರಿಂದ ಹಣ ಸಂಗ್ರಹಿಸಿ ನಿಧಿಯೊಂದನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

2001ರ ಜನಗಣತಿಯ ಪ್ರಕಾರ ನಮ್ಮ ದೇಶದಲ್ಲಿ ಜೈನರ ಒಟ್ಟು ಸಂಖ್ಯೆ 42 ಲಕ್ಷವಿತ್ತು. ಇದು 2011ರ ಜನಗಣತಿಯಲ್ಲಿ 44 ಲಕ್ಷಕ್ಕೆ ಏರಿಕೆಯಾಗಿದ್ದರೂ, ದೇಶದ ಒಟ್ಟಾರೆ ಜನಸಂಖ್ಯೆ 102 ಕೋಟಿಯಿಂದ 120 ಕೋಟಿಗೆ ಏರಿಕೆಯಾಗಿದ್ದಕ್ಕೆ ಹೋಲಿಸಿದರೆ ಜೈನರ ಜನಸಂಖ್ಯೆಯ ಬೆಳವಣಿಗೆ ಶೇ.0.03ರಷ್ಟುಕುಸಿತ ಕಂಡಿತ್ತು. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಹಿಂದು ಮಹಿಳೆಯರ ಸಂತಾನೋತ್ಪತ್ತಿ ದರ 2.3 ಹಾಗೂ ಮುಸ್ಲಿಂ ಮಹಿಳೆಯರ ಸಂತಾನೋತ್ಪತ್ತಿ ದರ 2.6 ಇದ್ದರೆ ಜೈನರ ಸಂತಾನೋತ್ಪತ್ತಿ ದರ 1.2 ಇರುವುದು ಕಂಡುಬಂದಿತ್ತು.

ಇದರಿಂದಾಗಿ ಕಳವಳಗೊಂಡಿರುವ ದಿಗಂಬರ ಜೈನರು, ತಮ್ಮ ಸಮುದಾಯದ ಯುವ ದಂಪತಿಗಳಿಗೆ ಹೆಚ್ಚೆಚ್ಚು ಮಕ್ಕಳನ್ನು ಹೆರುವಂತೆ ಕರೆ ನೀಡಿದ್ದಾರೆ. ಜೊತೆಗೆ ಜೈನರಲ್ಲಿ ಹೆಚ್ಚುತ್ತಿರುವ ವಿಚ್ಛೇದನದ ಪ್ರಮಾಣವನ್ನು ಕಡಿಮೆ ಮಾಡಲು ದಂಪತಿಗಳಿಗೆ ಕೌನ್ಸೆಲಿಂಗ್‌ ನಡೆಸುವುದಕ್ಕೂ ವ್ಯವಸ್ಥೆ ಮಾಡಿದ್ದಾರೆ.

click me!