ರೈಲಲ್ಲಿ ಸಿಕ್ಕಾಪಟ್ಟೆ ಲಗೇಜ್ ಒಯ್ದರೆ ದಂಡ ಬೀಳುತ್ತೆ..!

First Published Jun 5, 2018, 9:11 PM IST
Highlights

ಇನ್ನು ಮುಂದೆ ರೈಲುಗಳಲ್ಲಿ ಪ್ರಯಾಣ ಮಾಡುವಾಗ ನಿಮ್ಮ ಲಗೇಜ್‌ಗಳ ಬಗ್ಗೆ ಗಮನವಿರಲಿ. ಹೊರಡುವ ಮುನ್ನ ನಿಮ್ಮ ಲಗೇಜ್‌ ಎಷ್ಟು ತೂಕ ತೂಗುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಂಡರೆ ಒಳ್ಳೆಯದು. ಕಾರಣ, ಇನ್ಮುಂದೆ ರೈಲು ಪ್ರಯಾಣದ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ತೂಕದ ಲಗೇಜ್ ಕೊಂಡೊಯ್ದರೆ ದಂಡ ಹಾಕಲಾಗುತ್ತದೆ.

ನವದೆಹಲಿ(ಜೂ.5): ಭಾರತೀಯ ರೈಲ್ವೆ ಪ್ರಯಾಣಿಕರಿಗೊಂದು ಶಾಕಿಂಗ್ ಸುದ್ದಿ ನೀಡಿದ್ದು, ಇನ್ನು ಮುಂದೆ ವಿಮಾನ ಪ್ರಯಾಣದ ರೀತಿ ರೈಲ್ವೆಯಲ್ಲೂ ಹೆಚ್ಚುವರಿ ಲಗೇಜ್ ಕೊಂಡೊಯ್ದರೆ ದಂಡ ಬೀಳಲಿದೆ. ಬೋಗಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಲಗೇಜ್ ಸಾಗಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ತನ್ನ ಮೂರು ದಶಕಗಳಷ್ಟು ಹಳೆಯದಾದ ಲಗೇಜ್ ನಿಯಮಗಳನ್ನು ಕಟ್ಟು ನಿಟ್ಟಿನಿಂದ ಜಾರಿಗೊಳಿಸಲು ನಿರ್ಧರಿಸಿದೆ.

ಇನ್ನುಮುಂದೆ ಪ್ರಯಾಣಿಕರ ಬಳಿ ಹೆಚ್ಚುವರಿ ಲಗೇಜ್ ಪತ್ತೆಯಾದರೆ ಆರು ಪಟ್ಟು ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮಗಳ ಪ್ರಕಾರ, ಸ್ಲೀಪರ್ ದರ್ಜೆ ಪ್ರಯಾಣಿಕರು 40 ಕೆಜಿ ಮತ್ತು ದ್ವಿತಿಯ ದರ್ಜೆ ಪ್ರಯಾಣಿಕರು 35 ಕೆಜಿ ತೂಕದ ಲಗೇಜ್ ಅನ್ನು ಉಚಿತವಾಗಿ ಕೊಂಡೊಯ್ಯಬಹುದಾಗಿದೆ. ಹಣ ಪಾವತಿಸಿ ಗರಿಷ್ಠ 80 ಕೆಜಿ ಹಾಗೂ 70 ಕೆಜಿ ಲಗೇಜ್ ಕೊಂಡೊಯ್ಯಲು ಅವಕಾಶವಿದೆ. 

ಮೊದಲಿನಿಂದಲೂ ಈ ನಿಯಮಗಳು ಇವೆ. ಆದರೆ ಈಗ ಅದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಪ್ರಯಾಣಿಕರ ಬಳಿ ಹಣ ಪಾವತಿಸಿದ 40ಕೆಜಿಗೂ ಹೆಚ್ಚಿನ ಲಗೇಜ್ ಪತ್ತೆಯಾದರೆ ಅದರ ಆರು ಪಟ್ಟು ದಂಡ ವಿಧಿಸಲಾಗುವುದು ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ನಿರ್ದೇಶಕ ವೇದ್ ಪ್ರಕಾಶ್ ಹೇಳಿದ್ದಾರೆ.

click me!