
ಹೂಸ್ಟನ್[ಸೆ.22]: ಒಂದು ವಾರದ ಅಮೆರಿಕ ಪ್ರವಾಸ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ ಹೊಸ ಇತಿಹಾಸವೊಂದನ್ನು ಸೃಷ್ಟಿಸಲಿದ್ದಾರೆ. ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್‌ನಲ್ಲಿ ‘ಹೌಡಿ, ಮೋದಿ’ ಎಂಬ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ.
50 ಸಾವಿರ ಮಂದಿ ಈ ಸಮಾವೇಶಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿದೇಶಿ ಚುನಾಯಿತಿ ಪ್ರತಿನಿಧಿಯ ಭಾಷಣ ಆಲಿಸಲು ಅಮೆರಿಕದಲ್ಲಿ ಇಷ್ಟೊಂದು ಜನ ಸೇರಿದ ಇತಿಹಾಸವೇ ಇಲ್ಲ. ಕ್ರೈಸ್ತರ ಪರಮೋಚ್ಚ ಗುರು ಪೋಪ್ ಹೊರತುಪಡಿಸಿ ಅತಿ ಹೆಚ್ಚು ಜನರನ್ನುದ್ದೇಶಿಸಿ ಭಾಷಣ ಮಾಡುತ್ತಿರುವ ಮೊದಲ ವಿಶ್ವ ನಾಯಕ ಮೋದಿ ಅವರಾಗಿದ್ದಾರೆ ಎಂಬುದು ಈ ರಾರಯಲಿಯ ವಿಶೇಷ.
ಭಾನುವಾರ ರಾತ್ರಿ 8.30ಕ್ಕೆ (ಭಾರತೀಯ ಕಾಲಮಾನ) ‘ಹೌಡಿ, ಮೋದಿ’ ಕಾರ್ಯಕ್ರಮ ಪ್ರಾರಂಭವಾಗಲಿದೆ. ಅಮೆರಿಕದ ವಿವಿಧೆಡೆಯ 400 ಭಾರತೀಯ ಮೂಲದ ಕಲಾವಿದರು ಒಂದೂವರೆ ತಾಸು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅದಾದ ಬಳಿಕ ರಾತ್ರಿ 10ಕ್ಕೆ ಮೋದಿ ಅವರ ಭಾಷಣ ಪ್ರಾರಂಭವಾಗಲಿದೆ. ಮೋದಿ ಅವರ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಪಾಲ್ಗೊಳ್ಳುತ್ತಿರುವುದು ವಿಶೇಷ. ಇದೇ ಕಾರ್ಯಕ್ರಮದಲ್ಲಿ ಮಹತ್ವದ ಘೋಷಣೆಯೊಂದನ್ನು ಟ್ರಂಪ್ ಪ್ರಕಟಿಸುವ ನಿರೀಕ್ಷೆ ಇದೆ.
3 ತಾಸು ಅವಧಿಯ ಕಾರ್ಯಕ್ರಮಕ್ಕೆ ಮೋದಿ ಅವರನ್ನು ಸ್ವಾಗತಿಸಲು ಹೂಸ್ಟನ್‌ನ ‘ಎನ್‌ಆರ್‌ಜಿ ಫುಟ್ಬಾಲ್ ಮೈದಾನ’ ಸಜ್ಜಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ 1500 ಮಂದಿ ಹಗಲಿರುಳೆನ್ನದೇ ದುಡಿಯುತ್ತಿದ್ದಾರೆ. ‘ನಮೋ ಎಗೇನ್’ ಎಂಬ ಸಾಲುಗಳುಳ್ಳ ಟೀ ಶರ್ಟ್ ಧರಿಸಿರುವ ಸ್ವಯಂ ಸೇವಕರು ‘ನಮೋ ಎಗೇನ್’ (ನಮೋ ಮತ್ತೊಮ್ಮೆ) ಎಂಬ ಘೋಷಣೆಯೊಂದಿಗೆ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮದಲ್ಲಿ 600 ಸಂಘಟನೆಗಳು ತೊಡಗಿಸಿಕೊಂಡಿವೆ.
ಭಾರತ- ಅಮೆರಿಕ ವ್ಯಾಪಾರ ಸಂಬಂಧಕ್ಕೆ ಟೆಕ್ಸಾಸ್ ರಾಜ್ಯವೊಂದೇ ಶೇ.10ರಷ್ಟುಕೊಡುಗೆ ನೀಡುತ್ತಿದೆ. ಟೆಕ್ಸಾಸ್ ಹಾಗೂ ಭಾರತ ನಡುವೆ 50 ಸಾವಿರ ಕೋಟಿ ರು. ಮೌಲ್ಯದ ವಸ್ತುಗಳ ವಿನಿಮಯವಾಗಿದೆ.
ಕಾಯಕ್ರಮ ಪಟ್ಟಿ
ರಾತ್ರಿ 8.30: ಸಾಂಸ್ಕೃತಿಕ ಕಾರ್ಯಕ್ರಮ ಆರಂಭ
ರಾತ್ರಿ 09.30: ಅಮೆರಿಕ ಅಧ್ಯಕ್ಷ ಟ್ರಂಪ್ ಭಾಷಣ
ರಾತ್ರಿ 10.00: ಪ್ರಧಾನಿ ಮೋದಿ ಭಾಷಣ ಆರಂಭ
ಏನಿದು ಹೌಡಿ ಮೋದಿ?
ಅಮೆರಿಕದ ನೈಋುತ್ಯ ಸೀಮೆಯಲ್ಲಿ ಸ್ನೇಹಿತರು ಎದುರಾದಾಗ ‘ಹೌಡಿ’ ಎಂದು ಮಾತನಾಡಿಸುವ ಪದ್ಧತಿ ಚಾಲ್ತಿಯಲ್ಲಿದೆ. ಹೌಡಿ ಎಂಬುದು ‘ಹೌ ಡು ಯು ಡು?’ (ಹೇಗಿದ್ದೀರಿ) ಎಂಬುದರ ಸಂಕ್ಷಿಪ್ತ ರೂಪ. ಈಗ ಅದೇ ಹೌಡಿ ಹೆಸರಿನಲ್ಲಿ ಮೋದಿ ಸಮಾವೇಶವನ್ನು ಆಯೋಜಿಸಲಾಗಿದೆ.
50000 ಜನ: ಮೋದಿ ಸಮಾವೇಶಕ್ಕೆ ನೋಂದಣಿ ಮಾಡಿಕೊಂಡವರು
400 ಕಲಾವಿದರು: ಭಾರತೀಯ ಮೂಲದವರ ಸಾಂಸ್ಕೃತಿಕ ಕಾರ‍್ಯಕ್ರಮ
90 ನಿಮಿಷ: ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಸಮಯ
600 ಸಂಘಟನೆ: ‘ಹೌಡಿ, ಮೋದಿ’ ಬೃಹತ್ ಕಾರ್ಯಕ್ರಮಕ್ಕೆ ಸಾಥ್
1650 ಮಂದಿ: ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ದುಡಿತ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.