
ಬೆಂಗಳೂರು(ಡಿ.02): ಕೇಂದ್ರ ಸರ್ಕಾರ 500 ಹಾಗೂ 1000 ನೋಟ್ ಅಮಾನ್ಯಗೊಳಿಸಿದ ನಂತರದ ಬೆಳವಣಿಗೆ ದಿನೇ ದಿನೇ ಕುತೂಹಲ ಮೂಡಿಸ್ತಿದೆ. ಐಟಿ ಇಲಾಖೆ ಅಧಿಕಾರಿಗಳು ಹಲವು ಕಾಳಧನಿಕರಿಗೆ ಶಾಕ್ ನೀಡಿದ್ದಾರೆ. ಸಿಎಂ ಸಿದ್ರಾಮಯ್ಯ ಹಾಗೂ ಸಚಿವ ಮಹಾದೇವಪ್ಪ ಆಪ್ತರ ಮನೆ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಹೊಸ ನೋಟುಗಳ ಕಂತೆಗಳನ್ನು ವಶಪಡಿಸಿಕೊಂಡಿದ್ದಾರೆ. ತಮ್ಮ ಆಪ್ತರನ್ನು ಸಮರ್ಥಿಸಿಕೊಂಡು ಬರ್ತಿದ್ದ ಸಿಎಂ ಮತ್ತು ಸಚಿವರು ಈಗ ಏನು ಹೇಳುತ್ತಾರೆ ಎಂಬುವುದೇ ಸದ್ಯಕ್ಕಿರುವ ಪ್ರಶ್ನೆ.
ಸಿಎಂ, ಸಚಿವ ಮಹಾದೇವಪ್ಪ ಆಪ್ತರಿಗೆ ಐಟಿ ಶಾಕ್!: 4.7 ಕೋಟಿ ರೂಪಾಯಿ ಹೊಸ ನೋಟುಗಳ ಪತ್ತೆ!
ಕೇಂದ್ರ ಸರ್ಕಾರ 500 ಹಾಗೂ 1000 ಅಮಾನ್ಯಗೊಳಿಸಿದ ನಂತರದ ವ್ಯವಹಾರಗಳ ಮೇಲೆ ತೀವ್ರ ನಿಗಾ ಇರಿಸಿರುವ ಆದಾಯ ತೆರಿಗೆ ಇಲಾಖೆ ಕಳೆದ 2 ದಿನಗಳ ಕಾಳಧನಿಕರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಸಿಎಂ ಸಿದ್ದರಾಮಯ್ಯ, ಸಚಿವ ಹೆಚ್.ಸಿ.ಮಹಾದೇವಪ್ಪ ಅವರ ಆಪ್ತರೆಂದೇ ಗುರುತಿಸಿಕೊಂಡಿರುವ ರಾಜ್ಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಜಯಚಂದ್ರ ಹಾಗೂ ಕಾವೇರಿ ನಿಗಮದ ಎಂಡಿ ಚಿಕ್ಕರಾಯಪ್ಪ ಸೇರಿ ಹಲವು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ. ಕಳೆದ ಎರಡು ದಿನಗಳಿಂದ ದಾಳಿ ಮುಂದುವರಿದಿದ್ದು, ಇಬ್ಬರು ಅಧಿಕಾರಿಗಳ ಮನೆಯಲ್ಲಿ 6 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಇದರಲ್ಲಿ 4.7 ಕೋಟಿ ಹೊಸ ನೋಟುಗಳ ಕಂತೆಗಳು ಪತ್ತೆಯಾಗಿವೆ. ಅಲ್ಲದೆ, ದಾಖಲೆಯಿಲ್ಲದ 7 ಕೆಜಿ ಚಿನ್ನಾಭರಣ ಪತ್ತೆಯಾಗಿದೆ ಅಂತ ಐಟಿ ಇಲಾಖೆ ಪ್ರಕಟಣೆ ಹೊರಡಿಸಿದೆ.
2000 ನೋಟುಗಳ ಚಲಾವಣೆಗೆ ಬಂದು ಕೇವಲ 22 ದಿನಗಳು: ಭಾರಿ ಪ್ರಮಾಣದ ಹೊಸ ನೋಟುಗಳ ಸಂಗ್ರಹ ಹೇಗಾಯ್ತು?
ಕೇಂದ್ರ ಸರ್ಕಾರ 500,1000 ನೋಟುಗಳನ್ನು ಅಮಾನ್ಯಗೊಳಿಸಿ 2000ದ ನೂತನ ನೋಟುಗಳನ್ನ ಜಾರಿಗೊಳಿಸಿ ಕೇವಲ 22 ದಿನಗಳು ಮಾತ್ರ ಕಳೆದಿವೆ. ಇಷ್ಟು ಕಡಿಮೆ ಅವದಿಯಲ್ಲಿ ಕೋಟ್ಯಾಂತರ ರೂಪಾಯಿ ಸಗ್ರಹ ಹೇಗೆ ಸಾಧ್ಯ. ಈ ಹಣ ಭ್ರಷ್ಟಾಚಾರದಿಂದ ಸಂಗ್ರಹಿಸಿದ್ದಾ? ಅಥಾವ ಸಚಿವರಿಗೆ ಸೇರಿದ್ದಾ..? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ. ಸಾಮಾನ್ಯವಾಗಿ ವ್ಯಕ್ತಿಯೊಬ್ಬನಿಗಗೆ ದಿನಕ್ಕೆ ಕೇವಲ 2500 ರೂಪಾಯಿ ಮಾತ್ರ ನೂತನ ಕರೆನ್ಸಿ ಲಭ್ಯವಾಗುತ್ತದೆ. ಆದರೆ, ಇಷ್ಟೊಂದು ಹಣ ಹೇಗೆ ಸಂಗ್ರಹಿಸಲಾಗಿದೆ ಎಂಬ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ವಿಶೇಷವಾಗಿ ಟಿ.ಎನ್.ಚಿಕ್ಕರಾಯಪ್ಪ ಸದ್ಯ ಕಾವೇರಿ ನೀರಾವರಿ ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಇವರ ಮೇಲೆ ನೂರೆಂಟು ಆರೋಪಗಳಿವೆ. ಮೂಲತಃ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಕ್ಕರಾಯಪ್ಪ ಆತ ಬೆಳೆದು ಬಂದಿದ್ದೇ ಆಶ್ಚರ್ಯ. ಜೊತೆಗೆ ಭಾರೀ ಆರೋಪಗಳು ಇವರ ಮೇಲಿವೆ
-ಬೋಗಸ್ ಬಿಲ್ ಆರೋಪದಡಿಯಲ್ಲಿ 1995-96ರಲ್ಲಿ ಅಮಾನತು
-ಬಿಬಿಎಂಪಿಯಲ್ಲಿ ರಾತೋರಾತ್ರಿ ದಾಖಲೆಗಳ ತಿದ್ದುಪಡಿ ಆರೋಪ
-ಆಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯರಿಂದ ಅಮಾನತಿಗೆ ಆಗ್ರಹ
-ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸದಸ್ಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ
-ಇ-ಟೆಂಡರ್ ಮತ್ತು ಬೋಗಸ್ ದಾಖಲೆ ಸೃಷ್ಟಿಸಿದ ಆರೋಪ
-ಪ್ರಿ-ಕ್ವಾಲಿಫಿಕೇಷನ್ ಟೆಂಡರ್ನಲ್ಲಿ ಲೋಪ
-ರಸ್ತೆ ನಿರ್ಮಾಣ ಕಾಮಗಾರಿ, ಕೆರೆ ನಿರ್ವಹಣೆ, ಮೇಲು ಸೇತುವೆ
-ವಸತಿ ಯೋಜನೆ ಸೇರಿ ಬಹುಮುಖ್ಯ ಕಾಮಗಾರಿಗಳ ನಿರ್ವಹಣೆಯಲ್ಲಿ ವಿಳಂಬ ಆರೋಪ
-ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಪಿಡಬ್ಲ್ಯುಡಿ ಇಲಾಖೆಗೆ ಕಾರ್ಯದರ್ಶಿ
-ಈ ಅವಧಿಯಲ್ಲಿ ನಡೆದಿದ್ದ ಹಲವು ಅವ್ಯವಹಾರಗಳು ಮತ್ತಷ್ಟು ಬೆಳಕಿಗೆ
-45 ಮಂದಿ ಕಾಂಗ್ರೆಸ್ ಶಾಸಕರಿಂದ ರಾಜ್ಯ ಉಸ್ತುವಾರಿ ಹೊತ್ತಿದ್ದ ದಿಗ್ವಿಜಯ್ ಸಿಂಗ್ಗೆ ದೂರು
-ಈ ಬಗ್ಗೆ ಬೆಳಗಾವಿಯಲ್ಲಿ ಈ ಹಿಂದೆ ನಡೆದಿದ್ದ ಅಧಿವೇಶನದಲ್ಲಿ ಗದ್ದಲ
-ಈಗ ಕಾವೇರಿ ನೀರಾವರಿ ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಣೆ
-ಎಸ್.ಸಿ.ಜಯಚಂದ್ರ , KSHDP ಮುಖ್ಯ ಯೋಜನಾಧಿಕಾರಿ
-ಹೆದ್ದಾರಿ ಕಾಮಾಗಾರಿಯಲ್ಲಿ ಭಾರೀ ಗೋಲಾಮಾಲ್!?
ರಾಜ್ಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಜಯಚಂದ್ರನ ಮನೆಯಲ್ಲಿ ಅಧಿಕ ಪ್ರಮಾಣದ ನಗದು ಹಾಗೂ ಆಸ್ತಿ ಪತ್ತೆಯಾಗಿದೆ. ಜಯಚಂದ್ರ ಪುತ್ರ ತ್ರಿಜೇಶ್ ಹೆಸರಲ್ಲಿ ಐಷಾರಾಮಿ ಕಾರುಗಳು, ಬಂಗಲೆ ಹಾಗೂ ನಿವೇಶನಗಳ ದಾಖಲೆಗಳು ಲಭ್ಯವಾಗಿದ್ದು, ಅವುಗಳನ್ನ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.. ಇನ್ನಿಬ್ಬರು ಗುತ್ತಿಗೆದಾರರ ಮನೆಯ ಮೇಲೂ ದಾಳಿ ನಡೆಸಿರೋ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಅಲ್ಲದೆ, ಹಣ ಮೂಲದ ಸರಿಯಾದ ಮಾಹಿತಿ ಸಿಗದ ಕಾರಣ ದಾಳಿಯನ್ನು ಮುಂದುವರಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಇಷ್ಟೆಲ್ಲಾ ಆರೋಪಗಳಿದ್ದರೂ ಈ ಇಬ್ಬರೂ ಅಧಿಕಾರಿ ಆಯಕಟ್ಟಿನ ಜಾಗದಲ್ಲೇ ಆರಾಮಾಗಿ ಕೆಲಸ ಮಾಡ್ತಿದ್ದಾರೆ. ಆದ್ರೆ ಇವರು ವಿರುದ್ಧ ಕ್ರಮ ಕೈಗೊಳ್ಳಬೇಕಾದವರು ಮಾತ್ರ ಕಂಡು ಕಾಣದಂತೆ ಇದ್ದಾರೆ. ಇವರಿಬ್ಬರೂ ಸಿಎಂ ಹಾಗೂ ಸಚಿವ ಮಹದೇವಪ್ರಸಾದ್ ಅವರ ಆಪ್ತರು ಅಂತಲೇ ಹೇಳಲಾಗ್ತಿದೆ. ಇದುವರೆಗೂ ಇವರ ವಿರುದ್ಧ ಕ್ರಮ ಕೈಗೊಳ್ಳಲು ಯಾರು ಮುಂದಾಗಿಲ್ಲ. ಈಗ ಇವರಿಬ್ಬರ ಮನೆಯಲ್ಲಿದ್ದ ಕಂತೆ ಕಂತೆ 2000 ರೂ. ನೋಟುಗಳನ್ನು ಬಯಲಿಗಿಟ್ಟಿದ್ದಾರೆ. ಈ ದುಡ್ಡು ಎಲ್ಲಿಂದ ಬಂತು ಅನ್ನೋದೇ ಈಗ ದೊಡ್ಡ ಪ್ರಶ್ನೆ.. ಈಗ ಇವರಿಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇಂಥ ಅಧಿಕಾರಿಗಳನ್ನು ಈಗ ಸಿಎಂ ಹಾಗೂ ಸಚಿವ ಮಹದೇವಪ್ರಸಾದ್ ಮತ್ತೆ ಸಮರ್ಥಿಸಿಕೊಳ್ತಾರೋ... ಇಲ್ಲ ಈ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗ್ತಾರೋ ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.