
ಬೆಂಗಳೂರು(ಡಿ. 28): ಕಪ್ಪುಹಣ ಮಟ್ಟ ಹಾಕುವ ಈ ಸಮರದಲ್ಲಿ ರಾಜಕೀಯ ಪಕ್ಷಗಳೇ ಕಪ್ಪು ಹಣ ಬಿಳಿ ಮಾಡಲು ವೇದಿಕೆಯೇನಾದ್ರೂ ಆಗುತ್ತಿದೆಯಾ? ಈ ಚರ್ಚೆಯೊಂದಿಗೆ ರಾಜಕೀಯ ಪಕ್ಷಗಳ ಖಜಾಂಚಿಗಳನ್ನೇ ಸಂಪರ್ಕಿಸಿ ನವೆಂಬರ್ 8ರ ನಂತರ ರಾಜಕೀಯ ಪಕ್ಷಗಳಿಗೆ ಬಂದಿರುವ ದೇಣಿಗೆಯ ವಿವರವನ್ನ ಸುವರ್ಣನ್ಯೂಸ್ ಕೇಳಿತು. ಆಗ ಒಂದೊಂದು ಪಕ್ಷದವರಿಂದ ಒಂದೊಂದು ರೀತಿಯ ಪ್ರತಿಕ್ರಿಯೆ ಕೇಳಿ ಬಂತು.
ಕೆಪಿಸಿಸಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಸಾವಿರ ಮತ್ತು ಐನೂರರ ನೋಟ್ ಬ್ಯಾನ್ ಮಾಡಿದ ನಂತರ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ಬರುವ ಪ್ರಮಾಣ ಕಡಿಮೆಯಾಗಿದೆ. ಪಕ್ಷಕ್ಕೆ ಎಷ್ಟಷ್ಟು ಹಣ ಬಂದಿದೆ, ಹೋಗಿದೆ ಅನ್ನೋ ಎಲ್ಲ ಲೆಕ್ಕ ನನಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಅಧ್ಯಕ್ಷರೇ ಅವೆಲ್ಲವನ್ನೂ ನೋಡಿಕೊಳ್ಳುತ್ತಾರೆ... ಇವೆಲ್ಲವನ್ನೂ ಖಜಾಂಚಿ ಗಮನಕ್ಕೆ ತರಬೇಕೆಂದಿಲ್ಲ... ಆದ್ರೆ, ನೋಟ್ ಬ್ಯಾನ್ ಮಾಡಿದ ಮೇಲೆ ಜನರಿಗೆ ಹಣವೇ ಸಿಗುತ್ತಿಲ್ಲ. ಸಾಮಾನ್ಯ ಜನರಿಗಷ್ಟೇ ಅಲ್ಲ, ಶ್ರೀಮಂತರಿಗೂ ವಾರಕ್ಕೆ ಕೇವಲ 24 ಸಾವಿರ ರೂ ತೆಗೆಯಲು ಅವಕಾಶ ಇದೆ. ಹೀಗಾಗಿ ಶೇಕಡಾ 90 ರಷ್ಟು ದೇಣಿಗೆ ಬರೋದು ಕಡಿಮೆಯಾಗಿದೆ ಎಂದು ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ಹೇಳುತ್ತಾರೆ.
ಬಿಜೆಪಿ:
ನಾವು ಪಕ್ಷಕ್ಕೆ ಬರುವ ದೇಣಿಗೆಯ ವಿವರವನ್ನ ಆದಾಯ ತೆರಿಗೆ ಇಲಾಖೆಗೆ ನೀಡುತ್ತೇವೆ. ಎಲ್ಲವೂ ರಾಷ್ಟ್ರೀಯ ಬಿಜೆಪಿಯ ವ್ಯಾಪ್ತಿಯಲ್ಲೇ ಇದ್ದು, ನಾವು ಬಹಿರಂಗಪಡಿಸಲಾಗದು ಎಂದು ಬಿಜೆಪಿ ಖಜಾಂಚಿ ಸುಬ್ಬನರಸಿಂಹ ತಿಳಿಸುತ್ತಾರೆ.
ಜೆಡಿಎಸ್:
"ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ದೇಣಿಗೆ ಕೊಡುವವರು ಯಾರೂ ಕೂಡಾ ಇಲ್ಲ, ಇರುವ ಖರ್ಚು ವೆಚ್ಚಗಳನ್ನು ಪಕ್ಷದೊಳಗೇ ಸರಿದೂಗಿಸಿಕೊಂಡು ಹೋಗುತ್ತಿದ್ದು, ಡೀಮಾನಿಟೈಸೇಷನ್ ಬಳಿಕ ಪಕ್ಷಕ್ಕೆ ಯಾವುದೇ ಪ್ರತಿಕೂಲ ಪರಿಣಾಮ ಆಗಿಲ್ಲ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್'ಗೆ ದೊಡ್ಡ ಪ್ರಮಾಣದಲ್ಲಿ ದೇಣಿಗೆ ಹರಿದು ಬರುತ್ತಿದ್ದು, ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಅಲ್ಲಿ ಹೆಚ್ಚಿನ ಅವಕಾಶವಿದೆ. ಜೆಡಿಎಸ್ಗೆ ದೇಣಿಗೆ ನೀಡುವವರೇ ಇಲ್ಲ" ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ.
(ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ಖಜಾಂಚಿಯೇ ಇಲ್ಲದಿರುವುದರಿಂದ ರಾಜ್ಯಾಧ್ಯಕ್ಷರು ನಮ್ಮ ಪ್ರಶ್ನೆಗೆ ಉತ್ತರಿಸಿದರು)
ಕೈತೊಳೆದುಕೊಂಡ ಪಕ್ಷಗಳು:
ಕಾಂಗ್ರೆಸ್ ಖಜಾಂಚಿಯು ದೇಣಿಗೆ ಬರೋದು ಕಡಿಮೆಯಾಗಿದೆ. ಆದರೆ ಆ ಎಲ್ಲ ಲೆಕ್ಕ ನನ್ನ ಬಳಿ ಇಲ್ಲ ಎಂದರೆ ರಾಜ್ಯ ಬಿಜೆಪಿ ಖಜಾಂಚಿಯು ಎಲ್ಲವೂ ರಾಷ್ಟ್ರೀಯ ಬಿಜೆಪಿಯ ವ್ಯಾಪ್ತಿಯಲ್ಲಿದೆ ಅಂದ್ರು. ಇನ್ನು, ಜೆಡಿಎಸ್ ನಾಯಕರಂತೂ ದೊಡ್ಡ ದೇಣಿಗೆ ಕೊಡುವವರೇ ಇಲ್ಲ ಅಂದು ಕೈತೊಳೆದುಕೊಂಡ್ರು. ಒಟ್ಟಾರೆ, ಮೂರೂ ಪಕ್ಷಗಳೂ ಕೂಡ ದೇಣಿಗೆ ನೀಡಿದವರ ವಿವರ ನೀಡಲು ನಾನಾ ಕಾರಣ ನೀಡಿ ನಿರಾಕರಿಸಿವೆ.
- ಪೊಲಿಟಿಕಲ್ ಬ್ಯೂರೋ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.